ಗಾಂಧಿ, ನೆಹರೂರಂತೆ ಸಾವರ್ಕರ್ ದೇಶಕ್ಕಾಗಿ ಹೋರಾಡಿದ್ದಾರೆ: ಶಿವಸೇನೆ
ರಾಹುಲ್ ಗಾಂಧಿ ಹೇಳಿಕೆಗೆ ಗರಂ ಆದ ಸಂಜಯ್ ರಾವತ್

ಮುಂಬೈ: ತಾನು ರಾಹುಲ್ ಸಾವರ್ಕರ್ ಅಲ್ಲ ಎನ್ನುವ ರಾಹುಲ್ ಗಾಂಧಿ ಹೇಳಿಕೆ ವಿರುದ್ಧ ಮಿತ್ರ ಪಕ್ಷ ಶಿವಸೇನೆ ಗರಂ ಆಗಿದೆ. ಕಾಂಗ್ರೆಸ್ ಸಾವರ್ಕರ್ ರನ್ನು ಅವಮಾನಿಸಬಾರದು. ಮಹಾತ್ಮಾ ಗಾಂಧಿ ಮತ್ತು ಜವಹರಲಾಲ್ ನೆಹರೂ ಅವರನ್ನು ಪಕ್ಷವು ಗೌರವಿಸುತ್ತದೆ ಎಂದು ಶಿವಸೇನೆ ಹೇಳಿದೆ.
"ನನ್ನ ಹೆಸರು ರಾಹುಲ್ ಗಾಂಧಿ ಹೊರತು ರಾಹುಲ್ ಸಾವರ್ಕರ್ ಅಲ್ಲ. ಸತ್ಯವನ್ನು ಹೇಳಿದ್ದಕ್ಕಾಗಿ ನಾನು ಯಾವತ್ತಿಗೂ ಕ್ಷಮೆ ಯಾಚಿಸುವುದಿಲ್ಲ" ಎಂದು ಭಾರತ್ ಬಚಾವೊ ರ್ಯಾಲಿಯಲ್ಲಿ ರಾಹುಲ್ ಗಾಂಧಿ ಹೇಳಿದ್ದರು.
ಈ ಹೇಳಿಕೆ ಬಗ್ಗೆ ಶಿವಸೇನೆ ನಾಯಕ ಸಂಜಯ್ ರಾವತ್ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದು, "ನಾವು ಪಂಡಿತ್ ನೆಹರೂ ಮತ್ತು ಮಹಾತ್ಮಾ ಗಾಂಧಿಯವರನ್ನು ಗೌರವಿಸುತ್ತೇವೆ. ನೀವು ವೀರ ಸಾವರ್ಕರ್ ರನ್ನು ಅವಮಾನಿಸಬಾರದು. ಮಹಾರಾಷ್ಟ್ರಕ್ಕೆ ಮಾತ್ರವಲ್ಲ, ದೇಶಕ್ಕೆ ಸಾವರ್ಕರ್ ದೇವರಿದ್ದಂತೆ. ನೆಹರೂ, ಗಾಂಧಿಯಂತೆ ಸಾವರ್ಕರ್ ಕೂಡ ದೇಶದ ಸ್ವಾತಂತ್ರ್ಯಕ್ಕೆ ತನ್ನ ಪ್ರಾಣ ಮುಡಿಪಾಗಿಟ್ಟರು. ಇಂತಹ ಎಲ್ಲಾ ದೇವರುಗಳನ್ನು ಗೌರವಿಸಬೇಕು. ಈ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ" ಎಂದಿದ್ದಾರೆ.