ಕೆಲಸದ ಸ್ಥಳಗಳಲ್ಲಿ ಲಿಂಗ ಸಮಾನತೆ 257 ವರ್ಷ ದೂರ: ಡಬ್ಲ್ಯುಇಎಫ್
ಜಿನೀವ (ಸ್ವಿಟ್ಸರ್ಲ್ಯಾಂಡ್), ಡಿ. 17: ಕೆಲಸದ ಸ್ಥಳದಲ್ಲಿ ಸಮಾನತೆ ಪಡೆಯಲು ಮಹಿಳೆಯರು ಇನ್ನು ಎರಡು ಶತಮಾನಗಳಿಗೂ ಅಧಿಕ ಸಮಯ ಕಾಯಬೇಕಾಗಬಹುದು ಎಂದು ಮಂಗಳವಾರ ಪ್ರಕಟಗೊಂಡ ವರದಿಯೊಂದು ಹೇಳಿದೆ. ಸಮಾನತೆಗಾಗಿ ಬೇಡಿಕೆಗಳು ಹೆಚ್ಚುತ್ತಿರುವ ಹೊರತಾಗಿಯೂ, ಕೆಲಸದ ಸ್ಥಳಗಳಲ್ಲಿ ಸ್ತ್ರೀ-ಪುರುಷರ ನಡುವಿನ ಅಸಮಾನತೆ ಹೆಚ್ಚುತ್ತಿದೆ ಎಂದು ವಿಶ್ವ ಆರ್ಥಿಕ ವೇದಿಕೆ (ಡಬ್ಲ್ಯುಇಎಫ್)ಯ ವರದಿ ತಿಳಿಸಿದೆ.
ರಾಜಕೀಯ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರ ಮುಂತಾದ ಕ್ಷೇತ್ರಗಳಲ್ಲಿ ಲಿಂಗ ತಾರತಮ್ಯ ನಿಧಾನವಾಗಿ ಕಡಿಮೆಯಾಗುತ್ತಿದ್ದರೂ, ಕೆಲಸದ ಸ್ಥಳಗಳಲ್ಲಿರುವ ಅಸಮಾನತೆ 2276ನೇ ಇಸವಿಗೆ ಮುಂಚಿತವಾಗಿ ಹೋಗುವ ನಿರೀಕ್ಷೆಯಿಲ್ಲ ಎಂದು ವರದಿ ಅಭಿಪ್ರಾಯಪಟ್ಟಿದೆ.
ಜಾಗತಿಕ ಮಟ್ಟದಲ್ಲಿ ಕೆಲಸ ಸ್ಥಳಗಳಲ್ಲಿನ ತಾರತಮ್ಯವು ಕಳೆದ ವರ್ಷದಿಂದ ಮತ್ತಷ್ಟು ಹೆಚ್ಚಾಗಿದೆ ಎಂದು ಅದು ಹೇಳಿದೆ. ಕಳೆದ ವರ್ಷದ ತಾರತಮ್ಯ ಮಟ್ಟಕ್ಕೆ ಹೋಲಿಸಿದರೆ ಸಮಾನತೆ ಸಾಧಿಸಲು ಇನ್ನೂ 202 ವರ್ಷಗಳು ಬೇಕಾಗಿದ್ದವು.
ಜಿನೀವದಲ್ಲಿರುವ ಸಂಘಟನೆಯ ವಾರ್ಷಿಕ ವರದಿಯು ಶಿಕ್ಷಣ, ಆರೋಗ್ಯ, ಆರ್ಥಿಕ ಅವಕಾಶ ಮತ್ತು ರಾಜಕೀಯ ಸಬಲೀಕರಣ ಕ್ಷೇತ್ರಗಳಲ್ಲಿ 153 ದೇಶಗಳ ಸ್ತ್ರೀ ಮತ್ತು ಪುರುಷರ ನಡುವಿನ ಅಂತರವನ್ನು ಲೆಕ್ಕಹಾಕುತ್ತದೆ.