ಮಂಡ್ಯ: ಭತ್ತ ಖರೀದಿ ಕೇಂದ್ರ ತೆರೆಯಲು ಒತ್ತಾಯಿಸಿ ರಸ್ತೆ ತಡೆ

ಮಂಡ್ಯ, ಡಿ.16: ಭತ್ತ ಖರೀದಿ ತೆರೆಯುವುದು ಸೇರಿದಂತೆ ಇತರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ(ಮೂಲ ಸಂಘಟನೆ) ಕಾರ್ಯಕರ್ತರು ಸೋಮವಾರ ನಗರದಲ್ಲಿ ರಸ್ತೆ ತಡೆ ನಡೆಸಿದರು.
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಧರಣಿ ಕುಳಿತು ಸಂಚಾರಕ್ಕೆ ತಡೆಯೊಡ್ಡಿದ ಅವರು, ಭತ್ತದ ಬೆಳೆ ಕಟಾವು ಆಗುತ್ತಿದ್ದರೂ ಭತ್ತ ಖರೀದಿ ತೆರೆದಿಲ್ಲ ಎಂದು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಧ್ಯಕ್ಷ ಬೋರಾಪುರ ಶಂಕರೇಗೌಡ ಮಾತನಾಡಿ, ಭತ್ತದ ಫಸಲು ಒಕ್ಕಣೆಯಾಗುತ್ತಿದ್ದು, ಖರೀದಿ ಕೇಂದ್ರವಿಲ್ಲದೆ ಸಂಗ್ರಹಿಸಿಟ್ಟುಕೊಳ್ಳು ಸಾಧ್ಯವಾಗದ ಹಿನ್ನೆಲೆಯಲ್ಲಿ ರೈತರು ಕಡಿಮೆ ದರಕ್ಕೆ ಭತ್ತ ಮಾರಾಟ ಮಾಡುತ್ತಿದ್ದಾರೆ ಎಂದರು.
ಕ್ವಿಂಟಾಲ್‍ಗೆ ಕೇವಲ 1,200-1,300 ರೂ.ಗೆ ದಲ್ಲಾಳಿಗಳಿಗೆ ಭತ್ತ ಮಾರಾಟ ಮಾಡಿಕೊಂಡು ನಷ್ಟ ಅನುಭವಿಸುತ್ತಿದ್ದಾರೆ. ಡಿ.1ರಿಂದಲೇ ಖರೀದಿ ಕೇಂದ್ರ ತೆರೆಯಲು ಒತ್ತಾಯ ಮಾಡಿದ್ದರೂ ಕ್ರಮವಹಿಸಿಲ್ಲ. ನಾಳೆಯಿಂದಲೇ ಭತ್ತ ಖರೀದಿ ಕೇಂದ್ರ ತೆರೆಯಬೇಕು ಎಂದು ಅವರು ಒತ್ತಾಯಿಸಿದರು.
ಜಿಲ್ಲೆಯ ಜೀವನಾಡಿ ಮೈಷುಗರ್ ಸಕ್ಕರೆ ಕಾರ್ಖಾನೆಯನ್ನು ಪ್ರಾರಂಭಿಸುವ ಬಗ್ಗೆ ರಾಜ್ಯ ಸರಕಾರದಿಂದ ಸ್ಪಷ್ಟ ಮಾಹಿತಿ ಸಿಗುತ್ತಿಲ್ಲ. ಸಕ್ಕರೆ ಸಚಿವರು ವಾರದ ಹಿಂದೆ ನೀಡಿರುವ ಹೇಳಿಕೆ ಗೊಂದಲಮಯವಾಗಿದೆ. ಕೂಡಲೇ ಕಾರ್ಖಾನೆ ಆರಂಭಿಸಿ, ಸಾರ್ವಜನಿಕ ಕ್ಷೇತ್ರದಲ್ಲೇ ಉಳಿಸಬೇಕು ಎಂದು ಅವರು ಆಗ್ರಹಿಸಿದರು.
ಜಿಲ್ಲೆಯಿಂದ ಹೊರ ಜಿಲ್ಲೆ ಮತ್ತು ಹೊರ ರಾಜ್ಯದ ಕಾರ್ಖಾನೆಗಳಿಗೆ ಸರಬರಾಜು ಮಾಡಿರುವ ಕಬ್ಬಿನ ಸಾಗಾಣೆ ಸಹಾಯ ಧನ ಬಿಡುಗಡೆ ಮಾಡಬೇಕು. ಬೆಳೆದಿರುವ ಕಬ್ಬನ್ನು ಶೀಘ್ರವೇ ನುರಿಸಬೇಕು. ಕೇಂದ್ರ ಸರಕಾರ ಕಬ್ಬಿಗೆ ಎಫ್‍ಆರ್‍ಡಿ ದರ ನಿಗದಿ ಮಾಡಿಲ್ಲದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ರಾಜ್ಯ ಸಲಹಾ ಬೆಲೆ (ಎಸ್‍ಎಪಿ)ಯಾಗಿ ಟನ್‍ಗೆ ಕನಿಷ್ಠ 3,500 ರೂ. ನಿಗದಿಪಡಿಸಬೇಕು ಎಂದು ಅವರು ತಾಕೀತು ಮಾಡಿದರು.
ಡಿ.23ರ ವಿಶ್ವರೈತ ದಿನವನ್ನು ಸರಕಾರದ ವತಿಯಿಂದಲೇ ಆಚರಿಸಬೇಕು. ರೈತರಿಗೆ ಸ್ವಾಭಿಮಾನದ ಅರಿವು ಮೂಡಿಸಿದ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರು ಪ್ರತಿಮೆಯನ್ನು ಬೆಂಗಳೂರಿನ ಕೇಂದ್ರ ಭಾಗದಲ್ಲಿ ಸ್ಥಾಪಿಸಬೇಕು ಎಂದೂ ಅವರು ಒತ್ತಾಯಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಮಂಜೇಶ್‍ಗೌಡ, ಕಾರ್ಯಾಧ್ಯಕ್ಷ ಇಂಡುವಾಳು ಚಂದ್ರಶೇಖರ್, ಕೆ.ರಾಮಲಿಂಗೇಗೌಡ, ಸೊ.ಸಿ.ಪ್ರಕಾಶ್, ನಾಗೇಂದ್ರಸ್ವಾಮಿ, ಬಿಳಿಗೌಡ, ಕೆಂಪೇಗೌಡ, ನಾರಾಜು, ಇತರರು ಭಾಗವಹಿಸಿದ್ದರು.







