ಮಡಿಕೇರಿ: ಆಸ್ತಿ ವಿವಾದ; ಚೂರಿ ಇರಿದು ಮಹಿಳೆಯ ಕೊಲೆ

ಮಡಿಕೇರಿ, ಡಿ.16: ಮಡಿಕೇರಿ ಜೋಡುಪಾಲ ರಾಷ್ಟ್ರೀಯ ಹೆದ್ದಾರಿಯ ನಡುವಿನಲ್ಲಿರುವ ಅಬ್ಬಿಕೊಲ್ಲಿ ಬಳಿ ಚೂರಿ ಇರಿದು ಮಹಿಳೆಯೊಬ್ಬರನ್ನು ಹತ್ಯೆ ಮಾಡಿರುವ ಘಟನೆ ನಡೆದಿದೆ.
ಜೋಡುಪಾಲದ ಕುಡಿಯರ ಕಾಲೋನಿ ನಿವಾಸಿ ಕುಡಿಯರ ಹೊನ್ನಮ್ಮ(52) ಎಂಬವರೇ ಹತ್ಯೆಯಾದ ಮಹಿಳೆಯಾಗಿದ್ದಾರೆ. ತಮ್ಮ ಸಂಬಂಧಿ ಆನಂದ ಎಂಬಾತನೇ ಚಾಕು ಇರಿದ ಆರೋಪಿಯಾಗಿದ್ದು, ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಹಿಳೆಯ ಹತ್ಯೆಗೆ ಆಸ್ತಿ ಮತ್ತು ರಸ್ತೆ ವಿವಾದ ಕಾರಣ ಎಂದು ಹೇಳಲಾಗುತ್ತಿದ್ದು, ನಿಖರ ಕಾರಣ ಪೊಲೀಸರ ತನಿಖೆಯ ಬಳಿಕವೇ ಬೆಳಕಿಗೆ ಬರಬೇಕಿದೆ.
ಜೋಡುಪಾಲ ಅಬ್ಬಿಕೊಲ್ಲಿಯ ಬಳಿ ಇರುವ ಕುಡಿಯರ ಕಾಲೋನಿಯ ನಿವಾಸಿಗಳಾದ ವೆಂಕಪ್ಪ ಮತ್ತು ಹೊನ್ನಮ್ಮ ದಂಪತಿಗಳಾಗಿದ್ದು, ಆಸ್ತಿ ಮತ್ತು ರಸ್ತೆ ವಿವಾದದ ಕುರಿತಂತೆ ಸಂಬಂಧಿ ಆನಂದ ಎಂಬವರ ನಡುವೆ ಹಲವು ಸಮಯಗಳಿಂದ ವೈಷಮ್ಯ ಇತ್ತು ಎನ್ನಲಾಗಿದೆ. ಇಂದು ಸಂಜೆ 6 ಗಂಟೆಯ ಸಮಯದಲ್ಲಿ ಹೊನ್ನಮ್ಮ ಮತ್ತು ಆನಂದ ನಡುವೆ ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ತಿರುಗಿದೆ ಎಂದು ಹೇಳಲಾಗಿದೆ. ಈ ಸಂದರ್ಭ ಆನಂದ ತನ್ನ ಬಳಿ ಇದ್ದ ಚಾಕುವಿನಿಂದ ಹೊನ್ನಮ್ಮ ಅವರಿಗೆ ಇರಿದಿದ್ದಾನೆ. ತೀವ್ರ ರಕ್ತ ಸ್ರಾವದಿಂದ ಹೊನ್ನಮ್ಮ ಸ್ಥಳದಲ್ಲೇ ಕೊನೆ ಉಸಿರು ಎಳೆದಿದ್ದಾರೆ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕ ದಿವಾಕರ್, ಠಾಣಾಧಿಕಾರಿ ಚಂದ್ರಶೇಖರ್, ಅಪರಾಧ ವಿಭಾಗದ ಸಿಬ್ಬಂದಿಗಳು ತೆರಳಿದ್ದು, ಆರೋಪಿಯ ಬಂಧನಕ್ಕೆ ಕ್ರಮ ಕೈಗೊಂಡಿದ್ದಾರೆ.







