'ಅತ್ಯಾಚಾರ ನಡೆದ ಬಳಿಕ ಬಂದು ದೂರು ನೀಡು' ಎಂದ ಪೊಲೀಸರು: ಮಹಿಳೆಯ ಆರೋಪ
ಲಕ್ನೋ: ಉನ್ನಾವೋ ಅತ್ಯಾಚಾರ ಸಂತ್ರಸ್ತೆಯನ್ನು ಬೆಂಕಿ ಹಚ್ಚಿ ಸುಟ್ಟ ಬಗ್ಗೆ ದೇಶವ್ಯಾಪಿ ಆಕ್ರೋಶ ವ್ಯಕ್ತವಾಗಿದ್ದರೂ, ಉತ್ತರ ಪ್ರದೇಶದ ಈ ಜಿಲ್ಲೆಯ ಪೊಲೀಸರು ಮಾತ್ರ ಮೈಗೊಡವಿ ಎದ್ದಿಲ್ಲ. ಉನ್ನಾವೋ ಸಂತ್ರಸ್ತೆಗೆ ಬೆಂಕಿ ಹಚ್ಚಿ ಕೊಂದ ಹಿಂದೂಪುರ ಗ್ರಾಮಕ್ಕೆ ಸೇರಿದ ಮಹಿಳೆಯೊಬ್ಬರು ಅತ್ಯಾಚಾರ ಯತ್ನದ ಬಗ್ಗೆ ನೀಡಿದ ದೂರಿಗೆ ಪೊಲೀಸರಿಂದ ಸ್ಪಂದನೆ ಸಿಕ್ಕಿಲ್ಲ.
ಅತ್ಯಾಚಾರ ನಡೆದ ಬಳಿಕ ದೂರು ನೀಡಿ ಎಂದು ಮಹಿಳೆಗೆ ಪೊಲೀಸರು ಹೇಳಿ ಕಳುಹಿಸಿದ್ದಾರೆ ಎಂದು ಆಪಾದಿಸಲಾಗಿದೆ. "ರೇಪ್ ತೋ ಹುವಾ ನಹಿ; ಜಬ್ ಹೋಗಾ ತಬ್ ಆನಾ" (ಅತ್ಯಾಚಾರ ನಡೆದಿಲ್ಲ; ನಡೆದಾಗ ಬನ್ನಿ) ಎಂದು ಠಾಣೆಯಲ್ಲಿ ಹೇಳಿದ್ದಾಗಿ ಮಹಿಳೆ ದೂರಿದ್ದಾರೆ. ಔಷಧಿ ತರಲು ಹೋಗುತ್ತಿದ್ದಾಗ ಅದೇ ಗ್ರಾಮದ ವ್ಯಕ್ತಿಯೊಬ್ಬ ತನ್ನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾಗಿ ಮಹಿಳೆ ಹೇಳಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿಕೊಳ್ಳಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ನಾನು ಔಷಧಿ ಖರೀದಿಗೆ ಹೋಗುತ್ತಿದ್ದಾಗ ಮೂವರು ನನ್ನನ್ನು ತಡೆದು ನಿಲ್ಲಿಸಿ ನನ್ನ ಬಟ್ಟೆ ಎಳೆದಾಡಿದರು. ಬಳಿಕ ಅತ್ಯಾಚಾರಕ್ಕೆ ಯತ್ನಿಸಿದರು" ಎಂದು ಮಹಿಳೆ ದೂರಿದ್ದಾರೆ. ಆರೋಪಿಗಳ ಗುರುತನ್ನು ಕೂಡಾ ಮಹಿಳೆ ಹೇಳಿದ್ದರು. ಮೂರು ತಿಂಗಳಿಂದ ಠಾಣೆಗೆ ಹೋಗುತ್ತಿದ್ದರೂ, ದೂರು ದಾಖಲಿಸಿಕೊಂಡಿಲ್ಲ ಎಂದು ಹೇಳಲಾಗಿದೆ.
ಈ ಘಟನೆ ಬಳಿಕ ನಾನು 1090 (ಮಹಿಳಾ ಸಹಾಯವಾಣಿ)ಗೆ ಕರೆ ಮಾಡಿದೆ. 100ಕ್ಕೆ ಕರೆ ಮಾಡುವಂತೆ ಅವರು ತಿಳಿಸಿದರು. ಅಲ್ಲಿಗೆ ಕರೆ ಮಾಡಿದಾಗ ಉನ್ನಾವೊ ಠಾಣೆಗೆ ಕರೆ ಮಾಡುವಂತೆ ಸೂಚನೆ ಬಂತು. ಇದೀಗ ಆರೋಪಿಗಳು ನನ್ನನ್ನು ಕೊಲೆ ಮಾಡುವ ಬೆದರಿಕೆ ಹಾಕಿದ್ದಾರೆ ಎಂದೂ ಅವರು ಆಪಾದಿಸಿದ್ದಾರೆ.