ಕಮಲ್ ಹಾಸನ್ ಭೇಟಿಯಾದ ಡ್ವೇನ್ ಬ್ರಾವೋ

ಚೆನ್ನೈ, ಡಿ.11: ವೆಸ್ಟ್ ಇಂಡೀಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಆಲ್‌ರೌಂಡರ್ ಡ್ವೇನ್ ಬ್ರಾವೋ ಬುಧವಾರ ಚೆನ್ನೈನಲ್ಲಿ ಭಾರತದ ಚಿತ್ರರಂಗದ ಸೂಪರ್ ಸ್ಟಾರ್ ಕಮಲ್ ಹಾಸನ್ ಅವರನ್ನು ಭೇಟಿಯಾದರು.
ಡ್ವೇನ್ ಬ್ರಾವೋ ಅವರು ಕಮಲ್ ಹಾಸನ್ ಅವರಿಗೆ ವೈಯಕ್ತಿಕವಾಗಿ ಸಹಿ ಮಾಡಿದ ಟಿ-ಶರ್ಟ್‌ನ್ನು ನೀಡಿದರು ಮತ್ತು ಇಬ್ಬರು ಸೂಪರ್‌ಸ್ಟಾರ್‌ಗಳು ಫೋಟೊಗೆ ಪೋಸ್ ನೀಡಿದರು.
ಪ್ರಶಸ್ತಿ ಸಮಾರಂಭದ ಹೊರತಾಗಿ ಡ್ವೇನ್ ಬ್ರಾವೋ ಚೆನ್ನೈಗೆ ಭೇಟಿ ನೀಡಿದ್ದರು. ಈ ವಾರದ ಆರಂಭದಲ್ಲಿ ಅವರಿಗೆ ‘ಗ್ಲೋಬಲ್ ಐಕಾನ್ ಆಫ್ ಇನ್ಫೇರೇಶನ್’ ಶೀರ್ಷಿಕೆಯೊಂದಿಗೆ ಸನ್ಮಾನಿಸಲಾಯಿತು.
ಬ್ರಾವೋ ಇತ್ತೀಚೆಗೆ ಅಬುಧಾಬಿ ಟಿ-10 ಲೀಗ್‌ನಲ್ಲಿ ಮರಾಠಾ ಅರೇಬಿಯನ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದರು. ಆಲ್‌ರೌಂಡರ್ ಬ್ಯಾಟಿಂಗ್‌ನಲ್ಲಿ ಮಿಂಚಲಿಲ್ಲ. ಆದರೆ ನವೆಂಬರ್ 24ರಂದು ಮುಕ್ತಾಯಗೊಂಡ ಟಿ-10 ಕ್ರಿಕೆಟ್ ಲೀಗ್‌ನಲ್ಲಿ ಬೌಲಿಂಗ್‌ನಲ್ಲಿ ಮಿಂಚಿದರು.
ಬ್ರಾವೋ 2018 ರಲ್ಲಿ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದರು ಆದರೆ ವಿಶ್ವದಾದ್ಯಂತ ಫ್ರ್ಯಾಂಚೈಸ್ ಆಧಾರಿತ ಕ್ರಿಕೆಟ್ ಲೀಗ್‌ಗಳಲ್ಲಿ ಆಡುತ್ತಿದ್ದಾರೆ. 2004 ರಲ್ಲಿ ಅಂತರ್‌ರಾಷ್ಟ್ರೀಯ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ ಬ್ರಾವೋ ಅವರು ವೆಸ್ಟ್ ಇಂಡೀಸ್ ಪರ 40 ಟೆಸ್ಟ್, 164 ಏಕದಿನ ಮತ್ತು 66 ಟ್ವೆಂಟಿ-20 ಪಂದ್ಯಗಳನ್ನು ಆಡಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಮುಂಬರುವ ಋತುವಿನಲ್ಲಿ ಬ್ರಾವೋ ಚೆನ್ನೈ ಸೂಪರ್ ಕಿಂಗ್ಸ್ ಪರವಾಗಿ ಕಾಣಿಸಿಕೊಳ್ಳಲಿದ್ದಾರೆ. ವೆಸ್ಟ್ ಇಂಡೀಸ್ ತಾರೆ 2018 ರಲ್ಲಿ ಸಿಎಸ್ಕೆ ಚಾಂಪಿಯನ್ ಪಟ್ಟಕ್ಕೇರುವಲ್ಲಿ ಪ್ರಮುಖ ಪಾತ್ರವಹಿಸಿದರು ಮತ್ತು 2019ರಲ್ಲೂ ತಂಡದಲ್ಲಿ ಸ್ಥಿರ ಬೌಲಿಂಗ್ ಪ್ರದರ್ಶನದ ಮೂಲಕ ಮಿಂಚಿದ್ದರು.
ಪ್ರಾದೇಶಿಕ ಪಕ್ಷ ಮಕ್ಕಲ್ ನೀಧಿ ಮಾಯಮ್ ಮುಖ್ಯಸ್ಥ ಕಮಲ್ ಹಾಸನ್ ಬಲಗಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿ ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ.







