‘ಆಶ್ರಯ ಯೋಜನೆ’ಯ ಅಕ್ರಮ ತಡೆಗೆ ಹೊಸ ಕಾಯ್ದೆ: ವಸತಿ ಸಚಿವ ವಿ.ಸೋಮಣ್ಣ

ಬೆಂಗಳೂರು, ಡಿ. 11: ಆಶ್ರಯ ಯೋಜನೆಯಡಿ ಮನೆಗಳ ಹಂಚಿಕೆಯಲ್ಲಿ ವ್ಯಾಪಕ ಅಕ್ರಮ ನಡೆದಿದ್ದು, ಇದನ್ನು ತಪ್ಪಿಸಲು ಅಕ್ರಮವೆಸಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಕಾಯ್ದೆಯನ್ನು ಜಾರಿಗೆ ತರಲಾಗುವುದು ಎಂದು ವಸತಿ ಸಚಿವ ವಿ.ಸೋಮಣ್ಣ ಇಂದಿಲ್ಲಿ ತಿಳಿಸಿದ್ದಾರೆ.
ಬುಧವಾರ ವಿಕಾಸಸೌಧದಲ್ಲಿನ ತನ್ನ ಕೊಠಡಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಆಶ್ರಯ ಯೋಜನೆಯಲ್ಲಿನ ಅಕ್ರಮ ತಡೆಗಟ್ಟಲು ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿ, ಜಿ.ಪಂ. ಸಿಇಒ, ತಹಶಿಲ್ದಾರ್, ಪಿಡಿಒ ಮತ್ತು ಶಾಸಕರ ನೇತೃತ್ವದಲ್ಲಿ ಒಪ್ಪಿಗೆ ಪಡೆದು ಮನೆ ಹಂಚಿಕೆ ಮಾಡಲಾಗುವುದು ಎಂದು ಹೇಳಿದರು.
ಚಿತ್ರದುರ್ಗ, ಕಲಬುರಗಿ, ಯಾದಗಿರಿ ಸೇರಿದಂತೆ ರಾಜ್ಯದ ವಿವಿಧೆಡೆಗಳಲ್ಲಿ ಒಂದೇ ಮನೆಯನ್ನು ಹಲವರ ಹೆಸರಿನಲ್ಲಿ ಹಂಚಿಕೆ ಮಾಡಿ, ಅನುದಾನ ಮಂಜೂರು ಮಾಡಿರುವುದು ಬಯಲಾಗಿದೆ. ಹೀಗಾಗಿ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ ಎಂದು ವಿವರಿಸಿದರು.
ಪರಿಶೀಲನೆ: ಆಶ್ರಯ ಯೋಜನೆಯಡಿ ಮನೆ ಮಂಜೂರಿಗೆ ಗ್ರಾಮಸಭೆ ತೀರ್ಮಾನವೇ ಅಂತಿಮ ಅಲ್ಲ. ಗ್ರಾಮಸಭೆ ಆಯ್ಕೆ ಮಾಡಿದ ಪಟ್ಟಿಯನ್ನು ಅಧಿಕಾರಿ ಮತ್ತು ಶಾಸಕರ ನೇತೃತ್ವದ ಸಮಿತಿ ಪರಿಶೀಲನೆ ನಡೆಸಲಿದೆ ಎಂದು ಅವರು ಸ್ಪಷ್ಟಣೆ ನೀಡಿದರು.
ಆಶ್ರಯ ಮನೆಗಳ ಹಂಚಿಕೆಯ ನಕಲಿ ಬಿಲ್ ಮೂಲಕ 9 ಕೋಟಿ ರೂ.ಗಳಿಗೂ ಹೆಚ್ಚು ಮೊತ್ತದ ಹಣ ದುರುಪಯೋಗವಾಗಿರುವ ಅನುಮಾನವಿದೆ. ಇದರಲ್ಲಿ ಗ್ರಾ.ಪಂ. ಅಧ್ಯಕ್ಷರು, ಪಿಡಿಒಗಳು ಸೇರಿದಂತೆ ಇನ್ನಿತರ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಅವರು ತಿಳಿಸಿದರು.
ಕೊಳಗೇರಿ ಮುಕ್ತ: ಮುಂದಿನ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ಗುಡಿಸಲು ಮತ್ತು ಕೊಳಗೇರಿ ಮುಕ್ತಗೊಳಿಸುವ ನಿಟ್ಟಿನಲ್ಲಿ 2.80 ಲಕ್ಷ ಮನೆ ನಿರ್ಮಾಣಕ್ಕೆ ಯೋಜನೆ ರೂಪಿಸಿದ್ದು, ಪ್ರಾರಂಭಿಕ ಹಂತದಲ್ಲಿ 52 ಸಾವಿರ ಮನೆ ನಿರ್ಮಾಣಕ್ಕೆ 211 ಕೋಟಿ ರೂ.ಬಿಡುಗಡೆ ಮಾಡಲಾಗಿದೆ ಎಂದರು.
ಬೆಂಗಳೂರು ನಗರದಲ್ಲಿ 432 ಕೊಳಗೇರಿ ಪ್ರದೇಶಗಳಿದ್ದು, ಆ ಪೈಕಿ 200 ಕೊಳಗೇರಿ ನಿವಾಸಿಗಳಿಗೆ 1.80 ಲಕ್ಷ ಮನೆ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ ಎಂದ ಅವರು, ಎಲ್ಲರಿಗೂ ಸೂರು ಕಲ್ಪಿಸಬೇಕೆಂಬುದು ಮುಖ್ಯಮಂತ್ರಿ ಯಡಿಯೂರಪ್ಪರ ಸಂಕಲ್ಪ ಎಂದು ಹೇಳಿದರು.
ವಸತಿ ಯೋಜನೆ ವಿಲೀನ: ಆಶ್ರಯ ಯೋಜನೆಯಡಿ ಮನೆ ಮಂಜೂರಿಗೆ ಇರುವ ವಿವಿಧ ವಸತಿ ಯೋಜನೆಗಳನ್ನು ವಿಲೀನಗೊಳಿಸಲಾಗುವುದು. ಇದರಿಂದ ಅಕ್ರಮ ತಡೆಗಟ್ಟಲು ಅನುಕೂಲವಾಗಲಿದೆ. ಅಲ್ಲದೆ, ಅರ್ಹರಿಗೆ ವಸತಿ ಸೌಲಭ್ಯ ಸಿಗಲಿದೆ ಎಂದರು.
ಹೊಸಕೋಟೆ, ಚಲ್ಲಘಟ್ಟ, ಮೈಸೂರು, ಕಲಬುರಗಿ ಸೇರಿದಂತೆ ರಾಜ್ಯದ ಎಂಟು ಕಡೆಗಳಲ್ಲಿ ಗೃಹ ಮಂಡಳಿಯಿಂದ ಹೊಸ ಬಡಾವಣೆಗಳನ್ನು ನಿರ್ಮಿಸಲಾಗುವುದು ಎಂದ ಅವರು, ಸಿಂಗಲ್ ಮತ್ತು ಡಬಲ್ ಬೆಡ್ ರೂಂಗಳ ಮನೆ ನಿರ್ಮಿಸಿ ರಿಯಾಯಿತಿ ದರದಲ್ಲಿ ಅರ್ಹರಿಗೆ ಹಂಚಿಕೆ ಮಾಡಲಾಗುವುದು ಎಂದು ತಿಳಿಸಿದರು.
‘ಹಿಂದಿನ ಸರಕಾರದ ಅವಧಿಯಲ್ಲಿ 28ಲಕ್ಷ ಮನೆ ನಿರ್ಮಾಣಕ್ಕೆ ಅನುಮೋದನೆ ನೀಡಿದ್ದು, ಆ ಪೈಕಿ 14ಲಕ್ಷ ಮನೆಗಳನ್ನು ನಿರ್ಮಿಸಲಾಗಿದೆ. ಉಳಿದ 14 ಲಕ್ಷ ಮನೆಗಳ ಪೈಕಿ 8ಲಕ್ಷ ಮನೆಗಳು ವಿವಿಧ ಹಂತದಲ್ಲಿವೆ. ಉಳಿದ 6ಲಕ್ಷ ಮನೆಗಳ ನಿರ್ಮಾಣ ಪ್ರಕ್ರಿಯೆ ಆರಂಭಿಸದ ಹಿನ್ನೆಲೆಯಲ್ಲಿ ಕಾರ್ಯಾದೇಶ ಹಿಂಪಡೆಯಲಾಗುವುದು’
-ವಿ.ಸೋಮಣ್ಣ, ವಸತಿ ಸಚಿವ







