ಶಿವಾಜಿ ಪ್ರತಿಮೆ: ಸಲಹಾ ಸಂಸ್ಥೆಗೆ 9.61 ಕೋ.ರೂ.ಗಳ ಅನುಚಿತ ಲಾಭ ಮಾಡಿಕೊಟ್ಟ ಸರಕಾರ
ಸಿಎಜಿ ವರದಿಯಲ್ಲಿ ಬಹಿರಂಗ

ಹೊಸದಿಲ್ಲಿ,ಡಿ.16: ಅರಬಿ ಸಮುದ್ರದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಸ್ಥಾಪನೆಗೆ ಸಂಬಂಧಿಸಿದಂತೆ ಡಿ-ಸ್ಕೋಪಿಂಗ್ ಅಥವಾ ಒಪ್ಪಿತ ಕಾರ್ಯಭಾರವನ್ನು ಕಡಿಮೆಗೊಳಿಸಿದ್ದು ಯೋಜನೆ ನಿರ್ವಹಣೆ ಸಲಹಾ ಸಂಸ್ಥೆ (ಪಿಎಂಸಿ)ಗಳಿಗೆ 9.61 ಕೋ.ರೂ.ಗಳ ಅನುಚಿತ ಲಾಭವನ್ನು ಮಾಡಿಕೊಟ್ಟಿದೆ ಮತ್ತು ಸರಕಾರದ ಬೊಕ್ಕಸಕ್ಕೆ 20.57 ಕೋ.ರೂ.ಗಳ ಹೆಚ್ಚುವರಿ ಹೊರೆಯನ್ನುಂಟು ಮಾಡಿದೆ ಎಂದು ಮಹಾ ಲೇಖಪಾಲ (ಸಿಎಜಿ)ರ ಕಚೇರಿಯು ತನ್ನ ವರದಿಯಲ್ಲಿ ಬಹಿರಂಗಗೊಳಿಸಿದೆ.
ಸಿಎಜಿಯು 2019 ಎಪ್ರಿಲ್-ಮೇ ನಡುವೆ ಛತ್ರಪತಿ ಶಿವಾಜಿ ಮಹಾರಾಜ ಸ್ಮಾರಕ ಯೋಜನೆಯ ಲೆಕ್ಕಪತ್ರಗಳ ಪರಿಶೋಧನೆಯನ್ನು ನಡೆಸಿತ್ತು. ಸಿಎಜಿ ವರದಿಯಂತೆ ಮಹಾರಾಷ್ಟ್ರ ಸರಕಾರವು 2019 ಆಗಸ್ಟ್‌ವರೆಗೆ 40 ತಿಂಗಳುಗಳ ಅವಧಿಗೆ 94.70 ಕೋ.ರೂ.ಗಳ ವೆಚ್ಚದಲ್ಲಿ ಏಜಿಸ್ ಇಂಡಿಯಾ ಕನ್ಸಲ್ಟಿಂಗ್ ಇಂಜಿನಿಯರ್ಸ್ ಪ್ರೈ.ಲಿ. ಮತ್ತು ಡಿಸೈನ್ ಅಸೋಸಿಯೇಟ್ಸ್ ಸಂಸ್ಥೆಗಳನ್ನು ಪಿಎಂಸಿಗಳಾಗಿ ನೇಮಕ ಮಾಡಿಕೊಳ್ಳಲು 2016,ಮಾರ್ಚ್‌ನಲ್ಲಿ ಅನುಮತಿ ನೀಡಿತ್ತು. ಆದರೆ 2017 ಫೆಬ್ರವರಿ ಮತ್ತು ಮಾರ್ಚ್‌ನಲ್ಲಿ ಕೆಲಸದ ನಿಧಾನಗತಿ ಮತ್ತು ಯೋಜನೆಯ ಸಂಕೀರ್ಣ ಸ್ವರೂಪವನ್ನು ಉಲ್ಲೇಖಿಸಿ ಸರಕಾರವು ಪಿಎಂಸಿಗೆ ಒಪ್ಪಿಸಿದ್ದ ಕೆಲಸವನ್ನು ಕಡಿಮೆ ಮಾಡಿತ್ತು ಮತ್ತು ಅವುಗಳನ್ನು ಯೋಜನೆಯ ಗುತ್ತಿಗೆದಾರ ಎಲ್ ಆ್ಯಂಡ್ ಟಿ ಲಿ.ಗೆ ಒಪ್ಪಿಸಿತ್ತು. ಇಂತಹ ಯೋಜನೆಯನ್ನು ನಿರ್ವಹಿಸುವ ಅನುಭವ ಪಿಡಬ್ಲ್ಯುಡಿಗೆ ಇಲ್ಲದ್ದರಿಂದ ಪಿಎಂಸಿಯನ್ನು ನೇಮಕ ಮಾಡಲಾಗಿತ್ತು ಎಂದು ಸರಕಾರದಲ್ಲಿನ ಮೂಲಗಳು ತಿಳಿಸಿವೆ.
ಪಿಡಬ್ಲ್ಯುಡಿಯ ಮುಖ್ಯ ಇಂಜಿನಿಯರ್ ಅವರು ಪಿಎಂಸಿ ಕಾರ್ಯಭಾರವನ್ನು ಕಡಿಮೆ ಮಾಡಿದ್ದರಿಂದ 82.46 ಕೋ.ರೂ.ಗಳ ಬದಲು 72.85 ಕೋ.ರೂ.ಗಳ ಪರಿಷ್ಕೃತ ಶುಲ್ಕವನ್ನು ಪಾವತಿಸುವಂತೆ ಸರಕಾರಕ್ಕೆ ಶಿಫಾರಸು ಮಾಡಿದ್ದರು. ಆದರೆ ಸರಕಾರವು ಯಾವುದೇ ಸಮರ್ಥನೆಯಿಲ್ಲದೆ 82.46 ಕೋ.ರೂ.ಗಳ ಪಾವತಿಗೆ ಒಪ್ಪಿಗೆ ನೀಡಿತ್ತು. ಇದು ಪಿಎಂಸಿಗೆ 9.61 ಕೋ.ರೂ.ಗಳ ಅನುಚಿತ ಲಾಭವನ್ನು ಮಾಡಿಕೊಡುವ ಜೊತೆಗೆ ಸರಕಾರದ ಬೊಕ್ಕಸಕ್ಕೆ 20.57 ಕೋ.ರೂ.ಗಳ ಹೆಚ್ಚುವರಿ ಹಣಕಾಸು ಹೊರೆಯನ್ನೂ ಉಂಟು ಮಾಡಿದೆ ಎಂದು ಸಿಎಜಿ ತನ್ನ ವರದಿಯಲ್ಲಿ ವಿವರಿಸಿದೆ.







