‘ಉನ್ನಾವೋಗಿಂತಲೂ ಘೋರ ಪರಿಸ್ಥಿತಿ ಕಾದಿದೆ’
ಅತ್ಯಾಚಾರ ಸಂತ್ರಸ್ತೆಗೆ ಆರೋಪಿಯಿಂದ ಪೋಸ್ಟರ್ ಬೆದರಿಕೆ ?

ಲಕ್ನೋ, ಡಿ.12: ಉತ್ತರಪ್ರದೇಶದ ಭಾಗಪತ್ನಲ್ಲಿ ಅತ್ಯಾಚಾರ ಸಂತ್ರಸ್ತೆಯೊಬ್ಬರ ಮನೆಯ ಹೊರಭಾಗದಲ್ಲಿ ಕೈರಹದ ಪೋಸ್ಟರ್ ಒಂದು ಕಂಡುಬಂದಿದ್ದು, ಆರೋಪಿಗಳ ವಿರುದ್ಧ ದಾಖಲಿಸಿರುವ ಪ್ರಕರಣವನ್ನು ಹಿಂತೆಗೆದುಕೊಳ್ಳದೆ ಇದ್ದಲ್ಲಿ ಆಕೆಯ ಪರಿಸ್ಥಿತಿ ‘ಉನ್ನಾವೋದಲ್ಲಿ ನಡೆದುದಕ್ಕಿಂತಲೂ ಘೋರವಾಗಲಿದೆ’ ಎಂದು ಅದರಲ್ಲಿ ಎಚ್ಚರಿಕೆ ನೀಡಲಾಗಿದೆ.
ಈ ಸಂತ್ರಸ್ತೆಯನ್ನು ಕಳೆದ ವರ್ಷ ಹೊಸದಿಲ್ಲಿಯಲ್ಲಿರುವ ಮುಖರ್ಜಿ ನಗರ್ ಪ್ರದೇಶದಲ್ಲಿ ಅಮಲು ಪದಾರ್ಥ ತಿನ್ನಿಸಿ, ಅತ್ಯಾಚಾರ ಮಾಡಲಾಗಿತ್ತೆಂದು ಆರೋಪಿಸಲಾಗಿದೆ.
ಭಿತ್ತಿಪತ್ರವನ್ನು ಹಚ್ಚಿದ ಆರೋಪದಲ್ಲಿ ಪೊಲೀಸರು ಓರ್ವ ವ್ಯಕ್ತಿಯನ್ನು ಈಗಾಗಲೇ ಬಂಧಿಸಿದ್ದಾರೆ ಹಾಗೂ ಸಂತ್ರಸ್ತೆಗೆ ಭದ್ರತೆಯನ್ನು ಒದಗಿಸಲಾಗಿದೆ. ಆಕೆ ಶುಕ್ರವಾರ ಪ್ರಕರಣಕ್ಕೆ ಸಂಬಂಧಿಸಿ ದಿಲ್ಲಿಯ ನ್ಯಾಯಾಲಯದಲ್ಲಿ ತನ್ನ ಹೇಳಿಕೆಯನ್ನು ನೀಡಲಿದ್ದಾಳೆ.
ತನ್ನ ಗ್ರಾಮದ ನಿವಾಸಿಯಾದ ಆರೋಪಿ ಸೋಹ್ರಾನ್ ಸಿಂಗ್, ತನ್ನ ಮನೆಯ ಹೊರಭಾಗದಲ್ಲಿ ಈ ಬೆದರಿಕೆಯ ಸಂದೇಶವಿರುವ ಪೋಸ್ಟರ್ ಹಚ್ಚಿದ್ದಾನೆಂದು ಅತ್ಯಾಚಾರ ಸಂತ್ರಸ್ತೆಯು ಗುರುವಾರ ರಾತ್ರಿ ಪೊಲೀಸ್ ಅಧೀಕ್ಷಕ ಪ್ರತಾಪ್ ಗೋಪೇಂದ್ರ ಅವರಿಗೆ ದೂರು ನೀಡಿದ್ದಾಳೆ.
ಕಳೆದ ವರ್ಷ ಆರೋಪಿ ಸೊಹ್ರಾನ್ ಸಿಂಗ್ ತನ್ನನ್ನು ಆತನ ಸ್ನೇಹಿತನ ಜೊತೆ ಕರೆದೊಯ್ದು, ಅಲ್ಲಿ ತನಗೆ ಅಮಲು ಪದಾರ್ಥ ತಿನ್ನಿಸಿ ಅತ್ಯಾಚಾರವೆಸಗಿದ್ದೆಂದ ಸಂತ್ರಸ್ತೆಯು ಆರೋಪಿಸಿದ್ದಾಳೆ. ಆರೋಪಿಯು ಘಟನೆಯ ವಿಡಿಯೋ ಚಿತ್ರೀಕರಣ ಮಾಡಿದ್ದು, ಅದನ್ನು ಬಳಸಿಕೊಂಡು ತನ್ನನ್ನು ಬ್ಲಾಕ್ಮೇಲ್ ಮಾಡುತ್ತಿದ್ದ ಹಾಗೂ ಮತ್ತೊಮ್ಮೆ ತನ್ನ ಮೇಲೆ ಅತ್ಯಾಚಾರವೆಸಗಿದ್ದನೆಂದು ಸಂತ್ರಸ್ತೆಯು ಆರೋಪಿಸಿದ್ದಾಳೆಂದು ಎಸ್ಪಿ ಪ್ರತಾಪ್ ಗೋಪೆಂದ್ರ ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ದಿಲ್ಲಿ ಪೊಲೀಸರಿಂದ ಬಂಧಿತನಾದ ಸೊಹ್ರಾನ್ ಸಿಂಗ್ನನ್ನು ಜೈಲಿನಲ್ಲಿರಿಸಲಾಗಿತ್ತು. ಆದರೆ ಬುಧವಾರದಂದು ಸೊಹ್ರಾನ್ ಸಿಂಗ್ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದ ಹಾಗೂ ಆ ದಿನವೇ ಸಂತ್ರಸ್ತೆಯ ನಿವಾಸದ ಮುಂದೆ ಪೋಸ್ಟರ್ಗಳು ಕಾಣಿಸಿಕೊಂಡಿವೆಯೆಂದು ಹೇಳಲಾಗಿದೆ.
ಆದಾಗ್ಯೂ ಆರೋಪಿ ಸೊಹ್ರಾನ್ ಸಿಂಗ್ ತನ್ನ ಮೇಲಿನ ಆರೋಪವನ್ನು ನಿರಾಕರಿಸಿದ್ದಾನೆ. ಪ್ರಕರಣದಲ್ಲಿ ತನ್ನನ್ನು ಸಿಲುಕಿಸುವ ಉದ್ದೇಶದಿಂದಲೇ ಹಳ್ಳಿಯಲ್ಲಿರುವ ತನ್ನ ವಿರೋಧಿಗಳು ಪೋಸ್ಟರ್ ಹಚ್ಚಿದ್ದಾರೆಂದು ಆತ ಆರೋಪಿಸಿದ್ದಾನೆ.