ಮಂಗಳೂರು: ಸಿಎಫ್ಐ ಕಾರ್ಯಕರ್ತರ ಬಿಡುಗಡೆ
ಮಂಗಳೂರು, ಡಿ.17: ಜಾಮಿಮಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ಮೇಲೆ ಪೊಲೀಸರು ಎಸಗಿದ್ದಾರೆ ಎನ್ನಲಾದ ದೌರ್ಜನ್ಯವನ್ನು ಖಂಡಿಸಿ ಸೋಮವಾರ ಸಂಜೆ ನಗರದ ಬಲ್ಮಠದಲ್ಲಿರುವ ಕಲೆಕ್ಟರ್ ಗೇಟ್ ಬಳಿ ರಸ್ತೆ ತಡೆ ನಡೆಸಿ ಬಂಧನಕ್ಕೊಳಗಾಗಿದ್ದ 38 ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಕಾರ್ಯಕರ್ತರನ್ನು ಕದ್ರಿ ಪೊಲೀಸರು ತಡರಾತ್ರಿ ಬಿಡುಗಡೆಗೊಳಿಸಿದ್ದಾರೆ.
ಅನುಮತಿ ಇಲ್ಲದೆ ರಸ್ತೆ ತಡೆ ನಡೆಸಿದ ಹಿನ್ನಲೆಯಲ್ಲಿ ಕಾರ್ಯಕರ್ತರ ಮೇಲೆ ಲಾಠಿಜಾರ್ಜ್ ನಡೆಸಿ ಬಂಧಿಸಿದ ಪೊಲೀಸರು ಸೆ.143ರ ಅನ್ವಯ ಪ್ರಕರಣ ದಾಖಲಿಸಿ ಬಿಡುಗಡೆಗೊಳಿಸಿದ್ದಾರೆ. ಈ ಮಧ್ಯೆ ಪೊಲೀಸ್ ಬಸ್ಸಿನಲ್ಲಿ ಕರೆದೊಯ್ದ ಕಾರ್ಯಕರ್ತರ ಪೈಕಿ ಹಲವರಿಗೆ ಪೊಲೀಸರು ಕದ್ರಿ ಠಾಣೆಯ ಆವರಣದಲ್ಲೂ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಆ ಹಿನ್ನಲೆಯಲ್ಲಿ ಸುಮಾರು 7 ಮಂದಿ ಕಾರ್ಯಕರ್ತರನ್ನು ವೈದ್ಯಕೀಯ ತಪಾಸಣೆಗೊಳಪಡಿಸಲಾಗಿದ್ದು, ಲಾಠಿಜಾರ್ಜ್ ನಡೆಸಿ ಕರೆದೊಯ್ದು ಠಾಣೆಯೊಳಗೆ ಕರೆದೊಯ್ಯುವಾಗ ಹಲ್ಲೆ ನಡೆಸಿದ ಕ್ರಮದ ವಿರುದ್ಧ ನ್ಯಾಯಾಲಯದ ಮೆಟ್ಟಲೇರಲು ಸಿಎಫ್ಐ ಮುಂದಾಗಿದೆ ಎಂದು ತಿಳಿದು ಬಂದಿದೆ.