ಬಸವಣ್ಣ ಪ್ರತಿಮೆಯ ಕಾಮಗಾರಿ ಪರಿಶೀಲಿಸಿದ ಮೇಯರ್: ಮಾರ್ಚ್ ಅಂತ್ಯಕ್ಕೆ ಕಾಮಗಾರಿ ಪೂರ್ಣ- ಭರವಸೆ

ಬೆಂಗಳೂರು, ಡಿ.15: ನಗರದ ಚಾಲುಕ್ಯ ವೃತ್ತದಲ್ಲಿರುವ ಅಶ್ವಾರೂಢ ಬಸವಣ್ಣನವರ ಪ್ರತಿಮೆಯ ಸುತ್ತಲು ಅನುಭವ ಮಂಟಪ ಪರಿಕಲ್ಪನೆಯಡಿ ಮರು ವಿನ್ಯಾಸಗೊಳಿಸಲಾಗುತ್ತಿರುವ ಕಾಮಗಾರಿಯನ್ನು ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಸೋಮವಾರ ಪರಿಶೀಲನೆ ನಡೆಸಿದರು.
ಈ ಯೋಜನೆಗೆ ಮಾಜಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಅವರ ಅವಧಿಯಲ್ಲಿ ಅನುಮೋದನೆ ನೀಡಲಾಗಿತ್ತು. ಯೋಜನೆಯನ್ನು ಉದ್ದೇಶಪೂರ್ವಕವಾಗಿ ಮೇಯರ್ ಗೌತಮ್ ಕುಮಾರ್ ಮುಂದೂಡುತ್ತಿದ್ದಾರೆ. ಕಾಮಗಾರಿ ಬಹುತೇಕ ಪೂರ್ಣಗೊಂಡಿತ್ತು. ಆದರೆ, ಕಳೆದ ಮೂರು ತಿಂಗಳಿಂದ ಇದರಲ್ಲಿ ಯಾವುದೇ ಪ್ರಗತಿ ಸಾಧಿಸಿಲ್ಲ ಎಂದು ಆರೋಪಿಸಿದ್ದರು. ಇದು ವಿವಾದ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಮೇಯರ್ ಕಾಮಗಾರಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಕಾಮಗಾರಿ ಪ್ರಗತಿ ಪರಿಶೀಲನೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪಾಲಿಕೆ ಮೇಯರ್ ಗೌತಮ್ ಕುಮಾರ್, ಮಾರ್ಚ್ ಅಂತ್ಯದೊಳಗಾಗಿ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ ಎಂದರು.
ಬಸವಣ್ಣನವರ ತತ್ವ ಸಿದ್ದಾಂತಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಚಾಲುಕ್ಯ ವೃತ್ತದಲ್ಲಿರುವ ಅಶ್ವಾರೂಢ ಬಸವಣ್ಣನವರ ಪ್ರತಿಮೆಯ ಸುತ್ತಲು ಪಾಲಿಕೆ ವತಿಯಿಂದ 1 ಕೋಟಿ ರೂ. ವೆಚ್ಚದಲ್ಲಿ ಅನುಭವ ಮಂಟಪ ಪರಿಕಲ್ಪನೆಯಡಿ ಮರು ವಿನ್ಯಾಸಗೊಳಿಸಲಾಗುತ್ತಿದೆ. ಬಸವಣ್ಣನವರ ಕಂಚಿನ ಪ್ರತಿಮೆಯ ಸುತ್ತ 12ನೇ ಶತಮಾನದ ವಚನ ಸಾಹಿತ್ಯ ಮತ್ತು ಅನುಭವ ಮಂಟಪ ಪರಿಕಲ್ಪನೆಯಡಿ ಮರುವಿನ್ಯಾಸ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಈಗಾಗಲೇ ಪ್ರತಿಮೆ ಹಿಂಭಾಗದಲ್ಲಿ ಅರ್ಧ ಚಂದ್ರಾಕೃತಿಯ ಬೃಹತ್ ಗೋಡೆ ನಿರ್ಮಾಣದ ಕಾಮಗಾರಿ ಪೂರ್ಣಗೊಂಡಿದ್ದು, ವಚನಗಳ ಕೆತ್ತನೆ, ಅಲಂಕಾರಿಕ ವಿದ್ಯುತ್ ದೀಪ, ಕಿರು ಉದ್ಯಾನದ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಹೇಳಿದರು.
ಚಾಲುಕ್ಯ ವೃತ್ತದಲ್ಲಿ ಚಾಲುಕ್ಯರ ಕಾಲದ ಇತಿಹಾಸವನ್ನು ಪರಿಚಯಿಸುವ ನಿಟ್ಟಿನಲ್ಲಿ ವಾಸ್ತುಶಿಲ್ಪಿಗಳಿಗೆ ವಾರದೊಳಗಾಗಿ ವೃತ್ತದ ವಿನ್ಯಾಸ ಸಿದ್ಧಪಡಿಸುವಂತೆ ತಿಳಿಸಲಾಗಿದೆ. ವಾಸ್ತು ಶಿಲ್ಪಿಗಳು ವಿನ್ಯಾಸ ನೀಡಿದ ಮೇಲೆ ಅದಕ್ಕೆ ಅನುಗುಣವಾಗಿ ಅನುದಾನ ಮೀಸಲಿಡಲಾಗುವುದು ಎಂದು ತಿಳಿಸಿದರು.
ಈ ವೇಳೆ ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್, ಪೂರ್ವ ವಲಯ ಜಂಟಿ ಆಯುಕ್ತರಾದ ಪಲ್ಲವಿ, ಅಧೀಕ್ಷಕ ಮುಖ್ಯ ಇಂಜಿನಿಯರ್ ಬಸವರಾಜ್ ಕಬಾಡೆ ಮತ್ತಿತರರು ಹಾಜರಿದ್ದರು.







