ನಾನು ಇಸ್ರೇಲ್‌ನ ಅತ್ಯುತ್ತಮ ಸ್ನೇಹಿತ: ಟ್ರಂಪ್

ಹಾಲಿವುಡ್ (ಅಮೆರಿಕ), ಡಿ. 8: ಇದುವರೆಗೆ ಇಸ್ರೇಲ್ ಕಂಡ ಸ್ನೇಹಿತರಲ್ಲೇ ನಾನು ಅತ್ಯುತ್ತಮ ಎಂಬುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ಘೋಷಿಸಿಕೊಂಡಿದ್ದಾರೆ.
ಮುಂದಿನ ವರ್ಷ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಮಹತ್ವದ ಪಾತ್ರ ವಹಿಸಲಿರುವ ಯಹೂದಿ-ಅಮೆರಿಕನ್ ಮತಗಳ ಮೇಲೆ ಕಣ್ಣಿಟ್ಟು ಅವರು ಈ ಹೇಳಿಕೆ ನೀಡಿರುವುದು ಸ್ಪಷ್ಟವಾಗಿದೆ.
ನನ್ನ ಪೂರ್ವಾಧಿಕಾರಿ ಬರಾಕ್ ಒಬಾಮ ಅವಧಿಯಲ್ಲಿ ಯಹೂದಿ-ಅಮೆರಿಕನ್ನರು ಡೆಮಾಕ್ರಟ್ ಅಭ್ಯರ್ಥಿಗಳಿಗೆ ಮತ ಹಾಕಿರುವುದು ವ್ಯರ್ಥ ಎಂದು ಫ್ಲೋರಿಡ ರಾಜ್ಯದ ಹಾಲಿವುಡ್‌ನಲ್ಲಿ ನಡೆದ ಸಮಾರಂಭವೊಂದರಲ್ಲಿ ಮಾತನಾಡಿದ ಟ್ರಂಪ್ ನುಡಿದರು.
‘‘ಅಂದರೆ, ಕಳೆದ ಸರಕಾರದಲ್ಲಿ ನಿಮ್ಮ ಪೈಕಿ ಹೆಚ್ಚಿನವರು ಅವರ ಪಕ್ಷಕ್ಕೆ ಮತ ಹಾಕಿದ್ದೀರಿ’’ ಎಂದರು.
‘‘ಒಂದು ದಿನ ನೀವು ನನಗೆ ಈ ಬಗ್ಗೆ ವಿವರಣೆ ನೀಡಬೇಕಾಗಿದೆ. ಯಾಕೆಂದರೆ, ಅವರು (ಹಿಂದಿನ ಸರಕಾರದವರು) ಇಸ್ರೇಲನ್ನು ಅಷ್ಟೇನೂ ಇಷ್ಟಪಡಲಿಲ್ಲ’’ ಎಂದು ಟ್ರಂಪ್ ಅಭಿಪ್ರಾಯಪಟ್ಟರು.
‘‘ಇಸ್ರೇಲ್ ಸರಕಾರವು ಶ್ವೇತಭವನದಲ್ಲಿ ನಿಮ್ಮ ಅಧ್ಯಕ್ಷ ಡೊನಾಲ್ಡ್ ಜೆ. ಟ್ರಂಪ್‌ಗಿಂತ ಉತ್ತಮ ಸ್ನೇಹಿತನನ್ನು ಯಾವತ್ತೂ ಹೊಂದಿರಲಿಲ್ಲ’’ ಎಂದರು.





