ಸವಾಲುಗಳನ್ನು ಎದುರಿಸಿದ ಸಾಹಿತಿ ಕುವೆಂಪು: ಡಾ.ಎಂ.ಎಸ್.ಆಶಾದೇವಿ
ಬೆಂಗಳೂರು, ಡಿ.16: ಆಧುನಿಕ ಭಾರತ ಎದುರಿಸುತ್ತಿದ್ದ ಸವಾಲುಗಳಿಗೆ ಕುವೆಂಪು ತಮ್ಮ ಸಾಹಿತ್ಯದ ಮೂಲಕ ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡಿದ್ದರು ಎಂದು ವಿಮರ್ಶಕಿ ಡಾ.ಎಂ.ಎ.ಆಶಾದೇವಿ ಅಭಿಪ್ರಾಯಪಟ್ಟಿದ್ದಾರೆ.
ನಗರದಲ್ಲಿಂದು ಗ್ರಾಮ ಭಾರತ ಸಾಂಸ್ಕೃತಿಕ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ಕುವೆಂಪು ಸಾಹಿತ್ಯ ಮತ್ತು ಚಿಂತನೆಗಳು ವಿಷಯದ ಕುರಿತ ಉಪನ್ಯಾಸದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕುವೆಂಪು ಅವರ ಆತ್ಮಶ್ರೀ ನಿರಂಕುಶ ಮತಿಗಳಾಗಿ ಎಂಬುದು ಬದುಕಿನ ಪ್ರಣಾಳಿಕೆಯಾಗಿದೆ. ಅವರು ಅಂದಿನ ಸಂದರ್ಭದಲ್ಲಿ ದೇಶದಲ್ಲಿನ ಅನೇಕ ಕೆಟ್ಟ ಪದ್ಧತಿಗಳ ವಿರುದ್ಧ ಧ್ವನಿ ಎತ್ತಿದ ಕ್ರಾಂತಿಕಾರಿ ಬರಹಗಾರರಾಗಿದ್ದಾರೆ ಎಂದು ಹೇಳಿದರು.
ರವೀಂದ್ರನಾಥ ಟಾಗೋರ್ ನಂತರ ಅವರ ಸ್ಥಾನವನ್ನು ಕರ್ನಾಟಕದ ಕವಿ ಕುವೆಂಪು ತುಂಬಬಲ್ಲರು ಎಂದು ಕೋಲ್ಕತ್ತಾದ ಪತ್ರಿಕೆಯೊಂದು ವರದಿ ಮಾಡಿತ್ತು. ಅವರ ಸಾಹಿತ್ಯವನ್ನು ಜಿ.ಎಸ್.ನಾಯರ್ ಅಂತಹ ವಿಮರ್ಶಕರೇ ಮೊದ ಮೊದಲು ಗಂಭೀರವಾಗಿ ಸ್ವೀಕಾರ ಮಾಡಿರಲಿಲ್ಲ ಎಂದು ಅವರು ತಿಳಿಸಿದರು.
ಕರ್ನಾಟಕದ ಬೌದ್ಧಿಕ ವಲಯವೂ ಗಂಭೀರವಾಗಿ ಸ್ವೀಕರಿಸಿರಲಿಲ್ಲ. ಆದರೆ, ಕುವೆಂಪು ಯಾವುದಕ್ಕೂ ಚಿಂತಿಸದೇ ತಮ್ಮ ಪಾಡಿಗೆ ತಾವು ಏನನ್ನು ಹೇಳಬೇಕೋ ಅದನ್ನು ಸಾಹಿತ್ಯದ ಮೂಲಕ ತಿಳಿಸಿದ್ದಾರೆ. ಹೀಗಾಗಿ, ಅವರೊಬ್ಬ ಘನತೆಯ ಸಾಹಿತಿ ಎಂದು ಅನಂತಮೂರ್ತಿ ತಿಳಿಸುತ್ತಿದ್ದರು ಎಂದರು.
ಇತಿಹಾಸದಲ್ಲಿ ಯಾವುದೇ ತಪ್ಪು ಘಟನೆ ನಡೆದರೂ ಅದನ್ನು ಸರಿ ಮಾಡಬೇಕಾದ ಕರ್ತವ್ಯ ಕವಿಗಳದ್ದು ಎಂದು ಕುವೆಂಪು ನಂಬಿದ್ದರು. ಅವರ ಕವನಗಳಲ್ಲಿ ಜಾತಿಯ ಕ್ರೌರ್ಯ, ಧರ್ಮದ ವಿಜೃಂಭಣೆಯ ವಿಚಾರಗಳನ್ನು ಬರೆಯುತ್ತಿದ್ದರು. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅದನ್ನು ವಿರೋಧಿಸುತ್ತಿದ್ದರು. ಅದಕ್ಕೆ ಉತ್ತರವೆಂಬಂತೆ ಶೂದ್ರ ತಪಸ್ವಿ ನಾಟಕವನ್ನು ಬರೆದಿದ್ದರು ಎಂದು ತಿಳಿಸಿದರು.
ಕುವೆಂಪುಗೆ ಸಮಾಜದಲ್ಲಿರುವ ಶ್ರೇಣಿಕೃತ ವ್ಯವಸ್ಥೆಯ ಬಗ್ಗೆ ತುಂಬಾ ಆಕ್ರೋಶವಿತ್ತು. ಅವರು ವಿವೇಕಾನಂದರನ್ನು ಗುರುವಾಗಿ ಸ್ವೀಕರಿಸಿದ್ದರು. ಕುವೆಂಪು ತಾನು ಬದುಕಿದ್ದಷ್ಟು ದಿನವೂ ತನ್ನ ಜಾತಿ, ಧರ್ಮ, ಮತ ಪಂಥಗಳ ವಿರುದ್ಧ ಆಕ್ರೋಶವನ್ನು ಬಿಟ್ಟಿರಲಿಲ್ಲ. ಹೀಗಾಗಿ, ಅವರು ಸರ್ವಕಾಲಕ್ಕೂ ಸಾಂಸ್ಕೃತಿಕ ನಾಯಕರಾಗಿ ನಮ್ಮಿಂದಿಗೆ ನಿಲ್ಲುತ್ತರೆ ಎಂದರು.
ಗ್ರಾಮ ಭಾರತ ಸಾಂಸ್ಕೃತಿಕ ವೇದಿಕೆಯ ಸಂಚಾಲಕ ಎಸ್.ಜಿ.ರಾಜಶೇಖರ್ ಮಾತನಾಡಿ, ಸಮಕಾಲೀನ ಜಗತ್ತಿನ ಎಲ್ಲ ತಲ್ಲಣಗಳ ಪರಿಹಾರಕ್ಕೆ ಕುವೆಂಪು ಸಾಹಿತ್ಯ ಉತ್ತರ ನೀಡಿದೆ. ಹೀಗಾಗಿ, ಯುವಜನತೆ ಹೆಚ್ಚು ಅವರ ಸಾಹಿತ್ಯವನ್ನು ಓದಲಿ ಎಂದರು.
ದಾರ್ಶನಿಕ ಕುವೆಂಪು
ಬುದ್ಧ, ಬಸವಣ್ಣ ನಂತರ ಕರ್ನಾಟಕದಲ್ಲಿ ಸಾಂಸ್ಕೃತಿಕ ವಿವೇಕದ ಕಣ್ಣನ್ನು ತೆರಿಸಿದ ಬಹುಮುಖ್ಯ ದಾರ್ಶನಿಕ ಕುವೆಂಪು ಆಗಿದ್ದಾರೆ. ಅವರು ಮರಣ ಹೊಂದಿದಾಗ ಮೈಸೂರಿನ ಉದಯರವಿಗೆ ಅನೇಕ ಶ್ರಮಿಕ ವರ್ಗದವರು ಸಾಲು ಸಾಲಾಗಿ ಬಂದಿದ್ದರು. ಕುವೆಂಪು ಶ್ರೀ ಸಾಮಾನ್ಯನ ಕವಿಯಾಗಿ, ಸಾಹಿತಿಯಾಗಿ ಹೊರ ಹೊಮ್ಮಿದ್ದಾರೆ.
-ಡಾ.ಎಂ.ಎಸ್.ಆಶಾದೇವಿ, ವಿಮರ್ಶಕಿ







