ಮೈಕ್ರೋ ಫೈನಾನ್ಸ್ ಗಳ ಕಿರುಕುಳದಿಂದ ಕೂಲಿ ಕಾರ್ಮಿಕರನ್ನು ರಕ್ಷಿಸಿ: ಸಿಪಿಐ ನಾಯಕಿ ಜ್ಯೋತಿ ಸುಂದರೇಶ್

ಕಳಸ, ಡಿ.16: ಬಡತನದಲ್ಲಿರುವ ಹೆಣ್ಮಕ್ಕಳ ಅಜ್ಞಾನವನ್ನು ದುರ್ಬಳಕೆ ಮಾಡಿಕೊಂಡ ಮೈಕ್ರೋ ಫೈನಾನ್ಸ್ ಗಳು ಅಧಿಕ ಬಡ್ಡಿಯನ್ನು ನಿಗದಿ ಮಾಡಿ ಮೋಸ ಕೂಲಿ ಕಾರ್ಮಿಕರನ್ನು ಶೋಷಣೆ ಮಾಡುತ್ತಿವೆ. ಇದರಿಂದಾಗಿ ರಾಷ್ಟ್ರೀಕೃತ ಬ್ಯಾಂಕುಗಳು ಮತ್ತು ಜನರ ಬದುಕು ಮುಳುಗಿ ಹೋಗುತ್ತಿದೆ. ಆದ್ದರಿಂದ ಸರಕಾರವೇ ಮುಂದೆ ನಿಂತು ಇಂತಹ ಮೈಕ್ರೋ ಫೈನಾನ್ಸ್‍ಗಳ ವಿರುದ್ಧ ಕಾನೂನು ರೀತಿಯ ಕ್ರಮ ತೆಗೆದುಕೊಳ್ಳಬೇಕು ಎಂದು ಭಾರತೀಯ ಕಮ್ಯೂನಿಷ್ಟ್ ಪಕ್ಷದ ರಾಜ್ಯ ಮಂಡಳಿ ಸದಸ್ಯೆ ಜ್ಯೋತಿ ಹೇಳಿದರು.
ಸೋಮವಾರ ಪಟ್ಟಣದ ಗಿರಿಜಾಂಬ ದೇವಸ್ಥಾನದ ಮುಂಬಾಗದ ಸಭಾಂಗಣದಲ್ಲಿ ಮಹಿಳಾ ದೌರ್ಜನ್ಯ ವಿರೋಧಿ ಹೋರಾಟ ಸಮಿತಿಯಿಂದ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ವಿರುದ್ಧ ನಡೆದ ಪ್ರತಿಭಟನೆ ಮತ್ತು ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಹೆಣ್ಮಕ್ಕಳನ್ನು ಅತ್ಯಾಚಾರ, ಭೋಗದ ಸರಕುಗಳನ್ನಾಗಿ ಮಾಡಲಾಗುತ್ತಿದೆ. ಅತ್ಯಾಚಾರ ಮಾಡಿದವರನ್ನು ಗುಂಡಿಕ್ಕಿ ಕೊಂದರೆ ಅತ್ಯಾಚಾರ ನಿಲ್ಲುವುದಿಲ್ಲ. ಇದಕ್ಕೂ ಮೊದಲು ರಾಜಕಾರಣಿಗಳು ಮಾಡುತ್ತಿರುವ ನೀಚ ಕೃತ್ಯಗಳು ನಿಲ್ಲಬೇಕು. ಮಹಿಳೆಯರಿಗೆ ಉದ್ಯೋಗ, ಸ್ವಾತಂತ್ರ್ಯ ,ಸುರಕ್ಷತೆ, ಸ್ವಾವಲಂಬನೆ ನೀಡಿ ಎಂದು ಅವರು ಆಗ್ರಹಿಸಿದರು.
ರಾಷ್ಟ್ರೀಕೃತ ಬ್ಯಾಂಕುಗಳು ಕಳ್ಳರಿಗೆ ಕೋಟ್ಯಂತರ ರೂ. ಸಾಲಗಳನ್ನು ನೀಡುತ್ತಾರೆ. ಆದರೆ ಬಡವ ತನ್ನ ಬದುಕನ್ನು ಕಟ್ಟಿಕೊಳ್ಳಲು ಸಾಲವನ್ನು ನೀಡಲು ಹಿಂದೇಟು ಹಾಕುತ್ತವೆ. ಇದನ್ನೆ ಬಂಡವಾಳವನ್ನಾಗಿಸಿಕೊಂಡು ಮೈಕ್ರೋ ಫೈನಾನ್ಸ್ ದಾಖಲಾತಿಗಳನ್ನು ಪಡೆಯದೆ ಸುಲಭವಾಗಿ ಅಧಿಕ ಬಡ್ಡಿ ದರ ವಿಧಿಸಿ ಸಾಲ ಕೊಡುತ್ತಿವೆ. ನಂತರ ಈ ಬಡವರ, ಕೂಲಿ ಕಾರ್ಮಿಕರ ಪ್ರಾಣವನ್ನು ಸಂಸ್ಥೆಗಳು ಹಿಂಡುತ್ತಿವೆ. ಗೂಂಡಾಗಳನ್ನು ಮಹಿಳೆಯರ ಮನೆ ಬಾಗಿಲಿಗೆ ಕಳುಹಿಸಿ ದೌರ್ಜನ್ಯ ಎಸಗುತ್ತಾರೆ. ರಾತ್ರಿ ವೇಳೆ ಮಹಿಳೆಯರ ಮನೆಗಳಿಗೆ ನುಗ್ಗಿ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಈ ಪೈನಾನ್ಸ್ ಗಳು ರಾಷ್ಟ್ರೀಕೃತ, ಖಾಸಗಿ ಬ್ಯಾಂಕ್‍ಗಳಿಂದ ಕಡಿಮೆ ಬಡ್ಡಿಗೆ ಸಾಲ ತಂದು ಬಡವರಿಗೆ ಹೆಚ್ಚಿನ ಬಡ್ಡಿದರದಲ್ಲಿ ಸಾಲ ನೀಡುತ್ತಿವೆ. ಅಲ್ಲದೇ ಯಾವುದೇ ಜಾಮೀನು ಇಲ್ಲದೆ ಸಾಲ ನೀಡುತ್ತಾ ಅಕ್ರಮವಾಗಿ ಬಡ್ಡಿ ದಂಧೆ ಮಾಡುತ್ತಿವೆ ಎಂದರು.
ಭಾರತೀಯ ಕಮ್ಯೂನಿಷ್ಟ್ ಪಕ್ಷದ ಮುಖಂಡ ಲಕ್ಷ್ಮಣಾಚಾರ್ ಮಾತನಾಡಿ, ಕಿರು ಹಣಕಾಸು ಸಂಸ್ಥೆಗಳು ಬಡ ಮಹಿಳೆಯರ ಆರ್ಥಿಕ ಸಂಕಷ್ಟಗಳನ್ನೇ ಬಂಡವಾಳ ಮಾಡಿಕೊಳ್ಳುತ್ತಿವೆ. ಭಾರೀ ಬಡ್ಡಿಯಿಂದಾಗಿ ಈ ಸಂಸ್ಥೆಗಳಿಗೆ ಭಾರೀ ಲಾಭವಾಗುತ್ತಿರುವುದರಿಂದ ಸರಕಾರದ ಕಾನೂನುಗಳನ್ನು ಗಾಳಿಗೆ ತೂರಿ ಇಂತಹ ಕಿರು ಹಣಕಾಸು ಸಂಸ್ಥೆಗಳು ರಾಜ್ಯದಲ್ಲಿ ನಾಯಿಕೊಡೆಗಳಂತೆ ಹುಟ್ಟಿಕೊಂಡಿವೆ. ಈ ಪೈಕಿ ನಕಲಿ ಸಂಸ್ಥೆಗಳು ಸಾಲ ನೀಡುತ್ತಾ ಬಡ್ಡಿ ದಂಧೆ ನಡೆಸುತ್ತಿವೆ. ಕಳೆದ ನಾಲ್ಕು ವರ್ಷಗಳಲ್ಲಿ ಈ ಸಂಸ್ಥೆಗಳು ಬೇರೆ ಬೇರೆ ಹೆಸರುಗಳಲ್ಲಿ ಗ್ರಾಮೀಣ ಭಾಗದ ಬಡ ಮಹಿಳೆಯರನ್ನು ಸಂಘಟಿಸಿ ಸಾಲದ ಮೇಲೆ ಸಾಲ ನೀಡುತ್ತಾ ಹೆಚ್ಚು ಬಡ್ಡಿ ವಸೂಲಿ ಮಾಡುತ್ತಿದ್ದಾರೆ. ಮಹಿಳೆಯರು ಬಡ್ಡಿ ಕಟ್ಟಿ ಕಟ್ಟಿ ಸಾಲದ ಕೂಪದಿಂದ ಹೊರ ಬರಲಾಗದೇ ಪರಿತಪಿಸುತ್ತಿದ್ದಾರೆ. ಸಕಾಲದಲ್ಲಿ ಸಾಲ ಬಡ್ಡಿ ಕಟ್ಟದ ಮಹಿಳೆಯರ ಮನೆಗಳಿಗೆ ವಸೂಲಿಗೆ ಬರುವ ಸಂಸ್ಥೆಗಳ ಸಿಬ್ಬಂದಿ ಮಹಿಳೆಯರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುವುದು, ಬೆದರಿಸುವುದು, ಬ್ಲಾಕ್‍ಮೇಲ್ ಮಾಡುವುದು, ರಾತ್ರಿ ವೇಳೆ ಮನೆಗಳಿಗೆ ನುಗ್ಗಿ ಗಲಾಟೆ ಮಾಡಿ ದೌರ್ಜನ್ಯ ಎಸಗುತ್ತಿದ್ದಾರೆ. ಇವರ ದೌರ್ಜನ್ಯಗಳನ್ನು ಎದುರಿಸಲಾಗದೇ ಮಹಿಳೆಯರು ಮಾನಸಿಕವಾಗಿ ಕೊರಗುವಂತಾಗಿದೆ ಎಂದು ಅವರು ಸಭೆಯಲ್ಲಿ ಆರೋಪಿಸಿದರು.
ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಈ ದೌರ್ಜನ್ಯಗಳ ವಿರುದ್ಧ ಮಹಿಳೆಯರು ಸಂಘಟಿತರಾಗುತ್ತಿರುವುದು ಉತ್ತಮ ಬೆಳವಣಿಗೆ. ಇಂತಹ ದೌರ್ಜನ್ಯ ಎಸಗುವ ಕಿರು ಹಣಕಾಸು ಸಂಸ್ಥೆಗಳನ್ನು ರಾಜ್ಯದಿಂದಲೇ ಓಡಿಸಬೇಕಿದ್ದು, ಸಂಘಟಿತ ಹೋರಾಟ ಮಾಡುವ ಮೂಲಕ ಸರಕಾರದ ಗಮನಸೆಳೆಯಬೇಕಿದೆ ಎಂದ ಅವರು, ಜಿಲ್ಲೆಯಲ್ಲಿ ಈ ಬಾರೀ ಅತಿವೃಷ್ಟಿಯಿಂದಾಗಿ ದುಡಿಯುವ ಕೂಲಿ ಕಾರ್ಮಿಕ ವರ್ಗದ ಮಹಿಳೆಯರಿಗೆ ಕೆಲಸ ಸಿಗುತ್ತಿಲ್ಲ. ಇದರಿಂದಾಗಿ ಸಾಲ ಮರುಪಾವತಿ ಮಾಡುತ್ತಿಲ್ಲ. ರಾಜ್ಯ ಸರಕಾರ ಇದನ್ನು ಪರಿಶೀಲಿಸಿ ಕಿರುಹಣ ಕಾಸು ಸಂಸ್ಥೆಗಳಿಂದ ಬಡ ಮಹಿಳೆಯರು ಪಡೆದಿರುವ ಸಾಲಮನ್ನಾ ಮಾಡಬೇಕು. ಮಹಿಳೆಯರ ಸ್ವಸಹಾಯ ಸಂಘಗಳಿಗೆ ಉತ್ತೇಜನ ನೀಡಿ ಬ್ಯಾಂಕ್‍ಗಳ ಮೂಲಕ ಸಾಲ ಸೌಲಭ್ಯಗಳನ್ನು ಒದಗಿಸಬೇಕೆಂದು ಅವರು ಇದೇ ವೇಳೆ ಆಗ್ರಹಿಸಿದರು.
ಬಹಿರಂಗ ಸಭೆಯ ಮುಂಚಿತವಾಗಿ ನೂರಾರು ನೊಂದ ಮಹಿಳೆಯರು ಪಟ್ಟಣದಲ್ಲಿ ಪ್ರತಿಭಟಣಾ ಮೆರವಣಿಗೆಯನ್ನು ಮಾಡಿದರು. ಈ ಸಂದರ್ಭದಲ್ಲಿ ಹೋರಾಟ ಸಮಿತಿಯ ಅಧ್ಯಕ್ಷೆ ಕಮಲಾ, ಕಳಸ ತಾಲೂಕು ಕಾರ್ಯದರ್ಶಿ ಗೋಪಾಲ ಶೆಟ್ಟಿ, ಭಾರತೀಯ ಮಹಿಳಾ ರಾಜ್ಯ ಸಂಚಾಲಕಿ ಭಾರತಿ, ಮುಖಂಡರಾದ ಮೋನಪ್ಪ, ಸುಂಕಸಾಲೆ ರವಿ, ಸುಂದರ, ಶಾರದ ಶೆಟ್ಟಿ ಇತರರು ಇದ್ದರು.







