ಐಸಿಸಿ ಟೆಸ್ಟ್ ರ‍್ಯಾಂಕಿಂಗ್ ಅಗ್ರಸ್ಥಾನ ಉಳಿಸಿಕೊಂಡ ವಿರಾಟ್ ಕೊಹ್ಲಿ, ಆರನೇ ಸ್ಥಾನಕ್ಕೆ ಕುಸಿದ ಬುಮ್ರಾ

ದುಬೈ, ಡಿ.16: ಭಾರತದ ನಾಯಕ ವಿರಾಟ್ ಕೊಹ್ಲಿ ಐಸಿಸಿ ಟೆಸ್ಟ್ ಬ್ಯಾಟ್ಸ್‌ಮನ್‌ಗಳ ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನವನ್ನು ಉಳಿಸಿಕೊಂಡಿದ್ದು, ಗಾಯಗೊಂಡಿರುವ ಬೌಲರ್ ಜಸ್‌ಪ್ರೀತ್ ಬುಮ್ರಾ ಆರನೇ ಸ್ಥಾನಕ್ಕೆ ಕುಸಿದಿದ್ದಾರೆ.
ಸೋಮವಾರ ಬಿಡುಗಡೆಯಾಗಿರುವ ರ್ಯಾಂಕಿಂಗ್‌ನಲ್ಲಿ ಕೊಹ್ಲಿ(928 ಅಂಕ)ಆಸ್ಟ್ರೇಲಿಯದ ಸ್ಟೀವ್ ಸ್ಮಿತ್‌ಗಿಂತ 17 ಅಂಕಗಳಿಂದ ಮುಂದಿದ್ದಾರೆ. ಸ್ಮಿತ್ ನ್ಯೂಝಿಲ್ಯಾಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ 43 ಹಾಗೂ 16 ರನ್ ಗಳಿಸಿದ್ದಾರೆ. ಈ ಪಂದ್ಯವನ್ನು ಆಸ್ಟ್ರೇಲಿಯ 296 ರನ್‌ಗಳಿಂದ ಗೆದ್ದುಕೊಂಡಿದೆ.
ಚೇತೇಶ್ವರ ಪೂಜಾರ(791) ಹಾಗೂ ಅಜಿಂಕ್ಯ ರಹಾನೆ(759)ಕ್ರಮವಾಗಿ ನಾಲ್ಕನೇ ಹಾಗೂ ಆರನೇ ಸ್ಥಾನದಲ್ಲಿದ್ದಾರೆ.
ಪರ್ತ್ ಟೆಸ್ಟ್‌ನಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ 143 ಹಾಗೂ 50 ರನ್ ಗಳಿಸಿದ್ದ ಆಸ್ಟ್ರೇಲಿಯದ ಬ್ಯಾಟ್ಸ್ ಮನ್ ಮಾರ್ನಸ್ ಲ್ಯಾಬುಶೆನ್ ಬ್ಯಾಟ್ಸ್‌ಮನ್‌ಗಳ ರ್ಯಾಂಕಿಂಗ್‌ನಲ್ಲಿ ಅಗ್ರ-5ರೊಳಗೆ ಪ್ರವೇಶಿಸಿದ್ದಾರೆ.
ಸತತ ಮೂರು ಟೆಸ್ಟ್ ಇನಿಂಗ್ಸ್ ಗಳಲ್ಲಿ 150ಕ್ಕೂ ಅಧಿಕ ರನ್ ಗಳಿಸಿ ಪಾಕಿಸ್ತಾನದ ಝಹೀರ್ ಅಬ್ಬಾಸ್ ಹಾಗೂ ಮುದಸ್ಸರ್ ನಝರ್ ಕ್ಲಬ್‌ಗೆ ಸೇರ್ಪಡೆಯಾಗುವುದರಿಂದ ವಂಚಿತರಾಗಿದ್ದ ಲ್ಯಾಬುಶೆನ್ ಮೂರು ಸ್ಥಾನ ಮೇಲಕ್ಕೇರಿ ಐದನೇ ಸ್ಥಾನ ವಶಪಡಿಸಿಕೊಂಡರು.
ಪಾಕಿಸ್ತಾನದ ಬ್ಯಾಟ್ಸ್‌ಮನ್ ಬಾಬರ್ ಆಝಂ ಮೊದಲ ಬಾರಿ ರ್ಯಾಂಕಿಂಗ್‌ನಲ್ಲಿ ಅಗ್ರ-10ರಲ್ಲಿ ಸ್ಥಾನ ಪಡೆದಿದ್ದಾರೆ. ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಔಟಾಗದೆ 102 ರನ್ ಗಳಿಸಿದ್ದ ಆಝಂ 13ನೇ ಸ್ಥಾನದಿಂದ 9ನೇ ಸ್ಥಾನಕ್ಕೇರಿದ್ದಾರೆ. ಆಝಂ ಪ್ರಸ್ತುತ ಟ್ವೆಂಟಿ-20 ರ್ಯಾಂಕಿಂಗ್‌ನಲ್ಲಿ ನಂ.1 ಹಾಗೂ ಏಕದಿನ ರ್ಯಾಂಕಿಂಗ್ ನಲ್ಲಿ ದ್ವಿತೀಯ ಸ್ಥಾನದಲ್ಲಿ ದ್ದಾರೆ.
ಪಾಕ್‌ನ ಆರಂಭಿಕ ಆಟಗಾರ ಅಬಿದ್ ಅಲಿ ಲಂಕಾ ವಿರುದ್ಧ ಮೊದಲಟೆಸ್ಟ್ ನಲ್ಲಿ ಔಟಾಗದೆ 109 ರನ್ ಗಳಿಸಿದ್ದರು. ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್‌ನ ಪಾದಾರ್ಪಣೆ ಪಂದ್ಯದಲ್ಲೇ ಶತಕ ಸಿಡಿಸಿದ ಮೊದಲ ಪುರುಷ ಕ್ರಿಕೆಟಿಗನೆಂಬ ಕೀರ್ತಿಗೆ ಭಾಜನರಾಗಿದ್ದರು. ಇಂಗ್ಲೆಂಡ್‌ನ ಆರಂಭಿಕ ಆಟಗಾರ್ತಿ ಎನಿಡ್ ಬೇಕ್‌ವೆಲ್ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್‌ನ ತನ್ನ ಮೊದಲ ಪಂದ್ಯದಲ್ಲಿ ಶತಕ ಸಿಡಿಸಿದ್ದರು.
ಇದೀಗ ಅಲಿ 78ನೇ ರ್ಯಾಂಕಿಂಗ್‌ಗೆ ತಲುಪಿದ್ದಾರೆ.
ಬೌಲರ್‌ಗಳ ಪೈಕಿ ಬುಮ್ರಾ ಆರನೇ ಸ್ಥಾನಕ್ಕೆ ಕುಸಿದಿದ್ದು, ಆಸ್ಟ್ರೇಲಿಯದ ಪ್ಯಾಟ್ ಕಮಿನ್ಸ್ ಮೊದಲ ಸ್ಥಾನದ ಲ್ಲಿದ್ದಾರೆ. ಗಾಯದ ಸಮಸ್ಯೆ ಯಿಂದಾಗಿ ಬುಮ್ರಾ ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಯ ಬಳಿಕ ಯಾವುದೇ ಪಂದ್ಯವನ್ನು ಆಡಿಲ್ಲ.
ಆಸ್ಟ್ರೇಲಿಯ ವಿರುದ್ಧ ಏಳು ವಿಕೆಟ್‌ಗಳನ್ನು ಉರುಳಿಸಿದ ಕಿವೀಸ್ ಬೌಲರ್ ನೀಲ್ ವಾಗ್ನರ್ ಜೀವನಶ್ರೇಷ್ಠ 834 ಅಂಕ ಗಳಿಸಿ ಮೂರನೇ ಸ್ಥಾನಕ್ಕೇರಿದ್ದಾರೆ. 9 ವಿಕೆಟ್ ಗೊಂಚಲು ಪಡೆದಿರುವ ಟಿಮ್ ಸೌಥಿ ಅಗ್ರ-10ರಲ್ಲಿ ಸ್ಥಾನ ಪಡೆದಿದ್ದಾರೆ.
ಮೊದಲ ಟೆಸ್ಟ್‌ನಲ್ಲಿ 97 ರನ್‌ಗೆ 9 ವಿಕೆಟ್‌ಗಳನ್ನು ಉರುಳಿಸಿರುವ ಆಸ್ಟ್ರೇಲಿಯದ ಇನ್ನೋರ್ವ ಬೌಲರ್ ಮಿಚೆಲ್ ಸ್ಟಾರ್ಕ್ 806 ಅಂಕ ಗಳಿಸಿ ಜೀವನಶ್ರೇಷ್ಠ 5ನೇ ಸ್ಥಾನ ತಲುಪಿದ್ದಾರೆ. ಜೋಶ್ ಹೇಝಲ್‌ವುಡ್ 8ನೇ ಸ್ಥಾನದಿಂದ 7ನೇ ಸ್ಥಾನಕ್ಕೇರಿದ್ದಾರೆ.
ಭಾರತದ ರವೀಂದ್ರ ಜಡೇಜ ಆಲ್‌ರೌಂಡರ್‌ಗಳ ರ್ಯಾಂಕಿಂಗ್‌ನಲ್ಲಿ ದ್ವಿತೀಯ ಸ್ಥಾನ ಕಾಯ್ದುಕೊಂಡಿದ್ದು, ವೆಸ್ಟ್‌ಇಂಡೀಸ್‌ನ ಜೇಸನ್ ಹೋಲ್ಡರ್ ಅಗ್ರಸ್ಥಾನದಲ್ಲಿದ್ದಾರೆ.
ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ 360 ಅಂಕ ಗಳಿಸಿ ಅಗ್ರಸ್ಥಾನದಲ್ಲಿದೆ. ಆಸ್ಟ್ರೇಲಿಯ(216), ಶ್ರೀಲಂಕಾ(80), ನ್ಯೂಝಿಲ್ಯಾಂಡ್(60) ಹಾಗೂ ಇಂಗ್ಲೆಂಡ್(56)ಬಳಿಕದ ಸ್ಥಾನದಲ್ಲಿವೆ.







