ಮಡಿಕೇರಿ: ವಿದ್ಯುತ್ ಸ್ಪರ್ಶಿಸಿ ಲೈನ್ ಮ್ಯಾನ್ ಸಾವು

ಮಡಿಕೇರಿ, ಡಿ.16: ವಿದ್ಯುತ್ ಕಂಬದಲ್ಲಿ ಲೈನ್ ದುರಸ್ತಿ ಕಾರ್ಯ ನಿರ್ವಹಿಸುತ್ತಿದ್ದ ಸಂದರ್ಭ ಏಕಾಏಕಿ ವಿದ್ಯುತ್ ಪ್ರವಹಿಸಿ ಲೈನ್ ಮ್ಯಾನ್ ಓರ್ವರು ಸ್ಥಳದಲ್ಲೇ ಸಾವನಪ್ಪಿದ ಘಟನೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಸಂಪಾಜೆ ಸಮೀಪದ ಚೆಂಬು ಗ್ರಾಮದಲ್ಲಿ ನಡೆದಿದೆ.
ಮಡಿಕೇರಿ ಚೆಸ್ಕಾಂ ವಿಭಾಗದಲ್ಲಿ ಲೈನ್ ಮ್ಯಾನ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಮೂಲತಃ ಅರಸೀಕೆರೆ ಸಮೀಪದ ಕಡೂರು ನಿವಾಸಿ ಯೋಗೇಶ್(24) ಮೃತ ಯುವಕ. ಘಟನೆ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳೆದ 4 ವರ್ಷಗಳಿಂದ ಸಂಪಾಜೆಯ ಚೆಂಬು ಗ್ರಾಮದ ಲೈನ್ ಮ್ಯಾನ್ ಆಗಿ ಯೋಗೇಶ್ ಕಾರ್ಯ ನಿರ್ವಹಿಸುತ್ತಿದ್ದರು. ಇಂದು ಬೆಳಗ್ಗೆ 9 ಗಂಟೆಯ ಸಮಯದಲ್ಲಿ ಅಲ್ಲಿನ ಗ್ರಾಮಸ್ಥರು ವಿದ್ಯುತ್ ಸಮಸ್ಯೆಯ ಬಗ್ಗೆ ಯೋಗೇಶ್‍ಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಚೆಂಬುವಿಗೆ ತೆರಳಿದ ಯೋಗೇಶ್ ಅಲ್ಲಿನ ಆನೆಹಳ್ಳ ಸಮೀಪದ ಗೋಪಾಲಕೃಷ್ಣ ಎಂಬವರ ತೋಟದ ಸಮೀಪವಿದ್ದ ಟ್ರಾನ್ಸ್ ಫಾರ್ಮರ್ ನಲ್ಲಿ ವಿದ್ಯುತ್ ದುರಸ್ಥಿ ಕಾರ್ಯ ನಿರ್ವಹಿಸುತ್ತಿದ್ದರು. ಈ ಸಂದರ್ಭ ಹೈಟೆನ್ಶನ್ ಲೈನ್‍ನಲ್ಲಿ ಏಕಾಏಕಿ ವಿದ್ಯುತ್ ಪ್ರವಹಿಸಿ ಕೆಳಗೆ ಬಿದ್ದಿದ್ದಾರೆ. ಸ್ಥಳೀಯರು ತಕ್ಷಣ ಅವರನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ಕರೆತಂದಿದ್ದಾರೆ. ಆದರೆ ಆ ಹೊತ್ತಿಗಾಗಲೇ ಅವರ ಪ್ರಾಣಪಕ್ಷಿ ಹಾರಿ ಹೋಗಿರುವುದನ್ನು ವೈದ್ಯರು ದೃಢಪಡಿಸಿದ್ದಾರೆ.
ಚೆಸ್ಕಾಂ ಇಲಾಖೆ ಇಂತಹ ಘಟನೆಗಳನ್ನು ತಡೆಯಲು ಅಗತ್ಯ ಸುರಕ್ಷಾ ಕವಚಗಳನ್ನು ತಮ್ಮ ಸಿಬ್ಬಂದಿಗಳಿಗೆ ನೀಡಬೇಕು. ಯೋಗೇಶ್ ಕುಟುಂಬಕ್ಕೆ ಇಲಾಖೆಯಿಂದ ತಕ್ಷಣವೇ ಪರಿಹಾರವನ್ನು ಒದಗಿಸಬೇಕೆಂದು ಚೆಂಬು ಗ್ರಾಮದ ಪ್ರಮುಖ ಹೊಸೂರು ಸೂರಜ್ ಹಾಗೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ.







