17 ವರ್ಷದ ಯುವತಿಯ ಸಾಮೂಹಿಕ ಅತ್ಯಾಚಾರ, ಸಜೀವ ದಹನ
ಪೊಲೀಸರಿಗೆ ದೂರು ನೀಡಿದರೂ ನೆರವು ಸಿಗಲಿಲ್ಲ ಎಂದ ಯುವತಿಯ ತಾಯಿ
ಸಾಂದರ್ಭಿಕ ಚಿತ್ರ
ಅಗರ್ತಲ: ಹದಿನೇಳು ವರ್ಷದ ಯುವತಿಯೊಬ್ಬಳನ್ನು ಹಲವು ದಿನಗಳ ಕಾಲ ಕೂಡಿ ಹಾಕಿ ಪ್ರಿಯಕರ ಹಾಗೂ ಆತನ ಸ್ನೇಹಿತರು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಬಳಿಕ ಬೆಂಕಿ ಹಚ್ಚಿ ಸಾಯಿಸಿದ ಪ್ರಕರಣ ಬೆಳಕಿಗೆ ಬಂದಿದೆ.
ದಕ್ಷಿಣ ತ್ರಿಪುರಾದ ಶಾಂತಿಬಜಾರ್ ಪ್ರದೇಶದಲ್ಲಿ ಪ್ರಿಯಕರ ಹಾಗೂ ಆತನ ತಾಯಿ ಯುವತಿಗೆ ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದ್ದು, ಶೇಕಡ 90ರಷ್ಟು ಸುಟ್ಟಗಾಯಗಳಾಗಿದ್ದ ಆಕೆಯನ್ನು ಆಸ್ಪತ್ರೆಗೆ ಕರೆತರುವ ವೇಳೆಗೆ ಮೃತಪಟ್ಟಿದ್ದಳು ಎಂದು ಪೊಲೀಸರು ಹೇಳಿದ್ದಾರೆ.
ಬೆಂಕಿ ಹಚ್ಚಲ್ಪಟ್ಟ ಯುವತಿಯನ್ನು ನೆರೆಮನೆಯವರು ರಕ್ಷಿಸುವ ಪ್ರಯತ್ನ ಮಾಡಿ ಜಿ.ಪಿ.ಪಂತ್ ಆಸ್ಪತ್ರೆಗೆ ಕರೆತಂದರು. ಯುವತಿಯನ್ನು ಅಪಹರಿಸಿ ಆರೋಪಿ ಹಣಕ್ಕಾಗಿ ಎರಡು ತಿಂಗಳಿಂದ ಒತ್ತೆ ಇಟ್ಟುಕೊಂಡಿದ್ದ ಎಂದು ಪೊಲೀಸರು ವಿವರಿಸಿದ್ದಾರೆ. ಯುವತಿಯ ಸಾವಿನ ಸುದ್ದಿ ಹರಡುತ್ತಿದ್ದಂತೇ ಸಾರ್ವಜನಿಕರು ಆಸ್ಪತ್ರೆ ಎದುರು ಗುಂಪು ಸೇರಿ, ಆರೋಪಿ ಹಾಗೂ ಆತನ ತಾಯಿಯ ಮೇಲೆ ಹಲ್ಲೆ ನಡೆಸಿದರು.
ಆರೋಪಿಯನ್ನು ಅಜಯ್ ರುದ್ರಪಾಲ್ ಎಂದು ಗುರುತಿಸಲಾಗಿದ್ದು, ಯುವತಿಯ ಬಿಡುಗಡೆಗೆ 50 ಸಾವಿರ ರೂಪಾಯಿ ಹಣ ನೀಡುವಂತೆ ಒತ್ತಾಯಿಸಿದ್ದ, ಶುಕ್ರವಾರ ಕೇವಲ 17 ಸಾವಿರ ರೂಪಾಯಿ ಹೊಂದಿಸಿ ಆತನಿಗೆ ನೀಡಲು ಸಾಧ್ಯವಾಯಿತು. ಇದರಿಂದ ಸಿಟ್ಟುಗೊಂಡ ಆರೋಪಿ ಬೆಂಕಿ ಹಚ್ಚಿ ಸಾಯಿಸಿದ್ದಾಗಿ ಮೃತಳ ಕುಟುಂಬದವರು ದೂರಿದ್ದಾರೆ.
ಮುಖ್ಯ ಆರೋಪಿಯನ್ನು ಬಂಧಿಸಲಾಗಿದ್ದು, ಶಾಂತಿಬಜಾರ್ ಠಾಣೆಗೆ ಕರೆತರಲಾಗಿದೆ. ತನಿಖೆ ನಡೆಯುತ್ತಿದೆ ಎಂದು ದಕ್ಷಿಣ ತ್ರಿಪುರಾ ಎಸ್ಪಿ ಜಲ್ಸಿಂಗ್ ಮೀನಾ ಹೇಳಿದ್ದಾರೆ. ಯುವತಿ ಹಾಗೂ ಆರೋಪಿಗೆ ಸಾಮಾಜಿಕ ಜಾಲತಾಣದ ಮೂಲಕ ದೀಪಾವಳಿ ಬಳಿಕ ಪರಿಚಯವಾಗಿದೆ. ಆ ಬಳಿಕ ಯುವಕ ಆಕೆಯ ಮನೆಗೆ ಭೇಟಿ ನೀಡಿ ಮದುವೆ ಪ್ರಸ್ತಾವ ಮುಂದಿಟ್ಟ. ಆ ಬಳಿಕ ಆಕೆಯನ್ನು ಅಪಹರಿಸಿ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದ. ಬಂಧನದ ವೇಳೆ ಯುವಕ ಹಾಗೂ ಆತನ ಸ್ನೇಹಿತರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ವಿವರಿಸಿದ್ದಾರೆ.
ಯುವತಿಯ ಅಪಹರಣವಾದ ತಕ್ಷಣ ಪೊಲೀಸರಿಗೆ ದೂರು ನೀಡಲಾಗಿತ್ತು. ಎರಡನೇ ಬಾರಿ ಹಣಕ್ಕೆ ಬೇಡಿಕೆ ಇಟ್ಟಾಗಲೂ ಪೊಲೀಸರ ಗಮನಕ್ಕೆ ತರಲಾಗಿತ್ತು. ಆದರೆ ಯಾವ ನೆರವೂ ಸಿಗಲಿಲ್ಲ ಎಂದು ಯುವತಿಯ ತಾಯಿ ದೂರಿದ್ದಾರೆ.