ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಸಂಸ್ಕಾರ ಬೆಳೆಯಲು ಸಾಧ್ಯ: ಪಲಿಮಾರು ಶ್ರೀ

ಉಡುಪಿ, ಡಿ.13: ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಸಂಸ್ಕಾರ ಬೆಳೆಯಲು ಸಾಧ್ಯ. ಆದುದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡುವ ಕೆಲಸ ಮಾಡಬೇಕು ಎಂದು ಪರ್ಯಾಯ ಪಲಿಮಾರು ಮಠಾಧೀಶ ಶ್ರೀವಿದ್ಯಾ ಧೀಶ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾದ ತುಳು ಶಿವಳ್ಳಿ ಬ್ರಾಹ್ಮಣರ ಪ್ರಥಮ ವಿಶ್ವ ಸಮ್ಮೇಳನದ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆಯನ್ನು ಶುಕ್ರವಾರ ನೆರವೇರಿಸಿ ಅವರು ಮಾತನಾಡುತಿದ್ದರು.
ಭೀಮನಕಟ್ಟೆ ಮಠಾಧೀಶ ಶ್ರೀರಘುವರೇಂದ್ರ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ತೌಳವ ಸಂಸ್ಕೃತಿ ಇಂದು ಕ್ಷೀಣವಾಗುತ್ತಿದೆ. ಪರಂಪರೆಯ ಬಗ್ಗೆ ಶ್ರದ್ಧೆ ಕಡಿಮೆ ಆಗುತ್ತಿದೆ. ಹೆಸರಿಗೆ ಮಾತ್ರ ಮಠಗಳಿದ್ದರೂ ಅಲ್ಲಿನ ಸ್ವಾಮೀಜಿ ಗಳ ಮಹಿಮೆ ಬಗ್ಗೆ ಅರಿವು ಇಲ್ಲ. ಇದರ ಪರಿಣಾಮ ನಾವು ಇಂದು ಶಿರ್ಡಿ, ಶಬರಿಮಲೆಗೆ ಹೋಗುತ್ತಿದ್ದೇವೆ. ಸ್ವಾಮೀಜಿ ಮಹಿಮೆಯ ಬಗ್ಗೆ ಅರಿತುಕೊಂಡು ನಮ್ಮಲ್ಲಿರುವ ಅಜ್ಞಾನವನ್ನು ದೂರ ಮಾಡಬೇಕು ಎಂದರು.
ಬೆಂಗಳೂರಿನ ಉದ್ಯಮಿ ರಾಮದಾಸ್ ಮಡಮಣ್ಣಾಯ ಮಾತನಾಡಿ, ತುಳು ಶಿವಳ್ಳಿ ಬ್ರಾಹ್ಮಣರು ಮನಸ್ಸು ಮಾಡಿದರೆ ಯಾವ ಸಾಧನೆ ಕೂಡ ಮಾಡ ಬಹುದು. ನಮ್ಮ ಸಮಾಜದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿ, ಸ್ವಂತ ಉದ್ಯಮ ಸ್ಥಾಪಿಸಲು ಪ್ರೋ್ಸಾಹ ನೀಡಬೇಕು ಎಂದು ತಿಳಿಸಿದರು.
ಪಲಿಮಾರು ಮಠದ ಕಿರಿಯ ಯತಿ ಶ್ರೀವಿದ್ಯಾರಾಜೇಶ್ವರ ತೀರ್ಥ ಸ್ವಾಮೀಜಿ, ಸಮ್ಮೇಳನದ ಪ್ರಧಾನ ಸಂಚಾಲಕ ಎಂ.ಬಿ.ಪುರಾಣಿಕ್, ಕಾರ್ಯಾಧ್ಯಕ್ಷ ಮಂಜು ನಾಥ ಉಪಾಧ್ಯಾಯ ಪರ್ಕಳ ಉಪಸ್ಥಿತರಿದ್ದರು.
ಸಮ್ಮೇಳನ ಸಮಿತಿಯ ಅಧ್ಯಕ್ಷ ಡಾ.ಬಾಲಕೃಷ್ಣ ಮೂಡಂಬಡಿತ್ತಾಯ ಪಿ.ಕೆ. ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಸುಧಾಕರ್ ರಾವ್ ಪೇಜಾವರ ವಂದಿಸಿದರು. ಮರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಳು ಜರಗಿದವು.







