ಪ್ರತಿಭಟನೆ ನಂತರ ಕಸ ಹೆಕ್ಕಿ ರಸ್ತೆ ಸ್ವಚ್ಛಗೊಳಿಸಿದ ಜಾಮಿಯಾ ವಿದ್ಯಾರ್ಥಿಗಳು: ವಿಡಿಯೋ ವೈರಲ್
ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರಶಂಸೆ
ಹೊಸದಿಲ್ಲಿ: ರವಿವಾರ ದಿಲ್ಲಿಯ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ಕ್ಯಾಂಪಸ್ಸಿನ ಹೊರಗೆ ನಡೆದ ಪ್ರತಿಭಟನೆ ಹಾಗೂ ನಂತರ ಪೊಲೀಸರು ಕ್ಯಾಂಪಸ್ಸಿನೊಳಗೆ ಪ್ರವೇಶಿಸಿ ವಿದ್ಯಾರ್ಥಿಗಳ ಮೇಲೆ ಎಸಗಿದ ದೌರ್ಜನ್ಯದ ವೀಡಿಯೋವೊಂದು ವೈರಲ್ ಆಗಿದೆ. ಜಾಮಿಯಾ ವಿವಿಯ ವಿದ್ಯಾರ್ಥಿಗಳು ಹಾಗೂ ಹಳೆವಿದ್ಯಾರ್ಥಿಗಳು ಪ್ರತಿಭಟನೆಯಿಂದಾಗಿ ರಸ್ತೆಯಲ್ಲಿ ಬಿದ್ದಿದ್ದ ಕಸ ಸ್ವಚ್ಛಗೊಳಿಸುವುದು ಈ ವಿಡಿಯೋದಲ್ಲಿದೆ. ಜಾಮಿಯಾ ವಿವಿ ವಿದ್ಯಾರ್ಥಿಗಳ ಈ ನಡೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ದಿಲ್ಲಿಯ ನ್ಯೂ ಫ್ರೆಂಡ್ಸ್ ಕಾಲನಿ ಪ್ರದೇಶದ ರಸ್ತೆಗಳನ್ನು ಸ್ವಚ್ಛಗೊಳಿಸಿ ಸಂಗ್ರಹಿಸಿದ ತ್ಯಾಜ್ಯವನ್ನು ದೊಡ್ಡ ಪ್ಲಾಸ್ಟಿಕ್ ಚೀಲಗಳಲ್ಲಿ ವಿದ್ಯಾರ್ಥಿಗಳು ಚಳಿಯ ವಾತಾವರಣದಲ್ಲಿಯೂ ತುಂಬಿಸುತ್ತಿರುವುದು ವೀಡಿಯೋದಲ್ಲಿ ಕಾಣಿಸುತ್ತದೆ.
ಈ ಕೆಲಸದಲ್ಲಿ ಕೈಜೋಡಿಸಿದವರಲ್ಲೊಬ್ಬರಾದ ಶಿರಾಝ್ ಶೇಖ್ ಬಾನು ಅವರು ಜಾಮಿಯಾ ಹಳೆವಿದ್ಯಾರ್ಥಿಯಾಗಿದ್ದು, ಸದ್ಯ ರಿಸರ್ಚ್ ಅಸೋಸಿಯೇಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಪದವಿ ಹಂತದಿಂದ ಸ್ನಾತ್ತಕೋತ್ತರ ಪದವಿ ತರಗತಿಗಳಲ್ಲಿರುವ 12 ವಿದ್ಯಾರ್ಥಿಗಳು ಹಾಗೂ ಕೆಲ ಹಳೆ ವಿದ್ಯಾರ್ಥಿಗಳು ಈ ಕಾರ್ಯದಲ್ಲಿ ಕೈಜೋಡಿಸಿದ್ದಾರೆಂದು ಅವರು ಹೇಳಿದರು.
``ಎಲ್ಲಾ ಕಡೆಯೂ ಘಟನೆಯ ಕುರಿತು ಆಕ್ರೋಶವಿರುವಂತೆಯೇ ಪರಿಸರ ಸ್ವಚ್ಛವಾಗಿಡಲು ನಾವೇನು ಮಾಡಬೇಕೋ ಅದನ್ನು ಮಾಡಿದ್ದೇವೆ,'' ಎಂದು ಅವರು ಹೇಳಿದ್ದಾರೆ.
ಜಾಮಿಯಾ ವಿದ್ಯಾರ್ಥಿಗಳ ಹಾಗೂ ಹಳೆವಿದ್ಯಾರ್ಥಿಗಳ ಈ ಕಾರ್ಯವನ್ನು ಟ್ವಿಟ್ಟರಿಗರು ಮನಃಪೂರ್ವಕವಾಗಿ ಪ್ರಶಂಸಿಸಿದ್ದಾರೆ.
Proud. https://t.co/3POmLxkIy7
— Vivek (@ivivek_nambiar) December 17, 2019