ಬೇಹುಗಾರಿಕೆ ಆರೋಪ: ಇಬ್ಬರು ಚೀನಿ ರಾಜತಾಂತ್ರಿಕರ ಉಚ್ಚಾಟನೆ
ವಾಶಿಂಗ್ಟನ್, ಡಿ. 16: ಅಮೆರಿಕದಲ್ಲಿರುವ ಚೀನಾ ರಾಯಭಾರ ಕಚೇರಿಯ ಇಬ್ಬರು ಅಧಿಕಾರಿಗಳು ವರ್ಜೀನಿಯದಲ್ಲಿರುವ ಸೂಕ್ಷ್ಮ ಸೇನಾ ನೆಲೆಯೊಂದಕ್ಕೆ ಭೇಟಿ ನೀಡಿದ ಬಳಿಕ, ಅಮೆರಿಕವು ಅವರನ್ನು ಸೆಪ್ಟಂಬರ್‌ನಲ್ಲಿ ಸದ್ದಿಲ್ಲದೆ ಉಚ್ಚಾಟಿಸಿದೆ ಎಂದು ‘ನ್ಯೂಯಾರ್ಕ್ ಟೈಮ್ಸ್’ ರವಿವಾರ ವರದಿ ಮಾಡಿದೆ.
ಬೇಹುಗಾರಿಕೆಯ ಸಂಶಯದಲ್ಲಿ ಅಮೆರಿಕವು ಚೀನಾ ರಾಜತಾಂತ್ರಿಕರನ್ನು ಉಚ್ಚಾಟಿಸಿರುವುದು 30 ವರ್ಷಗಳಿಗೂ ಹೆಚ್ಚಿನ ಅವಧಿಯಲ್ಲಿ ಇದೇ ಮೊದಲ ಬಾರಿಯಾಗಿದೆ.
ಉಚ್ಚಾಟನೆಗೊಂಡವರ ಪೈಕಿ ಕನಿಷ್ಠ ಒಬ್ಬ ಗುಪ್ತವಾಗಿ ವ್ಯವಹರಿಸುತ್ತಿರುವ ಚೀನಾದ ಬೇಹುಗಾರಿಕಾ ಅಧಿಕಾರಿಯಾಗಿದ್ದಾರೆ ಎಂದು ಭಾವಿಸಲಾಗಿದೆ ಎಂದು ಪತ್ರಿಕೆ ತಿಳಿಸಿದೆ.
ಚೀನಾದ ರಾಜತಾಂತ್ರಿಕರು ತಮ್ಮ ಪತ್ನಿಯರ ಸಮೇತ ವರ್ಜೀನಿಯದ ನಾರ್‌ಫಾಕ್ ಸಮೀಪದಲ್ಲಿರುವ ಸೂಕ್ಷ್ಮ ಸಂಸ್ಥಾಪನೆಯೊಂದರ ಪ್ರವೇಶ ದ್ವಾರದಲ್ಲಿರುವ ತನಿಖಾ ಠಾಣೆಗೆ ಹೋಗಿದ್ದರು ಎಂದು ನ್ಯೂಯಾರ್ಕ್ ಟೈಮ್ಸ್ ಹೇಳಿದೆ. ಈ ನೆಲೆಯಲ್ಲಿ ವಿಶೇಷ ಕಾರ್ಯಾಚರಣೆ ಪಡೆಗಳನ್ನು ಇರಿಸಲಾಗುತ್ತದೆ.
ಒಳಗೆ ಹೋಗಲು ಅವರಿಗೆ ಅನುಮತಿ ಇರದ ಕಾರಣ, ಕಾವಲುಗಾರರು ಅವರನ್ನು ವಾಪಸ್ ಕಳುಹಿಸಿದರು.
ಚೀನಿ ಅಧಿಕಾರಿಗಳ ಉದ್ದೇಶವೇನೆಂದು ಸ್ಪಷ್ಟವಾಗಿಲ್ಲವಾದರೂ, ನೆಲೆಯಲ್ಲಿನ ಭದ್ರತಾ ವ್ಯವಸ್ಥೆಯನ್ನು ಪರೀಕ್ಷಿಸಲು ಅವರು ಅಲ್ಲಿಗೆ ತೆರಳಿದ್ದರು ಎಂದು ಅಮೆರಿಕದ ಅಧಿಕಾರಿಗಳು ಹೇಳಿದ್ದಾರೆ.







