ಬೆಂಗಳೂರು ನಗರ ಜಿಲ್ಲಾ ಕಸಾಪ ನಿರ್ಮಾಣಕ್ಕೆ ಗುತ್ತಿಗೆ: ಪ್ರಸ್ತಾವನೆ ತಿರಸ್ಕರಿಸಿದ ಬಿಬಿಎಂಪಿ

ಬೆಂಗಳೂರು, ಡಿ.15: ನ್ಯಾಷನಲ್ ಕಾಲೇಜು ಆವರಣದ ಸಮೀಪದ ಖಾಲಿ ಪ್ರದೇಶವನ್ನು ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಿರ್ಮಾಣಕ್ಕೆ 5 ವರ್ಷಗಳ ಕಾಲ ಗುತ್ತಿಗೆ ನೀಡುವ ಪ್ರಸ್ತಾವನೆ ಪಾಲಿಕೆ ತಿರಸ್ಕರಿಸಿದೆ.
ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಮಾಯಣ್ಣ ಮಾತನಾಡಿ, ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಿರ್ಮಾಣಕ್ಕೆ 5 ವರ್ಷಗಳ ಕಾಲಗುತ್ತಿಗೆ ನೀಡುವ ಪ್ರಸ್ತಾವನೆ ಪರಿಶೀಲನೆಯನ್ನು ಮಾಡುವಂತೆ ಎಂಜಿನಿಯರಿಂಗ್, ತೋಟಗಾರಿಕೆ ಇಲಾಖೆ, ಆರೋಗ್ಯ, ಶಿಕ್ಷಣ ಇಲಾಖೆಗಳಿಂದ ಪರಿಶೀಲನೆ ಮಾಡಿ ವಿವರಣೆ ನೀಡುವಂತೆ ಕೋರಲಾಗಿತ್ತು. ಎಲ್ಲ ಇಲಾಖೆಗಳು ಯಾವುದೇ ಅಭ್ಯಂತರವಿಲ್ಲ ಎಂದು ವರದಿ ನೀಡಿವೆ. ಇದರ ಹೊರತಾಗಿಯೂ ಈ ಪ್ರಸ್ತಾವನೆಯನ್ನು ಕೈಬಿಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನ್ಯಾಷನಲ್ ಕಾಲೇಜು ಆಟದ ಮೈದಾನಕ್ಕೆ ಹೊಂದಿಕೊಂಡಿರುವ ಖಾಲಿ ನಿವೇಶನದ ಪ್ರದೇಶವನ್ನು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಿರ್ಮಾಣಕ್ಕೆ ಗುತ್ತಿಗೆ ಆಧಾರದ ಮೇಲೆ ನೀಡಬೇಕು ಎಂದು ಪರಿಷತ್ತಿನ ಅಧ್ಯಕ್ಷ ಮಾಯಣ್ಣ ಅವರು 2018ರಲ್ಲಿ ಮನವಿ ಮಾಡಿದ್ದರು. 6,674 ಚದರಡಿಗಳ ಅಳತೆಯ ಜಾಗದಲ್ಲಿನ ಖಾಲಿ ನಿವೇಶನವನ್ನು ಕನ್ನಡ ಕಟ್ಟಡ ನಿರ್ಮಾಣಕ್ಕೆ ಹಸ್ತಾಂತರ ಮಾಡುವಂತೆ ಮನವಿ ಮಾಡಲಾಗಿತ್ತು. ಈ ಪ್ರಸ್ತಾವನೆಯನ್ನು ಕಳೆದ ಮೂರು ವರ್ಷಗಳಿಂದ ಮುಂದೂಡಲಾಗಿತ್ತು. ಈಗ ಕೈಬಿಡಲಾಗಿದೆ. ನಗರದಲ್ಲಿ ಪರಭಾಷೆಯ ಪರಿಷತ್ತುಗಳ ನಿರ್ಮಾಣಕ್ಕೆ ಜಾಗ ನೀಡುತ್ತಿರುವ ಪಾಲಿಕೆ ಕನ್ನಡದ ಕಟ್ಟಡ ನಿರ್ಮಾಣಕ್ಕೆ ಜಾಗ ನೀಡುತ್ತಿಲ್ಲ ಎಂದು ದೂರಿದರು.







