‘ಸಾವಧಾನ್ ಇಂಡಿಯಾ’ದಿಂದ ನಿರೂಪಕ ಸುಷಾಂತ್ ಸಿಂಗ್‌ಗೆ ಖೊಕ್
ಪೌರತ್ವ ಕಾಯ್ದೆ ವಿರೋಧಿಸಿ ಪ್ರತಿಭಟನೆ

ಮುಂಬೈ, ಡಿ.17: ಸುಮಾರು 8 ವರ್ಷಗಳಿಂದ ನಡೆಸಿಕೊಡುತ್ತಿದ್ದ ಜನಪ್ರಿಯ ಟಿವಿ ಕಾರ್ಯಕ್ರಮ ‘ಸಾವಧಾನ್ ಇಂಡಿಯಾ’ ಕಾರ್ಯಕ್ರಮವನ್ನು ಇನ್ನು ನಿರೂಪಿಸುವುದಿಲ್ಲ ಎಂದು ನಟ ಸುಷಾಂತ್ ಸಿಂಗ್ ಹೇಳಿದ್ದಾರೆ.
ಪೌರತ್ವ ಕಾಯ್ದೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವ ಕಾರಣದಿಂದ ಬಹುಷಃ ತನ್ನನ್ನು ಕೈಬಿಟ್ಟಿರಬೇಕು ಎಂದವರು ತಿಳಿಸಿದ್ದಾರೆ. 2011ರಲ್ಲಿ ಕಾರ್ಯಕ್ರಮ ಅರಂಭವಾದಂದಿನಿಂದಲೂ ಸುಷಾಂತ್ ಸಿಂಗ್ ಅದರ ನಿರೂಪಕನಾಗಿ ಜನಪ್ರಿಯವಾಗಿದ್ದರು.
ಸಾವಧಾನ್ ಇಂಡಿಯಾ’ದೊಂದಿಗಿನ ತನ್ನ ಒಡನಾಟ ಮುಗಿದಿದೆ. ಸತ್ಯವನ್ನು ಹೇಳಿದ್ದಕ್ಕೆ ತಾನು ತೆರುತ್ತಿರುವ ಸಣ್ಣ ಬೆಲೆ ಇದಾಗಿರಬಹುದು ಎಂದು ಸಿಂಗ್ ಟ್ವೀಟ್ ಮಾಡಿದ್ದಾರೆ.
ಜಾಮಿಯಾ ವಿವಿಯಲ್ಲಿ ಪೊಲೀಸರು ಪ್ರತಿಭಟನಾ ನಿರತ ವಿದ್ಯಾರ್ಥಿಗಳ ವಿರುದ್ಧ ನಡೆಸಿದ ಕಾರ್ಯಾಚರಣೆಯನ್ನು ಅವರು ಖಂಡಿಸಿದ್ದಾರೆ.
ಸ್ಟಾರ್ ಭಾರತ್ ಟಿವಿ ವಾಹಿನಿಯಲ್ಲಿ ‘ಸಾವಧಾನ್ ಇಂಡಿಯಾ’ ಕಾರ್ಯಕ್ರಮ ಪ್ರಸಾರವಾಗುತ್ತಿದ್ದು ಸುಷಾಂತ್ ಸಿಂಗ್ ಹೊರಬಿದ್ದಿರುವ ವರದಿಯ ಬಗ್ಗೆ ಟಿವಿ ವಾಹಿನಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.





