ಅರ್ಹರಿಗೆ ದೊರೆತಾಗ ಪ್ರಶಸ್ತಿ ಅರ್ಥಪೂರ್ಣ: ಒಡಿಯೂರುಶ್ರೀ
ಬೋಳಾರ ನಾರಾಯಣ ಶೆಟ್ಟಿ ಸಂಸ್ಮರಣೆ- ಪ್ರಶಸ್ತಿ ಪ್ರದಾನ
ಮಂಗಳೂರು, ಡಿ.9: ಸುಸಂಸ್ಕೃತ ಸಮಾಜ ನಿರ್ಮಾಣದಲ್ಲಿ ಯಕ್ಷಗಾನ ಕಲೆಯ ಕೊಡುಗೆಯಿದೆ. ರಾಮಾಯಣ, ಮಹಾ ಭಾರತಗಳಂತಹ ಕಾವ್ಯಗಳು ಯಕ್ಷಗಾನ ಕಲೆಯ ಮೂಲಕ ಹಳ್ಳಿಗಳ ಜನರನ್ನು ಮುಟ್ಟುತ್ತಿವೆ. ಅರ್ಹರಿಗೆ ಪ್ರಶಸ್ತಿ ದೊರೆತಾಗ ಅದು ಅರ್ಥಪೂರ್ಣವಾಗುತ್ತದೆ ಎಂದು ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಗುರುದೇವಾನಂದ ಶ್ರೀ ಹೇಳಿದ್ದಾರೆ.
ನಗರದ ಬೋಳಾರ ನಾರಾಯಣ ಶೆಟ್ಟಿ ಯಕ್ಷ ಪ್ರತಿಷ್ಠಾನದಿಂದ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಯಕ್ಷಗಾನದ ಮೇರು ಕಲಾವಿದ ದಿ.ಬೋಳಾರ ನಾರಾಯಣ ಶೆಟ್ಟಿ ಪ್ರಶಸ್ತಿಯನ್ನು ಹಿರಿಯ ಯಕ್ಷಗಾನ ಕಲಾವಿದ ಕುಂಬ್ಳೆ ಸುಂದರ ರಾವ್ಗೆ ಪ್ರದಾನ ಮಾಡಿ ಅವರು ಮಾತನಾಡಿದರು.
ಯಕ್ಷಗಾನ ಲೋಕ ಸುಂದರವಾಗಲು ಪ್ರಸಿದ್ಧ ಕಲಾವಿದ ಕುಂಬ್ಳೆ ಸುಂದರರಾವ್ ಅವರಂತಹ ಕಲಾವಿದರ ಕೊಡುಗೆಯಿದೆ. ಬದುಕಿನ ಲಕ್ಷ ಆತ್ಮಸಾಕ್ಷಾತ್ಕಾರವಾಗಬೇಕು. ಸಾತ್ವಿಕ ಭಾವವನ್ನು ಬೆಳೆಸಿಕೊಂಡಾಗ ಭಗವಂತ ಹತ್ತಿರವಾಗುತ್ತಾನೆ ಎಂದರು.
ಯಕ್ಷಗಾನ ಅಕಾಡಮಿ ಮಾಜಿ ಸದಸ್ಯ, ಅರ್ಥಧಾರಿ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಮಾತನಾಡಿ, ಯಕ್ಷಗಾನ ರಂಗದಲ್ಲಿ ಅರ್ಧ ಶತಮಾನ ಚರಿತ್ರ ನಟನಾಗಿ ಮೆರೆದ ಬೋಳಾರರ ಕಂಸ, ರಾವಣ, ಹಿರಣ್ಯ ಕಶ್ಯಪ, ಬಾಹುಬಲಿ ಪಾತ್ರಗಳು ಅನ್ಯಾದೃಶ. ಅಭಿನವ ಕೋಟಿ ಎಂದೇ ಹೆಸರಾಗಿದ್ದ ಅವರ ತುಳು ಪ್ರಸಂಗಗಳ ಕೋಟಿ, ದೇವುಪೂಂಜ, ಕೊಡ್ಸರಾಳ್ವ, ದಳವಾಯಿ ದುಗ್ಗಣ ಮುಂತಾದ ಪಾತ್ರಗಳು ವಿಶಿಷ್ಟವಾದ ಬೋಳಾರ ಶೈಲಿಯಿಂದ ಜನಪ್ರಿಯವಾಗಿದ್ದವು ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಕುಂಬಳೆ ಸುಂದರರಾವ್, ಯಕ್ಷಗಾನದಲ್ಲಿ ವ್ಯಾಕರಣ ಬದ್ಧತೆ, ಸುಂದರ ಪದ ಪ್ರಯೋಗದಿಂದಲೇ ತನ್ನ ಪಾತ್ರಕ್ಕೆ ಜೀವಂತಿಕೆ ತುಂಬುತ್ತಿದ್ದ ಬೋಳಾರ ನಾರಾಯಣ ಶೆಟ್ಟಿ ಅವರು ಮೇರು ಕಲಾವಿದ ಮಾತ್ರವಾಗಿರದೆ ಹೃದಯವಂತಿಕೆಯ ಪರಿಪೂರ್ಣ ಕಲಾವಿದರಾಗಿದ್ದರು ಎಂದರು.
ಸಮಾರಂಭದಲ್ಲಿ ನಾರಾಯಣ ಶೆಟ್ಟಿ ಅವರ ಪುತ್ರ ಹಾಗೂ ಬೋಳಾರ ನಾರಾಯಣ ಶೆಟ್ಟಿ ಪ್ರತಿಷ್ಠಾನದ ಅಧ್ಯಕ್ಷ ಬೋಳಾರ ಕರುಣಾಕರ ಶೆಟ್ಟಿ, ಪ್ರವಚನಕಾರ ಸೋಂದಾ ಭಾಸ್ಕರ ಭಟ್, ಅಳಪೆ ಕರ್ಮಾರ್ ಸತ್ಸಂಗ ಸಮಿತಿ ಸಂಚಾಲಕ ವಾಸುದೇವ ಆರ್. ಕೊಟ್ಟಾರಿ, ನಿವೃತ್ತ ಬ್ಯಾಂಕ್ ಅಧಿಕಾರಿ ಪದ್ಮನಾಭ ಶೆಟ್ಟಿ ಹಾಗೂ ಕುಟುಂಬ ವರ್ಗದವರು ಉಪಸ್ಥಿತರಿದ್ದರು.
ಪ್ರಶಸ್ತಿ ಆಯ್ಕೆ ಸಮಿತಿಯ ಪರವಾಗಿ ಭಾಸ್ಕರ ರೈ ಕುಕ್ಕುವಳ್ಳಿ ಸ್ವಾಗತಿಸಿದರು. ಕೆ.ಲಕ್ಷ್ಮೀನಾರಾಯಣ ರೈ ಹರೇಕಳ ಸನ್ಮಾನ ಪತ್ರ ವಾಚಿಸಿದರು. ವಿಶ್ವಸ್ಥ ಮಂಡಳಿ ಸದಸ್ಯ ಬೋಳಾರ ಗೋಪಾಲ ಶೆಟ್ಟಿ ವಂದಿಸಿದರು.
ಸಮಾರಂಭದ ಬಳಿಕ ಆಯ್ದ ಪ್ರಸಿದ್ಧ ಕಲಾವಿದರಿಂದ ‘ಹನುಮಾವಿರ್ಭಾವ-ಒಡಿಯೂರು ಶ್ರೀ ದತ್ತಾಂಜನೇಯ’ ಯಕ್ಷಗಾನ-ಬಯಲಾಟ ಜರಗಿತು.