ಜಾಮಿಯಾ ವಿವಿಯಲ್ಲಿ ಪೊಲೀಸ್ ದೌರ್ಜನ್ಯ: ಕಣ್ಣಿನ ದೃಷ್ಟಿ, ಬಲಗೈ ಕಳೆದುಕೊಂಡ ವಿದ್ಯಾರ್ಥಿಗಳು
ವಿವಿಯ ಶಿಸ್ತುಪಾಲನಾಧಿಕಾರಿ ಹೇಳಿಕೆ

ಹೊಸದಿಲ್ಲಿ, ಡಿ.17: ಜಾಮಿಯಾ ಮಿಲ್ಲಿಯಾ ವಿವಿಯಲ್ಲಿ ರವಿವಾರ ನಡೆದ ಹಿಂಸಾಚಾರದಲ್ಲಿ ಓರ್ವ ವಿದ್ಯಾರ್ಥಿ ಎಡ ಕಣ್ಣಿನ ದೃಷ್ಟಿಯನ್ನು ಕಳೆದುಕೊಂಡಿದ್ದಾನೆ ಎಂದು ವಿವಿಯ ಮುಖ್ಯ ಶಿಸ್ತುಪಾಲನಾ ಅಧಿಕಾರಿ ವಸೀಂ ಅಹ್ಮದ್ ಹೇಳಿದ್ದಾರೆ.
ಅಲ್ಲದೆ ಅಶ್ರುವಾಯು ಸೆಲ್ ಸಿಡಿದು ಕೈಗೆ ಏಟಾದ ಕಾರಣ ಆಮು(ಆಲಿಗಢ ಮುಸ್ಲಿಂ ವಿವಿ) ವಿದ್ಯಾರ್ಥಿಯ ಕೈಯನ್ನೇ ಕತ್ತರಿಸಬೇಕಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಪೌರತ್ವ ಮಸೂದೆ ವಿರೋಧಿಸಿ ದಕ್ಷಿಣ ದಿಲ್ಲಿಯ ಜಾಮಿಯಾ ವಿವಿ ಆವರಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳನ್ನು ಚದುರಿಸಲು ರವಿವಾರ ಪೊಲೀಸರು ಬಲಪ್ರಯೋಗ ನಡೆಸಿದ್ದಲ್ಲದೆ ವಿವಿಯ ಆವರಣಕ್ಕೆ ನುಗ್ಗಿ ವಿದ್ಯಾರ್ಥಿಗಳನ್ನು ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಆವರಣದೊಳಗೆ ಪ್ರವೇಶಿಸಲು ಪೊಲೀಸರಿಗೆ ತಾನು ಅನುಮತಿ ನೀಡಿರಲಿಲ್ಲ ಎಂದು ಅಹ್ಮದ್ ಹೇಳಿದ್ದಾರೆ. ಪೊಲೀಸರು ಸಮವಸ್ತ್ರ ಧರಿಸಿರಲಿಲ್ಲ. ಪೊಲೀಸ್ ಸಮವಸ್ತ್ರ ಧರಿಸದೆ ಆವರಣದೊಳಗೆ ನುಗ್ಗಿದ ವ್ಯಕ್ತಿಗಳು ಯಾರು ಎಂದು ತಿಳಿಯಬೇಕಿದೆ ಎಂದವರು ಹೇಳಿದ್ದಾರೆ.
ಪೊಲೀಸರು ವಿವಿಯ ಆವರಣಕ್ಕೆ ನುಗ್ಗಿ ಅಶ್ರುವಾಯು ಶೆಲ್ ಸಿಡಿಸಿದಾಗ ಲೈಬ್ರೆರಿಯಲ್ಲಿದ್ದ ವಿದ್ಯಾರ್ಥಿಯ ಕಣ್ಣಿಗೆ ಶೆಲ್‌ನ ಚೂರು ಬಡಿದಿದೆ. ತಕ್ಷಣ ಆತನನ್ನು ಎಐಐಎಂಎಸ್‌ಗೆ ಚಿಕಿತ್ಸೆಗೆಂದು ಕರೆದೊಯ್ಯಲಾಗಿದೆ. ವಿದ್ಯಾರ್ಥಿಯ ಎಡಕಣ್ಣಿನ ದೃಷ್ಟಿ ಶಾಶ್ವತವಾಗಿ ನಷ್ಟವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಬೇಕೆಂದು ಕೋರಿ ವಿವಿಯು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರನ್ನು ಸಂಪರ್ಕಿಸಲಿದೆ ಎಂದು ಅಹ್ಮದ್ ಹೇಳಿದ್ದಾರೆ.
ವಿದ್ಯಾರ್ಥಿಗಳನ್ನು ಪೊಲೀಸರ ಥಳಿತದಿಂದ ರಕ್ಷಿಸಲು ಮುಂದಾದ ವಿದ್ಯಾರ್ಥಿನಿಯರ ಮೇಲೂ ಲಾಠಿಚಾರ್ಜ್ ನಡೆಸಲಾಗಿದೆ. ತಾನು ಮತ್ತು ಇತರ 25 ವಿದ್ಯಾರ್ಥಿಗಳು(ಇವರಲ್ಲಿ 12 ವಿದ್ಯಾರ್ಥಿನಿಯರು) ಲೈಬ್ರೆರಿಯಲ್ಲಿದ್ದಾಗ ಏಕಾಏಕಿ ಅಲ್ಲಿಗೆ ಪ್ರವೇಶಿಸಿದ ಪೊಲೀಸರು ನಿರ್ದಯೆಯಿಂದ ಥಳಿಸಿದರು. ಪ್ರಜ್ಞೆ ತಪ್ಪಿದ ತನ್ನನ್ನು ನ್ಯೂಫ್ರೆಂಡ್ಸ್ ಕಾಲನಿ ಪೊಲೀಸ್ ಠಾಣೆಗೆ ಕರೆದೊಯ್ದಿದ್ದು ಅಲ್ಲಿ ನೆಲದ ಮೇಲೆ ಕೂರಿಸಿದ್ದಾರೆ. ಚಿಕಿತ್ಸೆಯನ್ನೂ ನೀಡಿಲ್ಲ ಎಂದು ಎಂಬಿಎ ವಿದ್ಯಾರ್ಥಿ ಮುಹಮ್ಮದ್ ಮುಸ್ತಫಾ ಆರೋಪಿಸಿದ್ದಾರೆ. ಜಾಮಿಯಾ ವಿವಿಯಲ್ಲಿ ಹಲ್ಲೆಗೊಳಗಾದ ಹಾಗೂ ಬಂಧಿಸಲ್ಪಟ್ಟ ಬಹುತೇಕ ವಿದ್ಯಾರ್ಥಿಗಳು ಲೈಬ್ರೆರಿಯಲ್ಲಿದ್ದರು ಎಂದು ‘ಯುನೈಟೆಡ್ ಎಗೈನ್ಸ್ಟ್ ಹೋಪ್’ ಎಂಬ ಮಾನವ ಹಕ್ಕು ಪರ ಹೋರಾಡುವ ಸಂಘಟನೆಯ ನದೀಮ್ ಹೇಳಿದ್ದಾರೆ.
ಪೊಲೀಸರ ದೌರ್ಜನ್ಯಕ್ಕೆ ಬೆದರಿ ಸಮೀಪದ ಮನೆಯಲ್ಲಿ ಆಶ್ರಯ ಪಡೆದಿದ್ದೆ. ಅಲ್ಲಿಗೆ ಬಂದ ಪೊಲೀಸರು ತನಗೆ ಆಶ್ರಯ ನೀಡಿದ್ದಕ್ಕೆ ಮನೆಯ ವೃದ್ಧ ದಂಪತಿಗೆ ಎಚ್ಚರಿಕೆ ನೀಡಿ ತೆರಳಿದ್ದಾರೆ ಎಂದು ಜಾಮಿಯಾ ವಿವಿಯ ವಿದ್ಯಾರ್ಥಿನಿ ರಹೀಲಾ ಆರೋಪಿಸಿದ್ದಾರೆ.
ಉತ್ತರಪ್ರದೇಶದ ಆಲಿಗಢ ಮುಸ್ಲಿಂ ವಿವಿ(ಆಮು) ವಿದ್ಯಾರ್ಥಿಗಳೂ ಪೌರತ್ವ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸಿದ್ದು, ಅಲ್ಲಿ ಪೊಲೀಸರು ಅಶ್ರುವಾಯು ಶೆಲ್ ಸಿಡಿಸಿದಾಗ ಓರ್ವ ವಿದ್ಯಾರ್ಥಿಯ ತೋಳಿಗೆ ಶೆಲ್‌ನ ಚೂರು ಹೊಕ್ಕಿದ್ದು, ಆತನ ಬಲ ಕೈಯನ್ನೇ ಕತ್ತರಿಸಬೇಕಾಗಿದೆ ಎಂದು ವಕೀಲ ಫವಾಜ್ ಶಹೀನ್ ಆರೋಪಿಸಿದ್ದಾರೆ.
ಘಟನೆಯಲ್ಲಿ ಬಂಧಿತ ವಿದ್ಯಾರ್ಥಿಗಳ ಅಥವಾ ಗಾಯಗೊಂಡ ವಿದ್ಯಾರ್ಥಿಗಳ ವಿವರವನ್ನು ಪೋಷಕರಿಗೆ ನೀಡಲು ಪೊಲೀಸರು ನಿರಾಕರಿಸಿದ್ದಾರೆ ಎಂದು ಮಹಿಳಾ ಹಕ್ಕುಗಳ ಕಾರ್ಯಕರ್ತೆ ಫರ್ಹಾ ನಖ್ವಿ ಆರೋಪಿಸಿದ್ದಾರೆ. ಹೋಲಿ ಫ್ಯಾಮಿಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು ವಿದ್ಯಾರ್ಥಿಗಳನ್ನು ರವಿವಾರ ವಶಕ್ಕೆ ಪಡೆದಿರುವ ಪೊಲೀಸರು ಕಲ್ಕಾಲಿ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ ಎಂದವರು ಹೇಳಿದ್ದಾರೆ.
ಘಟನೆಯ ಬಗ್ಗೆ ಬಾಯಿಬಿಟ್ಟರೆ ಕುಟುಂಬದ ಸದಸ್ಯರ ಮೇಲೆ ಪ್ರಕರಣ ದಾಖಲಿಸುವುದಾಗಿ ಪೊಲೀಸರು ಬೆದರಿಸಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.







