ಬಾರಕೂರು ನವೀಕೃತ ಸಂತ ಪೀಟರ್ ಚರ್ಚ್ ಉದ್ಘಾಟನೆ

ಉಡುಪಿ, ಡಿ.16: ದೇವಾಲಯಗಳು ದೇವರು ಮತ್ತು ಭಕ್ತರ ನಡುವಿನ ಶಾಶ್ವತ ಸಂಬಂಧದ ಸಂಕೇತವಾಗಿದ್ದು, ದೇವಾಲಯವು ಸಮಾಜದಲ್ಲಿ ಒಗ್ಗಟ್ಟನ್ನು ಸ್ಥಾಪಿಸಲು ಒಂದು ದಾರಿಯಾಗಿದೆ ಎಂದು ಉಡುಪಿ ಕೆಥೊಲಿಕ್ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಹೇಳಿದ್ದಾರೆ.
ಬಾರಕೂರಿನ ನವೀಕೃತಗೊಂಡ ಸಂತ ಪೀಟರ್ ದೇವಾಲಯವನ್ನು ರವಿವಾರ ಆಶೀರ್ವಚಿಸಿ, ಬಳಿಕ ನಡೆದ ಸಭಾಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಭಾರತೀಯ ಸಂಸ್ಕೃತಿಯಲ್ಲಿ ದೇವಾಲಯಗಳಿಗೆ ವಿಶೇಷ ಗೌರವವಿದೆ. ಕೇವಲ ಪೂಜೆ ಮತ್ತು ಪ್ರಾರ್ಥನೆ ಸಲ್ಲಿಸುವ ಸ್ಥಳವಾಗಿರದೆ ಎಲ್ಲರೂ ಒಂದು ಕುಟುಂಬದಂತೆ ಒಟ್ಟಾಗಿ ಸೇರಲು ಇರುವ ಒಂದು ಅವಕಾಶವಾಗಿದೆ. ಪ್ರತಿಯೊಬ್ಬರು ಕಲ್ಲು, ಗಾರೆಗಳಿಂದ ನಿರ್ಮಿಸಲಾದ ಕಟ್ಟಡಗಳಿಗೆ ನೀಡುವಷ್ಟು ಪ್ರಾಮುಖ್ಯತೆ ನಮ್ಮ ನಡುವೆ ಇರುವ ಬಡವರಲ್ಲಿ ಮುಖದಲ್ಲಿ ದೇವರನ್ನು ಕಾಣಲು ನೀಡಬೇಕು ಎಂದರು.
ಮುಖ್ಯ ಅತಿಥಿಯಾಗಿ ಮಂಗಳೂರು ದಕ್ಷಿಣದ ಮಾಜಿ ಶಾಸಕ ಜೆ.ಆರ್. ಲೋಬೊ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಹೊಸ ದೇವಾಲಯಗಳನ್ನು ಮಾಡುವಾಗ ಹಿಂದಿನ ಕಟ್ಟಡದ ಶೈಲಿಯನ್ನು ಸಂಪೂರ್ಣ ಮರೆಮಾಚ ಲಾಗುತ್ತದೆ ಆದರೆ ಬಾರಕೂರು ಚರ್ಚನ್ನು ಸಂಪೂರ್ಣ ಹಿಂದಿನ ಗೋಥಿಕ್ ಶೈಲಿಯನ್ನು ಉಳಿಸಿಕೊಂಡು ನವೀಕರಿಸಿರುವುದು ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ಚರ್ಚಿನಲ್ಲಿ ಸೇವೆ ಸಲ್ಲಿಸಿದ ಧರ್ಮಗುರುಗಳನ್ನು, ನವೀಕರಣಕ್ಕೆ ಧನಸಹಾಯ ನೀಡಿದ ದಾನಿಗಳನ್ನು, ಕಟ್ಟಡದ ಕಾಮಗಾರಿಗೆ ಸೇವೆ ನೀಡಿದ ಕೆಲಸಗಾರರರನ್ನು, ಚರ್ಚಿನ ವಾಳೆಗಳ ಗುರಿಕಾರರನ್ನು ಹಾಗೂ ಪಾಲನಾ ಸಮಿತಿಯ ವಿವಿಧ ಸಮಿತಿಗಳ ಸದಸ್ಯರುಗಳನ್ನು ಸನ್ಮಾನಿಸಲಾಯಿತು.
ಉಡುಪಿ ಧರ್ಮಪ್ರಾಂತ್ಯದ ಶ್ರೇಷ್ಠ ಗುರು ವಂ.ಬ್ಯಾಪ್ಟಿಸ್ಟ್ ಮಿನೇಜಸ್, ಕುಲಪತಿ ವಂ.ಸ್ಟ್ಯಾನಿ ಬಿ.ಲೋಬೊ, ಸಿಸ್ಟರ್ಸ್ ಆಫ್ ಚಾರಿಟಿಯ ವಂ.ಸಿಲ್ವಿಯಾ ಫೆರ್ನಾಂಡಿಸ್, ಬಾರಕೂರು ಗ್ರಾಪಂ ಅಧ್ಯಕ್ಷೆ ಶೈಲಾ ಡಿಸೋಜ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಿ.ಶಾಂತರಾಮ್ ಶೆಟ್ಟಿ, ಪಾಲನಾ ಸಮಿತಿಯ ಆಯೋಗಗಳ ಸಂಚಾಲಕ ಡೋಲ್ಫಿ ಡಿಸೋಜ ಉಪಸ್ಥಿತರಿದ್ದರು.
ಚರ್ಚಿನ ಧರ್ಮಗುರು ವಂ.ಫಿಲಿಪ್ ನೆರಿ ಆರಾನ್ಹಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಾಲನಾ ಸಮಿತಿಯ ಉಪಾಧ್ಯಕ್ಷ ಜೆರಾಲ್ಡ್ ಗೊನ್ಸಾಲ್ವಿಸ್ ಸ್ವಾಗತಿಸಿದರು. ಕಾರ್ಯದರ್ಶಿ ವಿವೆಟ್ ಲೂವಿಸ್ ವಂದಿಸಿದರು. ಎರಿಕ್ ಸೋನ್ಸ್ ಕಾರ್ಯಕ್ರಮ ನಿರೂಪಿಸಿದರು.







