ಎನ್ ಕೌಂಟರ್ ಗೆ ಕಾರಣವಾದ ಅಪರಾಧ ಸನ್ನಿವೇಶ ಮರುಸೃಷ್ಟಿಗೆ 'ಮೇಲಿನಿಂದ' ಒಪ್ಪಿಗೆ ಇತ್ತು: ತೆಲಂಗಾಣ ಸಚಿವ

Photo: facebook.com/TalasaniTRSofficial
ಹೈದರಾಬಾದ್: ಪಶುವೈದ್ಯೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಬೆಂಕಿ ಹಚ್ಚಿ ಸಾಯಿಸಿದ ಆರೋಪಿಗಳನ್ನು ಎನ್ ಕೌಂಟರ್ ನಲ್ಲಿ ಹತ್ಯೆ ಮಾಡಿದ ಘಟನೆ ಬಗ್ಗೆ ತೆಲಂಗಾಣದ ಸಚಿವರೊಬ್ಬರು ಹೇಳಿಕೆ ನೀಡಿದ್ದಾರೆ. ಚಂದ್ರಶೇಖರ ರಾವ್ ನೇತೃತ್ವದ ರಾಜ್ಯ ಸರ್ಕಾರದ ಹಿರಿಯ ಸಚಿವರೊಬ್ಬರು, 'ಈ ಎನ್ಕೌಂಟರ್ ಇಡೀ ದೇಶಕ್ಕೆ ಪ್ರಬಲ ಸಂದೇಶ' ಎಂದು ಬಣ್ಣಿಸಿದ್ದಾರೆ.
ಭಾರತದ ನ್ಯಾಯಾಂಗ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಲೇ ಇರುವುದರಿಂದ ನ್ಯಾಯ ಸಿಗುತ್ತದೆ ಎಂಬ ಅನುಮಾನ ಇತ್ತು ಹಾಗೂ ತಕ್ಷಣದ ಕ್ರಮಕ್ಕೆ ಒತ್ತಡ ಇತ್ತು ಎಂದು ಅವರು ಬಹಿರಂಗಪಡಿಸಿದ್ದಾರೆ. ಇದರ ಕೀರ್ತಿ ಮುಖ್ಯಮಂತ್ರಿಗೆ ಸಲ್ಲುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ರಾಜ್ಯದ ಪಶುಸಂಗೋಪನೆ ಖಾತೆ ಸಚಿವ ತಲಸನಿ ಶ್ರೀನಿವಾಸ ಯಾದವ್ ಈ ಬಗ್ಗೆ ಹೇಳಿಕೆ ನೀಡಿ, "ಅಪರಾಧ ಸನ್ನಿವೇಶದ ಮರುಸೃಷ್ಟಿಗೆ ಮೇಲಿನವರ ಅನುಮತಿ ಇಲ್ಲದಿದ್ದರೆ ಈ ಎನ್ ಕೌಂಟರ್ ನಡೆಯುತ್ತಿರಲಿಲ್ಲ" ಎಂದು ಅಭಿಪ್ರಾಯಪಟ್ಟಿದ್ದಾರೆ.
ಉನ್ನತ ನಾಯಕರ ಗಮನಕ್ಕೆ ಬಾರದೇ ಈ ಎನ್ ಕೌಂಟರ್ ನಡೆದಿದ್ದರೆ ಏನಾಗುತ್ತಿತ್ತು ಎಂದು ಕೇಳಿದ ಪ್ರಶ್ನೆಗೆ, "ನಿಜ, ಅಪರಾಧ ದೃಶ್ಯದ ಮರುಸೃಷ್ಟಿ ಮೇಲಿನವರ ಸೂಚನೆ ಮೇರೆಗೆ ನಡೆದಿದೆ. ಶೇಕಡ 100ರಷ್ಟು ನಿಜ. ತಕ್ಷಣದ ಕ್ರಮ ಕೈಗೊಳ್ಳಲು ತೆಲಂಗಾಣ ರಾಜ್ಯ ಪ್ರಭಾವಿ" ಎಂದು ಪ್ರತಿಕ್ರಿಯಿಸಿದರು.
ಇದಕ್ಕೆ ಸಿಎಂ ಅನುಮತಿ ಇತ್ತೇ ಎಂದು ಮತ್ತೆ ಪ್ರಶ್ನಿಸಿದಾಗ, "ಅನುಮತಿ ಅಲ್ಲ, ಆದರೆ ಪೊಲೀಸರು ಕ್ರಮ ಕೈಗೊಳ್ಳಲೇಬೇಕಾದಾಗ ನಾವು ಏನು ಮಾಡಲು ಸಾಧ್ಯ? ಅನುಮತಿ ಅಲ್ಲ; ತಕ್ಷಣದ ಕ್ರಮಕ್ಕೆ ಒತ್ತಡ ಇತ್ತು" ಎಂದು ಸಂತ್ರಸ್ತೆ ಯುವತಿ ಉದ್ಯೋಗದಲ್ಲಿದ್ದ ಇಲಾಖೆಯ ಮುಖ್ಯಸ್ಥರೂ ಆಗಿರುವ ಅವರು ಸ್ಪಷ್ಟಪಡಿಸಿದರು.