ಅಂಗಡಿಗಳಿಗೆ ದಾಳಿ: 21 ಕೆ.ಜಿ. ನಿಷೇಧಿತ ಪ್ಲಾಸ್ಟಿಕ್ ವಶ
ಉಡುಪಿ, ಡಿ.13: ನಗರದ ತರಕಾರಿ ಮಾರುಕಟ್ಟೆ, ಕೆಎಸ್‌ಆರ್‌ಟಿಸಿ ಮತ್ತು ಸರ್ವಿಸ್ ಬಸ್ ನಿಲ್ದಾಣದ ಹೋಟೆಲ್ಗಳು ಮತ್ತು ವಿವಿಧ ಅಂಗಡಿಗಳಿಗೆ ದಾಳಿ ನಡೆಸಿದ ಉಡುಪಿ ನಗರಸಭೆ ಅಧಿಕಾರಿಗಳ ತಂಡ ಒಟ್ಟು 21 ಕೆ.ಜಿ. ನಿಷೇಧಿತ ಪ್ಲಾಸ್ಟಿಕ್ ವಶಪಡಿಸಿಕೊಂಡು 15000ರೂ. ದಂಡ ವಸೂಲಿ ಮಾಡಿದೆ. ಈವರೆಗೆ ತರಕಾರಿ ಮಾರುಕಟ್ಟೆಗೆ ದಾಳಿ ಮಾಡುವ ವೇಳೆ ವ್ಯಾಪಾರಿಗಳು ಅಧಿಕಾರಿಗಳಿಗೆ ಚಳ್ಳೆಹಣ್ಣು ತಿನ್ನಿಸಿ ಪ್ಲಾಸ್ಟಿಕ್ ಸಿಗದಂತೆ ಮಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಪೌರಾಯುಕ್ತ ಆನಂದ ಕಲ್ಲೋಳಿಕರ್ ಅಧಿಕಾರಿಗಳ ತಂಡ ರಚಿಸಿ ಪ್ಲಾಸ್ಟಿಕ್ ಇರುವ ವ್ಯಾಪಾರಿಗಳನ್ನು ದೂರದಿಂದ ಗಮನಿಸಿ ಏಕಕಾಲದಲ್ಲಿ ದಾಳಿ ನಡೆಸಿ ನಿಷೇಧಿತ ಪ್ಲಾಸ್ಟಿಕ್‌ಗಳನ್ನು ವಶಪಡಿಸಿಕೊಂಡು ದಂಡ ವಿಧಿಸಿದ್ದಾರೆ.
ಈ ದಾಳಿಯಲ್ಲಿ ಪರಿಸರ ಅಭಿಯಂತರ ಸ್ನೇಹ, ಹಿರಿಯ ಆರೋಗ್ಯ ನಿರೀಕ್ಷಕ ರಾದ ಶಶಿರೇಖಾ, ಕರುಣಾಕರ ವಿ. ಮತ್ತು ಕಿರಿಯ ಆರೋಗ್ಯ ನಿರೀಕ್ಷಕ ಪ್ರಸನ್ನ ಕುಮಾರ್, ಸ್ಯಾನಿಟರಿ ಸೂಪರ್ವೈಸರ್‌ಗಳಾದ ದಾಮೋದರ್, ನಾಗಾರ್ಜುನ, ಮನೋಹರ್ ಕರ್ಕಡ, ಸುರೇಶ್, ಚೇತನ್ ಹಾಗೂ ಪೌರಕಾರ್ಮಿಕರು ಮತ್ತು ಉಡುಪಿ ನಗರ ಠಾಣೆಯ ಪೊಲೀಸರು ಭಾಗವಹಿಸಿದ್ದರು.