ಬೈಕ್ನಲ್ಲಿ ಲಿಫ್ಟ್ ನೀಡುವ ನೆಪದಲ್ಲಿ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ: ಆರೋಪಿಗಳ ಸೆರೆ
ಸಂಬಲ್ಪುರ,ಡಿ.9: ಹೈದರಾಬಾದ್ ಎನ್ಕೌಂಟರ್ನ ಹೊಗೆ ಆರುವ ಮೊದಲೇ ಬೈಕ್ನಲ್ಲಿ ಲಿಫ್ಟ್ ನೀಡುವ ನೆಪದಲ್ಲಿ ನಾಲ್ವರು ದುಷ್ಕರ್ಮಿಗಳ ತಂಡವೊಂದು 37ರ ಹರೆಯದ ವಿವಾಹಿತ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ಇನ್ನೊಂದು ಹೇಯ ಘಟನೆಯು ಒಡಿಶಾದ ಸಂಬಲ್ಪುರದಲ್ಲಿ ನಡೆದಿದೆ.
ಎಲ್ಲ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಮತ್ತು ಪ್ರಕರಣದಲ್ಲಿ ಆರೋಪಪಟ್ಟಿಯನ್ನು 20 ದಿನಗಳಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ಸಂಬಲ್ಪುರ ಎಸ್ಪಿ ಕಂವರ ವಿಶಾಲ ಸಿಂಗ್ ಅವರು ಸೋಮವಾರ ಇಲ್ಲಿ ತಿಳಿಸಿದರು.
ರವಿವಾರ ಇಲ್ಲಿಯ ಐಂಠಾಪಲಿ ಪೋಲೀಸ್ ಠಾಣಾ ವ್ಯಾಪ್ತಿಯ ಬರಾಯಪಲಿ ಪ್ರದೇಶದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಮಹಿಳೆಯನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದರು. ಪ್ರಜ್ಞೆಗೆ ಮರಳಿದ ಬಳಿಕ ಆಕೆ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವುದನ್ನು ತಿಳಿಸಿದ್ದಳು.
ಶನಿವಾರ ರಾತ್ರಿ ಮಹಿಳೆ ತನ್ನ ಮನೆಗೆ ಮರಳಲು ಬರಾಯಪಲಿಯಲ್ಲಿ ಬಸ್ಸಿಗಾಗಿ ಕಾಯುತ್ತಿದ್ದಾಗ ಬೈಕ್ ಸವಾರನೋರ್ವ ಲಿಫ್ಟ್ ನೀಡುವುದಾಗಿ ಹೇಳಿ ಆಕೆಯನ್ನು ಹತ್ತಿಸಿಕೊಂಡಿದ್ದ. ಬಳಿಕ ಆಕೆಯನ್ನು ನಿರ್ಜನ ಸ್ಥಳವೊಂದಕ್ಕೆ ಕರೆದೊಯ್ದು ಅತ್ಯಾಚಾರವೆಸಗಿದ್ದ. ಇದೇ ವೇಳೆ ಅಲ್ಲಿಗೆ ತಲುಪಿದ್ದ ಆತನ ಮೂವರು ಗೆಳೆಯರೂ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದು,ಬಳಿಕ ಎಲ್ಲರೂ ಅಲ್ಲಿಂದ ಪರಾರಿಯಾಗಿದ್ದರು. ಕೆಲ ಸಮಯದ ಬಳಿಕ ಬರಾಯಿಪಾಲಿವರೆಗೆ ನಡೆದುಕೊಂಡು ಬಂದಿದ್ದ ಮಹಿಳೆ ಅಲ್ಲಿ ಪ್ರಜ್ಞೆ ಕಳೆದುಕೊಂಡಿದ್ದಳು. ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಸ್ಥಿತಿ ಸ್ಥಿರವಾಗಿದೆ ಎಂದು ಪೊಲೀಸರು ತಿಳಿಸಿದರು.