ಡಿ.22ರಿಂದ 28: ತುಳುಕೂಟದಿಂದ ಕೆಮ್ತೂರು ತುಳುನಾಟಕ ಸ್ಪರ್ಧೆ
ಉಡುಪಿ, ಡಿ.16: ಕಳೆದ 17 ವರ್ಷಗಳಿಂದ ಉಡುಪಿ ತುಳುಕೂಟದ ವತಿಯಿಂದ ನಡೆಯುತ್ತಿರುವ ಕೆಮ್ತೂರು ದೊಡ್ಡಣ ಶೆಟ್ಟಿ ಸ್ಮಾರಕ ತುಳುನಾಟಕ ಸ್ಪರ್ಧೆ ಈ ಬಾರಿ ಇದೇ ಬರುವ ಡಿ.22ರಿಂದ 28ರವರೆಗೆ ಉಡುಪಿ ಎಂಜಿಎಂ ಕಾಲೇಜಿನ ಮುದ್ದಣಮಂಟಪದಲ್ಲಿ ಪ್ರತಿದಿನ ಸಂಜೆ 6:30ಕ್ಕೆ ನಡೆಯಲಿದೆ.
ತುಳು ನಾಟಕ ಸ್ಪರ್ಧೆಯ ಉದ್ಘಾಟನಾ ಸಮಾರಂಭ ಡಿ.22ರ ಸಂಜೆ 6 ಗಂಟೆಗೆ ನಡೆಯಲಿದ್ದು, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಸ್ಪರ್ಧೆಯನ್ನು ಉದ್ಘಾಟಿಸಲಿದ್ದಾರೆ. ಉಡುಪಿ ಮಲಬಾರ್ ಗೋಲ್ಡ್ ಎಂಡ್ ಡೈಮಂಡ್‌ನ ನಿರ್ದೇಶಕ ಹಫೀಝ್ ರಹ್ಮಾನ್, ಎಂಜಿಎಂ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ.ಜಿ.ವಿಜಯ ಮುಖ್ಯ ಅತಿಥಿಯಾಗಿ ಉಪಸ್ಥಿತರಿರುವರು. ಉಡುಪಿ ತುಳುಕೂಟದ ಅಧ್ಯಕ್ಷ ವಿ.ಜಿ.ಶೆಟ್ಟಿ ಅಧ್ಯಕ್ಷತೆ ವಹಿಸುವರು.
ಕಾರ್ಯಕ್ರಮದ ಬಳಿಕ ಪಾದುವರಂಗ ಅಧ್ಯಯನ ಕೇಂದ್ರ ಮಂಗಳೂರು ಇವರ ‘ಕೆಂಡೋನಿಯನ್ಸ್’ ನಾಟಕ ಪ್ರದರ್ಶನವಾಗಲಿದೆ. ಡಿ.23ರಂದು ವನಸುಮ ವೇದಿಕೆ ಕಟಪಾಡಿ ಇವರ ‘ಇಲ್‌ಲ್ ಇಲ್‌ಲ್ದ ಕಥೆ’, ಡಿ.24ರಂದು ಜರ್ನಿ ಥೇಟರ್ಸ್ ಗ್ರೂಪ್ ಮಂಗಳೂರು ಇವರ ‘ಗೋಧೂಳು’, ಡಿ.25ರಂದು ಭೂಮಿಗೀತ ಸಾಂಸ್ಕೃತಿಕ ವೇದಿಕೆ ಪಟ್ಲ ಇವರ ‘ನೆತ್ತರ ಕಲ್ಯಾಣ’, ಡಿ.26 ರಂದು ಕರಾವಳಿ ಕಲಾವಿದರು ಉಡುಪಿ ಇವರ ‘ಪಗರಿದ ಸುಡುಕಳ’, ಡಿ.27ರಂದು ನಮ ತುಳುವೆರ್ ಸಂಘಟನೆ ನಾಟ್ಕದೂರು ಮುದ್ರಾಡಿ ಇವರ ‘ಪತ್ತ್ ತರತ್ತಾಯನ ಕನತ ಕಥೆ’ ಹಾಗೂ ಡಿ.28ರಂದು ನವಸುಮ ರಂಗಮಂಚ ಕೊಡವೂರು ಇವರ ‘ಮರಣದ ಲೆ್ಪು’ ನಾಟಕ ಪ್ರದರ್ಶನಗೊಳ್ಳಲಿವೆ.
ತುಳು ಭಾಷೆ ಹಾಗೂ ನಾಟಕ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಸಹಕರಿಸಬೇಕೆಂದು ತುಳುನಾಟಕ ಸಂಚಾಲಕ ಬಿ.ಪ್ರಭಾಕರ ಭಂಡಾರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







