ಅಯೋಧ್ಯೆಯಲ್ಲಿ 4 ತಿಂಗಳ ಒಳಗೆ ರಾಮಮಂದಿರ ನಿರ್ಮಾಣ: ಅಮಿತ್ ಶಾ

ಪಾಕುರ್ (ಜಾರ್ಖಂಡ್), ಡಿ. 16: ಅಯೋಧ್ಯೆಯಲ್ಲಿ ನಾಲ್ಕು ತಿಂಗಳ ಒಳಗೆ ರಾಮ ಮಂದಿರ ನಿರ್ಮಾಣ ಮಾಡಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ಭರವಸೆ ನೀಡಿದ್ದಾರೆ.
ಜಾರ್ಖಂಡ್‌ನ ಪಾಕುರ್‌ನಲ್ಲಿ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅಮಿತ್ ಶಾ, ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಇಂದಿನಿಂದ 4 ತಿಂಗಳೊಳಗೆ ಅಯೋಧ್ಯೆಯಲ್ಲಿ ರಾಮ ಮಂದಿರ ತಲೆ ಎತ್ತಲಿದೆ ಎಂದರು. ದಶಕಗಳ ಹಿಂದಿನ ಅಯೋಧ್ಯೆಯ ದೇವಾಲಯ-ಮಸೀದಿ ಒಡೆತನ ವಿವಾದದ ಕುರಿತು ನವೆಂಬರ್ 9ರಂದು ನೀಡಿದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ 2.77 ಎಕರೆ ಭೂಮಿಯನ್ನು ರಾಮ ಮಂದಿರಕ್ಕೆ ಹಸ್ತಾಂತರಿಸುವಂತೆ ಹಾಗೂ ಪ್ರಮುಖ ಸ್ಥಳದಲ್ಲಿ 5 ಎಕರೆ ಭೂಮಿಯನ್ನು ಮಸೀದಿಗೆ ನೀಡುವಂತೆ ನಿರ್ದೇಶಿಸಿತ್ತು.
ದೇವಾಲಯ ನಿರ್ಮಾಣಕ್ಕೆ ಟ್ರಸ್ಟ್ ರೂಪಿಸಲು ನ್ಯಾಯಾಲಯ ಮೂರು ತಿಂಗಳ ಕಾಲಾವಕಾಶ ಕೂಡ ನೀಡಿತ್ತು. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಭರವಸೆ ನೀಡಿರುವ ಅಮಿತ್ ಶಾ, ಕಾಂಗ್ರೆಸ್ ಅನ್ನು ತರಾಟೆಗೆ ತೆಗೆದುಕೊಂಡರು. ಕಾಂಗ್ರೆಸ್ ರಾಷ್ಟ್ರವನ್ನು ಸುರಕ್ಷಿತವಾಗಿ ಇರಿಸುತ್ತಿಲ್ಲ ಹಾಗೂ ನಾಗರಿಕರ ಭಾವನೆಗಳಿಗೆ ಗೌರವ ನೀಡುತ್ತಿಲ್ಲ ಎಂದು ಆರೋಪಿಸಿದರು.





