ಉಡುಪಿ: ರೆಡ್‌ಕ್ರಾಸ್‌ನಿಂದ ಮಾನವ ಹಕ್ಕುಗಳ ದಿನಾಚರಣೆ

ಉಡುಪಿ, ಡಿ.10: ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಉಡುಪಿ ಜಿಲ್ಲಾ ಘಟಕ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಉಡುಪಿ ಇವುಗಳ ಜಂಟಿ ಆಶ್ರಯದಲ್ಲಿ ಮಂಗಳವಾರ ಅಜ್ಜರಕಾಡಿನಲ್ಲಿರುವ ರೆಡ್‌ಕ್ರಾಸ್ ಭವನದಲ್ಲಿ ಮಾನವ ಹಕ್ಕುಗಳ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕಾವೇರಿ ಇವರು ಗಿಡಕ್ಕೆ ನೀರನ್ನು ಸಿಂಪಡಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ಭಾರತದ ಸಂವಿಧಾನದಲ್ಲಿ ಮಾನವ ಹಕ್ಕುಗಳಿಗೆ ಗರಿಷ್ಠ ಆದ್ಯತೆ ನೀಡಲಾಗಿದೆ. ಜಗತ್ತಿನ ಪ್ರತಿಯೊಬ್ಬ ಮಾನವನಿಗೂ ಬದುಕುವ, ಸ್ವತಂತ್ರ ಜೀವನವನ್ನು ನಡೆಸುವ ಬೇಕಾದ್ದನ್ನು ತಿನ್ನುವ, ವಾಸಿಸುವ, ಎಲ್ಲೆಂದರಲ್ಲಿ ಓಡಾಡುವ ಹಕ್ಕಿದ್ದು ನೀಡಲಾಗಿದೆ ಎಂದರು.
ಮನುಷ್ಯನಿಗೆ ಮುಖ್ಯವಾಗಿ ಬೇಕಾಗಿರುವುದು ಆಹಾರ, ಉಡುಪು ಮತ್ತು ವಸತಿ. ಇವು ಮನುಷ್ಯನ ಮೂಲಭೂತ ಅವಶ್ಯಕತೆಗಳು. ಈ ಮೂಲಭೂತ ಸವಲತ್ತುಗಳನ್ನು ಪಡೆಯುವುದು ಪ್ರತಿಯೊಬ್ಬ ಪ್ರಜೆಯ ಜನ್ಮಸಿದ್ಧ ಹಕ್ಕಾಗಿದೆ. ಆದರೆ ಬಹುತೇಕ ಸಂದರ್ಭಗಳಲ್ಲಿ ಮನುಷ್ಯನ ಈ ಮೂಲಭೂತ ಹಕ್ಕುಗಳನ್ನು ಧಮನಿಸುವ ಪ್ರಯತ್ನಗಳು ನಡೆಯುತ್ತಿದ್ದು, ಇದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದರು.
ಇತರರ ಬದುಕಿನ ಹಕ್ಕನ್ನು ಕಸಿಯುವುದು, ಅವರಿಗೆ ಹಿಂಸೆ ನೀಡುವುದು ಇತ್ಯಾದಿ ಇದರ ವ್ಯಾಪ್ತಿಯೊಳಗೆ ಬರುತ್ತವೆ. ಪ್ರತಿಯೊಬ್ಬ ಮಾನವನ ಈ ಹಕ್ಕುಗಳು ಸಂರಕ್ಷಿಸಲ್ಪಡಬೇಕು. ಅವರನ್ನು ಯಾರೂ ಧಮನಿಸಬಾರದು ಎಂಬ ಉದ್ದೇಶದಿಂದ ಪ್ರತಿವರ್ಷ ಡಿ.10ನ್ನು ವಿಶ್ವ ಮಾನವ ಹಕ್ಕುಗಳ ದಿನವನ್ನಾಗಿ ಜಗತ್ತಿನೆಲ್ಲೆಡೆ ಆಚರಿಸಲಾಗುತ್ತದೆ ಎಂದವರು ನುಡಿದರು.
ಮುಖ್ಯ ಅತಿಥಿಗಳಾಗಿ ವೈಕುಂಠ ಬಾಳಿಗಾ ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಪ್ರಕಾಶ್ ಕಣಿವೆ ಭಾಗವಹಿಸಿ ಮಾನವ ಹಕ್ಕುಗಳ ಬಗ್ಗೆ ಮಾತನಾಡಿದರು. ಅಧ್ಯಕ್ಷತೆಯನ್ನು ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಉಡುಪಿ ಘಟಕದ ಸಭಾಪತಿ ಬಸ್ರೂರು ರಾಜೀವ್ ಶೆಟ್ಟಿ ವಹಿಸಿದ್ದರು.
ಉಪಸಭಾಪತಿ ಡಾ.ಅಶೋಕ್ ಕುಮಾರ್ ವೈ.ಜಿ. ಸ್ವಾಗತಿಸಿದರು. ಡಾ. ಉಮೇಶ್ ಪ್ರಭು, ಬಾಲಕೃಷ್ಣ ಶೆಟ್ಟಿ ಕೆ. ಉಪಸ್ಥಿತರಿದ್ದರು. ಗೌರವ ಖಜಾಂಚಿ ಟಿ.ಚಂದ್ರಶೇಖರ್ ವಂದಿಸಿ,ಇಂದಿರಾಎಸ್.ಹೆಗ್ಡೆಕಾರ್ಯಕ್ರಮ ನಿರೂಪಿಸಿದರು.







