ಕೊಲ್ಲಿ ದೇಶಗಳೊಂದಿಗಿನ ವಿವಾದದಲ್ಲಿ ಸ್ವಲ್ಪವೇ ಪ್ರಗತಿ: ಕತರ್
ದೋಹಾ (ಖತರ್), ಡಿ. 15: ಕತರ್ ಮತ್ತು ಅದರ ನೆರೆ ದೇಶಗಳ ನಡುವಿನ ವಿವಾದಕ್ಕೆ ಪರಿಹಾರ ಕಂಡುಹಿಡಿಯುವಲ್ಲಿ ಸ್ವಲ್ಪ ಪ್ರಗತಿಯಷ್ಟೇ ಕಂಡುಬಂದಿದೆ ಎಂದು ಕತರ್ ವಿದೇಶ ಸಚಿವ ಶೇಖ್ ಮುಹಮ್ಮದ್ ಬಿನ್ ಅಬ್ದುರ್ರಹ್ಮಾನ್ ಅಲ್-ಥಾನಿ ಹೇಳಿದ್ದಾರೆ.
ಕತರ್ ಪ್ರಧಾನಿ ಶೇಖ್ ಅಬ್ದುಲ್ಲಾ ಬಿನ್ ನಾಸಿರ್ ಅಲ್ ಥಾನಿ ಸೌದಿ ಅರೇಬಿಯಕ್ಕೆ ಭೇಟಿ ನೀಡಿದ ಕೆಲವೇ ದಿನಗಳ ಬಳಿಕ ಆ ದೇಶದ ವಿದೇಶ ಸಚಿವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸೌದಿ ಅರೇಬಿಯ, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ), ಬಹರೈನ್ ಮತ್ತು ಈಜಿಪ್ಟ್ ದೇಶಗಳು 2017 ಜೂನ್‌ನಲ್ಲಿ ಕತರ್‌ನೊಂದಿಗಿನ ಎಲ್ಲ ರಾಜತಾಂತ್ರಿಕ ಮತ್ತು ವ್ಯಾಪಾರ ಸಂಬಂಧಗಳನ್ನು ಕಡಿದುಕೊಂಡಿವೆ. ಖತರ್ ಭಯೋತ್ಪಾದನೆಗೆ ಬೆಂಬಲ ನೀಡುತ್ತಿದೆ ಎನ್ನವುದು ಆ ದೇಶಗಳ ಆರೋಪವಾಗಿದೆ.
ಸೌದಿ ಅರೇಬಿಯದಲ್ಲಿ ಮಂಗಳವಾರ ನಡೆದ ಕೊಲ್ಲಿ ಸಹಕಾರ ಮಂಡಳಿ (ಜಿಸಿಸಿ)ಯ ವಾರ್ಷಿಕ ಶೃಂಗ ಸಮ್ಮೇಳನದಲ್ಲಿ ಕತರ್ ಪ್ರಧಾನಿ ಭಾಗವಹಿಸಿದ್ದರು. ಅದು 2017ರ ಬಳಿಕ ಈ ಸಮ್ಮೇಳನದಲ್ಲಿ ಖತರ್‌ನ ಅತ್ಯುನ್ನತ ಮಟ್ಟದ ಪ್ರಾತಿನಿಧ್ಯವಾಗಿತ್ತು.
ಪ್ರಾದೇಶಿಕ ನಾಯಕರ ಜೊತೆಗಿನ ಸಭೆಯಲ್ಲಿ ಏನಾದರೂ ಪ್ರಗತಿ ಸಾಧಿಸಲಾಗಿದೆಯೇ ಎಂಬ ‘ರಾಯ್ಟರ್’ ಪ್ರಶ್ನೆಗೆ ಉತ್ತರಿಸಿದ ಕತರ್ ವಿದೇಶ ಸಚಿವರು, ‘‘ಸ್ವಲ್ಪವೇ ಪ್ರಗತಿಯಾಗಿದೆ’’ ಎಂದರು.





