ತೆಂಡುಲ್ಕರ್ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿದ ಚೆನ್ನೈ ಹೊಟೇಲ್ ಸಿಬ್ಬಂದಿ

ಹೊಸದಿಲ್ಲಿ, ಡಿ.16: ನನಗೆ ಈ ಹಿಂದೆ ಅಮೂಲ್ಯ ಸಲಹೆ ನೀಡಿದ್ದ ಚೆನ್ನೈನ ಹೊಟೇಲ್ ಸಿಬ್ಬಂದಿಯನ್ನು ಹುಡುಕಿ ಕೊಡಿ ಎಂದು ಬ್ಯಾಟಿಂಗ್ ಲೆಜೆಂಡ್ ಸಚಿನ್ ತೆಂಡುಲ್ಕರ್ ರವಿವಾರ ಟ್ವೀಟ್ ಮಾಡಿ ವಿನಂತಿಸಿದ್ದರು. ಸಚಿನ್ ವಿನಂತಿಗೆ ಪ್ರತಿಕ್ರಿಯೆ ನೀಡಿರುವ ಚೆನ್ನೈ ನಿವಾಸಿಯಾಗಿರುವ ಹೊಟೇಲ್ ಸಿಬ್ಬಂದಿ ಗುರುಪ್ರಸಾದ್ ನನ್ನ ಇಡೀ ಕುಟುಂಬ ನಿಮ್ಮನ್ನು ಭೇಟಿಯಾಗಲು ಬಯಸುತ್ತಿದೆ ಎಂದಿದ್ದಾರೆ.
‘‘ಅಂತಹ ಶ್ರೇಷ್ಠ ವ್ಯಕ್ತಿಯನ್ನು ಅಭಿಮಾನಿಗಳು ಭೇಟಿಯಾಗಲು ಆಸಕ್ತಿ ತೋರುತ್ತಾರೆ. ಸಚಿನ್ ತೆಂಡುಲ್ಕರ್ ಅವರು ನನ್ನನ್ನು ಭೇಟಿಯಾಗುವ ಬಯಕೆ ವ್ಯಕ್ತಪಡಿಸಿದ್ದಾರೆ. ಇದು ನಿಜಕ್ಕೂ ರೋಮಾಂಚಕಾರಿ.ನಾನು ವಾಸಿಸುತ್ತಿರುವ ಪರಿಸರದ ಜನರು,ನನ್ನ ಸ್ನೇಹಿತರು ರೋಮಾಂಚಿತರಾಗಿದ್ದು, ಸಚಿನ್‌ರನ್ನು ಭೇಟಿಯಾಗಲು ಬಯಸಿದ್ದಾರೆ. ಹೀಗಾಗಿ ನೀವು ವೈಯಕ್ತಿಕವಾಗಿ ನನ್ನನ್ನು ಭೇಟಿಯಾಗಿ, ನನ್ನ ಕುಟುಂಬದೊಂದಿಗೆ ಸ್ವಲ್ಪ ಸಮಯ ಕಳೆಯಬೇಕು ಎಂದು ಸಚಿನ್‌ರಲ್ಲಿ ವಿನಂತಿಸಿಕೊಳ್ಳುತ್ತೇನೆ’’ಎಂದು ಗುರುಪ್ರಸಾದ್ ಹೇಳಿದ್ದಾರೆ.
ಹಳೆಯ ಘಟನೆಯನ್ನು ನೆನಪಿಸಿಕೊಂಡ ಗುರುಪ್ರಸಾದ್, ‘‘ನಾನು ಚೆನ್ನೈನ ತಾಜ್ ಹೊಟೇಲ್‌ನಲ್ಲಿ ಆಗ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದೆ. ನಾನು ಆಗ ಕ್ರಿಕೆಟ್ ಲೆಜೆಂಡ್ ಸಚಿನ್‌ರನ್ನು ಭೇಟಿಯಾಗಿ,ಸಲಹೆ ನೀಡಿದ್ದೆ. ಲಿಫ್ಟ್‌ನ ಸಮೀಪವಿರುವ ಕೋಣೆಯಿಂದ ಹೊರಬಂದ ಸಚಿನ್‌ರನ್ನು ನಾನು ಭೇಟಿಯಾಗಿ ಅವರ ಹಸ್ತಾಕ್ಷರ ಪಡೆದಿದ್ದೆ. ಆಗ ನಾನು ನನ್ನ ಮನಸ್ಸಿನಲ್ಲಿ ದೀರ್ಘ ಸಮಯದಿಂದ ಇದ್ದ ಸಲಹೆಯೊಂದನ್ನು ಅವರಿಗೆ ನೀಡಿದ್ದೆ. ನೀವು ಸಚಿನ್‌ರನ್ನು ಸಮೀಪದಿಂದ ನೋಡಿದಾಗ ಅವರು ಬ್ಯಾಟಿಂಗ್‌ನ ವೇಳೆ ಮಣಿಕಟ್ಟನ್ನು ಬಳಸುವುದನ್ನು ನೋಡಬಹುದು. ಇದು ಅವರಿಗೆ ಅತ್ಯಂತ ಮುಖ್ಯವಾಗಿದೆ. ವೇಗದ ಬೌಲರ್‌ನ್ನು ಎದುರಿಸುವಾಗ ಬೌಲರ್‌ಗಳು ಆ ನಿರ್ದಿಷ್ಟ ಜಾಗವನ್ನು ಗುರಿ ಮಾಡಿ ಬೌಲಿಂಗ್ ಮಾಡುತ್ತಾರೆ. ಆಟಗಾರ ಸರಿಯಾಗಿ ರಕ್ಷಣಾಕವಚ ಹಾಕದಿದ್ದರೆ ಎಲ್ಲವೂ ತಪ್ಪಾಗಿ ಬಿಡುತ್ತದೆ. ಆ ವಿಚಾರ ನಿಮಗೆ ಹೇಗೆ ಗೊತ್ತು ಎಂದು ಸಚಿನ್ ನನ್ನನ್ನು ಕೇಳಿದ್ದರು. ನಾನು ನಿಮ್ಮನ್ನು ಟಿವಿಯಲ್ಲಿ ನೋಡಿದ್ದೆ. ಮೊಣಕೈ ರಕ್ಷಣಾಕವಚ ನಿಮ್ಮ ಸಂಪೂರ್ಣ ಚಲನೆಯ ಮೇಲೆ ಪರಿಣಾಮ ಬೀರುವಂತೆ ಕಾಣಿಸಿತು ಎಂದು ಅವರಲ್ಲಿ ಹೇಳಿದ್ದೆ ಎಂದು ಗುರುಪ್ರಸಾದ್ ತಿಳಿಸಿದರು.
ಹೊಟೇಲ್ ಸಿಬ್ಬಂದಿಯೊಬ್ಬ ನೀಡಿದ್ದ ಸಲಹೆ ನನ್ನ ವೃತ್ತಿಜೀವನದಲ್ಲಿ ತುಂಬಾ ನೆರವಾಗಿತ್ತು. ನಾನು ಅವರನ್ನು ಈಗಲೇ ಭೇಟಿಯಾಗಲು ಬಯಸುತ್ತಿದ್ದೇನೆ. ಆ ವ್ಯಕ್ತಿ ಈಗ ಎಲ್ಲಿದ್ದಾನೋ ಗೊತ್ತಿಲ್ಲ. ನೀವು ಆತನನ್ನು ಹುಡುಕಿಕೊಡುತ್ತೀರಾ? ಎಂದು ತೆಂಡುಲ್ಕರ್ ವಿಡಿಯೊವೊಂದನ್ನು ಟ್ವೀಟ್ ಮಾಡಿ ನೆಟ್ಟಿಗರನ್ನು ವಿನಂತಿಸಿದ್ದರು. ಗುರುಪ್ರಸಾದ್ ಟ್ವಿಟರ್ ಬಳಕೆದಾರರಲ್ಲ. ಫ್ರಾನ್ಸ್‌ನಲ್ಲಿರುವ ಅವರ ಸಂಬಂಧಿಯೊಬ್ಬರು ಸಚಿನ್ ಟ್ವೀಟ್ ಮಾಡಿರುವ ವಿಚಾರವನ್ನು ಪ್ರಸಾದ್‌ಗೆ ತಿಳಿಸಿದ್ದರು.







