ಸಹೋದ್ಯೋಗಿ ಹತ್ಯೆಗೈದು ಆತ್ಮಹತ್ಯೆ ಮಾಡಿಕೊಂಡ ಯೋಧ

ರಾಂಚಿ, ಡಿ. 9: ಜಾರ್ಖಂಡ್‌ನಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದ್ದ ಛತ್ತೀಸ್‌ಗಢ ಶಸಸ್ತ್ರ ಸೇನಾ ಪಡೆಯ ಯೋಧನೋರ್ವ ತನ್ನ ಸಹೋದ್ಯೋಗಿಗೆ ಗುಂಡು ಹಾರಿಸಿ ಹತ್ಯೆಗೈದ ಬಳಿಕ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ರಾಂಚಿಯಲ್ಲಿ ಸೋಮವಾರ ಬೆಳಗ್ಗೆ ಸಂಭವಿಸಿದೆ.
ರಾಂಚಿಯ ಖೇಲ್‌ಗಾಂವ್ ಪ್ರದೇಶದಲ್ಲಿ ನಡೆದ ಈ ಘಟನೆಯಲ್ಲಿ ಇಬ್ಬರು ಕೂಡ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇತರ ಇಬ್ಬರು ಕಾನ್‌ಸ್ಟೆಬಲ್‌ಗಳಿಗೆ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯಲ್ಲಿ ಮೃತಪಟ್ಟವರನ್ನು ಮೇಲಾ ರಾಮೋರ್ ಹಾಗೂ ವಿಕ್ರಮ್ ರಾಜ್ವಾಡಿ ಎಂದು ಗುರುತಿಸಲಾಗಿದೆ.
ಇಬ್ಬರು ಯೋಧರು ಕ್ಷುಲ್ಲಕ ಕಾರಣಕ್ಕೆ ಬೆಳಗ್ಗೆ 6.30ಕ್ಕೆ ಪರಸ್ಪರ ಜಗಳವಾಡಿದರು. ಯೋಧ ವಿಕ್ರಮ್ ರಾಜ್ವಾಡಿ ಇನ್ನೋರ್ವ ಯೋಧ ಮೇಲಾ ರಾಮೋರ್ ಮೇಲೆ ಗುಂಡು ಹಾರಿಸಿದ. ಮೇಲಾ ರಾಮೋರ್ ಸ್ಥಳದಲ್ಲಿ ಮೃತಪಟ್ಟ. ಅನಂತರ ವಿಕ್ರಮ್ ರಾಜ್ವಾಡಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಎಂದು ರಾಂಚಿಯ ಹಿರಿಯ ಪೊಲೀಸ್ ಅಧೀಕ್ಷಕ ಅನೀಶ್ ಗುಪ್ತಾ ತಿಳಿಸಿದ್ದಾರೆ.
‘‘ರಾಜ್ವಾಡಿಗೆ ಸಾರಾಯಿ ಕುಡಿಯುವ ಚಟ ಇದೆ ಎಂದು ಆರೋಪಿಸಿ ಕೆಲವು ದಿನಗಳ ಹಿಂದೆ ಮೇಲಾ ರಾಮೋರ್ ದೂರು ಸಲ್ಲಿಸಿದ್ದ. ಜಾರ್ಖಂಡ್ ಚುನಾವಣೆ ಹಿನ್ನೆಲೆಯಲ್ಲಿ ಸಾರಾಯಿ ಕುಡಿಯುತ್ತಿದ್ದಾರೆಯೆ ಎಂಬುದನ್ನು ಪರಿಶೀಲಿಸಲು ನಾನು ಕೆಲವು ದಿನಗಳ ಹಿಂದೆ ಯೋಧರನ್ನು ಭೇಟಿಯಾಗಿದ್ದೆ’’ ಎಂದು ಸಶಶ್ತ್ರ ಸೇನಾ ಪಡೆಯ 12ನೇ ಬೆಟಾಲಿಯನ್‌ನ ಕಮಾಂಡೆಂಟ್ ಡಾ. ಅಚಲಾ ತಿಳಿಸಿದ್ದಾರೆ.
ರಜೆ ನೀಡದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ ಎಂಬ ಆರೋಪವನ್ನು ಅವರು ನಿರಾಕರಿಸಿದ್ದಾರೆ.







