ಶೇಕಡ 25ರಷ್ಟು ಟೋಲ್ ಲೇನ್ಗಳಲ್ಲಿ ಇನ್ನೂ ಒಂದು ತಿಂಗಳು ನಗದು ಸ್ವೀಕಾರ
ಹೊಸದಿಲ್ಲಿ, ಡಿ.15: ತಮ್ಮ ವಾಹನಗಳಿಗೆ ಇನ್ನೂ ಫಾಸ್ಟ್ಯಾಗ್ ಪಡೆಯದವರಿಗೆ ಮತ್ತೆ ಒಂದು ತಿಂಗಳ ಅವಕಾಶ ನೀಡಲಾಗಿದೆ. ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಟೋಲ್ಗಳಲ್ಲಿ ಜನವರಿ 15ರವರೆಗೆ ನಗದು ಸ್ವೀಕರಿಸಲು ಅವಕಾಶ ನೀಡಬೇಕು ಎಂದು ಶನಿವಾರ ರಾಷ್ಟ್ರೀಯ ಹೆದ್ದಾರಿ ಇಲಾಖೆ ಸೂಚನೆ ನೀಡಿದೆ. ಆದರೆ ಇಂಥ ನಗದು ಸ್ವೀಕಾರ ಕೌಂಟರ್ಗಳು ಒಟ್ಟು ಟೋಲ್ ಸಂಗ್ರಹ ಕೌಂಟರ್ಗಳ ಶೇಕಡ 25ನ್ನು ಮೀರಬಾರದು ಎಂದು ಸ್ಪಷ್ಟಪಡಿಸಿದೆ.
ಫ್ಯಾಸ್ಟ್ಯಾಗ್ ಲೇನ್ಗಳಿಗೆ ಇತರ ವಾಹನಗಳು ಪ್ರವೇಶಿಸಲು ಅವಕಾಶ ನೀಡಬಾರದು ಹಾಗೂ ನಗದು ಸ್ವೀಕರಿಸಲು ಎರಡೂ ಬದಿಗಳಲ್ಲಿ ತಲಾ ಒಂದು ಲೇನ್ಗಳನ್ನು ಮಾತ್ರ ಮೀಸಲಿಡಬೇಕು ಎಂದು ಈ ಮೊದಲು ಸಚಿವಾಲಯ ಸಲಹೆ ಮಾಡಿತ್ತು. ಆದರೆ ಪ್ರಯಾಣಿಕರ ಸಮಸ್ಯೆಗಳನ್ನು ಪರಿಗಣಿಸಿ ಈ ನಿಯಮಾವಳಿಯನ್ನು ಸಡಿಲಿಸಿ, ರಾಷ್ಟ್ರೀಯ ಹೆದ್ದಾರಿ ಟೋಲ್ ಪ್ಲಾಝಾಗಳ ಕನಿಷ್ಠ ಶೇಕಡ 75ರಷ್ಟು ಟೋಲ್ಲೇನ್ಗಳು ಎಲೆಕ್ಟ್ರಾನಿಕ್ ಟೋಲ್ ಸಂಗ್ರಹಕ್ಕೆ ವ್ಯವಸ್ಥೆ ಹೊಂದಿರಬೇಕು ಎಂದು ಹೇಳಿದೆ.
ಡಿಸೆಂಬರ್ ಒಂದರಿಂದ ಫಾಸ್ಟ್ಯಾಗ್ ಹೊಂದಿರದ ಯಾವ ವಾಹನಗಳು ಕೂಡಾ ಟೋಲ್ ಪ್ಲಾಝಾ ಪ್ರವೇಶಿಸುವಂತಿಲ್ಲ ಎಂದು ಇದಕ್ಕೂ ಮುನ್ನ ಸರ್ಕಾರ ಆದೇಶ ಮಾಡಿತ್ತು. ಬಳಿಕ ಇದನ್ನು ಡಿಸೆಂಬರ್ 15ರವರೆಗೆ ವಿಸ್ತರಿಸಲಾಗಿತ್ತು. ಜತೆಗೆ ಪ್ರತಿ ಪ್ಲಾಝಾಗಳಲ್ಲಿ ದೊಡ್ಡ ಗಾತ್ರದ ವಾಹನಗಳಿಗಾಗಿ ಒಂದು ಪ್ರತ್ಯೇಕ ಹೈಬ್ರೀಡ್ ಲೇನ್ ಮೀಸಲಿಡುವಂತೆ ಹಾಗೂ ಇಲ್ಲಿ ನಗದು ಮತ್ತು ಫಾಸ್ಟ್ಯಾಗ್ ಎರಡನ್ನೂ ಸ್ವೀಕರಿಸುವಂತೆ ಸೂಚನೆ ನೀಡಿತ್ತು.