ಸಿದ್ದರಾಮಯ್ಯ ಅವರ ರಾಜೀನಾಮೆ ಅಂಗೀಕರಿಸದಂತೆ ಪತ್ರ ಚಳವಳಿ

ಮೈಸೂರು,ಡಿ.16: ಪ್ರಜಾಪ್ರಭುತ್ವದ ಉಳಿವಿಗಾಗಿ ವಿರೋಧ ಪಕ್ಷದ ನಾಯಕರ ಸ್ಥಾನಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯನವರು ನೀಡಿರುವ ರಾಜೀನಾಮೆಯನ್ನು ತಿರಸ್ಕರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಹಾಗೂ ದಲಿತ ಸಂಘಟನೆಗಳ ಒಕ್ಕೂಟ ವತಿಯಿಂದ ಪತ್ರ ಚಳವಳಿ ನಡೆಯಿತು.
ಮಹಾನಗರ ಪಾಲಿಕೆ ಎದುರು ಸೋಮವಾರ ನಡೆದ ಪತ್ರ ಚಳವಳಿಯಲ್ಲಿ ಪಾಲ್ಗೊಂಡು ಮಾತನಾಡಿದ ವೇದಿಕೆಯ ರಾಜ್ಯಾಧ್ಯಕ್ಷ ಕೆ.ಶಿವರಾಂ, ಪ್ರಜಾಪ್ರಭುತ್ವದ ಉಳಿವಿಗಾಗಿ ಸಿದ್ದರಾಮಯ್ಯನವರು ಪ್ರಸಕ್ತ ರಾಜಕೀಯದಲ್ಲಿ ಮುಂಚೂಣಿಯಲ್ಲಿರಬೇಕಾಗಿರುವುದು ತೀರಾ ಅನಿವಾರ್ಯ. ಈ ಹಿನ್ನೆಲೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸಮಿತಿಯ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಸಿದ್ದರಾಮಯ್ಯರ ರಾಜೀನಾಮೆಯನ್ನು ತಿರಸ್ಕರಿಸುವ ಮೂಲಕ ಸಂವಿಧಾನ, ಪ್ರಜಾಪ್ರಭುತ್ವದ ಆಶಯಗಳನ್ನು ಈಡೇರಿಸುವ ಮಹತ್ವದ ಜವಾಬ್ದಾರಿಗಳನ್ನು ಹೊಂದಿರುವ ಸಾಮಾಜಿಕ ನ್ಯಾಯ, ಸಾಮಾಜಿಕ ಬದ್ಧತೆ, ಸಮಸಮಾಜದ ಆಶಯವನ್ನು ಈಡೇರಿಸುವಂತಹ ಆಶಯವುಳ್ಳ ನಾಯಕತ್ವವನ್ನು ಬೆಂಬಲಿಸಬೇಕೆಂದು ಮನವಿ ಮಾಡಿದರು.
ಜನಪರ ಧ್ವನಿಗಳನ್ನು ಹತ್ತಿಕ್ಕುವುದು ನಮ್ಮ ಅಸ್ತಿತ್ವವನ್ನೇ ನಾವೇ ಕ್ರಮೇಣ ಕೊಂದು ಕೊಂಡಂತೆ. ಆದ್ದರಿಂದ ಇದನ್ನು ಅರ್ಥಮಾಡಿಕೊಂಡು ಕಾಂಗ್ರೆಸ್ ಪಕ್ಷದ ಇತರೆ ನಾಯಕರು ಸಿದ್ದರಾಮಯ್ಯನವರ ಕೈಬಲಪಡಿಸುವುದರ ಮೂಲಕ ಸಂವಿಧಾನದ ಆಶಯಗಳು, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯಬೇಕೆಂದು ಒತ್ತಾಯಿಸಿದರು.
ಸಿದ್ದರಾಮಯ್ಯನವರು ವಿರೋಧ ಪಕ್ಷದ ನಾಯಕ ಸ್ಥಾನದಿಂದ ಬದಲಾದರೆ ಕಾಂಗ್ರೆಸ್ ಪಕ್ಷಕ್ಕೆ ತುಂಬಲಾರದ ನಷ್ಟವುಂಟಾಗಲಿದೆ. ಸಿದ್ದರಾಮಯ್ಯನವರ ನಾಯಕತ್ವ ಬದಲಾದಲ್ಲಿ ಕಾಂಗ್ರೆಸ್ ಮುಕ್ತ ಕರ್ನಾಟಕವಾಗುವುದು ನಿಶ್ಚಿತ. ಕಾಂಗ್ರೆಸ್ ಸೋಲಿಗೆ ಸಿದ್ದರಾಮಯ್ಯನವರೊಬ್ಬರೆ ಕಾರಣರಲ್ಲ. ಪ್ರಜಾಪ್ರಭುತ್ವದ ಉಳಿವಿಗಾಗಿ ಸಿದ್ದರಾಮಯ್ಯನವರು ಪ್ರಸಕ್ತ ರಾಜಕೀಯದಲ್ಲಿ ಮುಂಚೂಣಿಯಲ್ಲಿರಬೇಕು. ಇಂತವರು ಸದಾ ರಾಜಕಾರಣದಲ್ಲಿ ಸಕ್ರೀಯರಾಗಿರಬೇಕು. ಆದ್ದರಿಂದ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ಸಿದ್ದರಾಮಯ್ಯನವರ ರಾಜೀನಾಮೆಯನ್ನು ಅಂಗೀಕರಿಸಬಾರದು ಎಂದು ಒತ್ತಾಯಿಸಿದರು.
ಈ ಸಂದರ್ಭ ಪಿ.ರಾಜು, ಝಾಕೀರ್ ಹುಸೇನ್, ಸಿ.ಟಿ.ಆಚಾರ್ಯ, ಎನ್.ಆರ್.ನಾಗೇಶ್, ಹಿನಕಲ್ ಪ್ರಕಾಶ್, ಹಿನಕಲ್ ಉದಯ್, ಹೆಚ್.ಆರ್.ಪ್ರಕಾಶ್, ಸತ್ಯನಾರಾಯಣ್, ರವಿ ಓಂಕಾರ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.







