ಪೊಲೀಸ್ ಅಧಿಕಾರಿಗಳ ವಿರುದ್ಧದ ನ್ಯಾಯಾಂಗ ನಿಂದನೆ ತೆರವು ಮಾಡಿದ ಹೈಕೋರ್ಟ್
ಪೊಲೀಸ್ ಠಾಣೆ ವ್ಯಾಪ್ತಿ ಕೇಳದೆ ಎಫ್‌ಐಆರ್

ಬೆಂಗಳೂರು, ಡಿ.17: ಎಫ್‌ಐಆರ್ ದಾಖಲಿಸುವಾಗ ಪೊಲೀಸ್ ಠಾಣಾ ವ್ಯಾಪ್ತಿ ಕೇಳದಂತೆ ರಾಜ್ಯದ ಎಲ್ಲ ಪೊಲೀಸ್ ಠಾಣೆಗಳಿಗೆ ನಿರ್ದೇಶಿಸಬೇಕೆಂಬ ಆದೇಶವನ್ನು ಪಾಲಿಸದ ಹಿನ್ನೆಲೆಯಲ್ಲಿ ನ್ಯಾಯಾಂಗ ನಿಂದನೆ ನೋಟಿಸ್ ಜಾರಿಗೊಳಿಸಿತ್ತು. ಆದರೆ, ಮಂಗಳವಾರ ಪೊಲೀಸ್ ಇಲಾಖೆಯ ಡಿಜಿ-ಐಜಿಪಿ ಹಾಗೂ ಸರಕಾರದ ಕಡೆಯಿಂದ ಪ್ರಮಾಣ ಪತ್ರ ಸಲ್ಲಿಸಿದ್ದರಿಂದ ಅಧಿಕಾರಿಗಳ ಮೇಲಿನ ನ್ಯಾಯಾಂಗ ನಿಂದನೆ ತೆರವುಗೊಳಿಸಿ ಹೈಕೋರ್ಟ್ ಆದೇಶಿಸಿದೆ.
ಈ ಕುರಿತು ವಕೀಲ ಎಸ್.ಉಮಾಪತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನ್ಯಾಯಮೂರ್ತಿ ಅರವಿಂದ್ ಕುಮಾರ್ ನೇತೃತ್ವದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ಕಳೆದ ವಿಚಾರಣೆ ವೇಳೆ ಅರ್ಜಿದಾರರು, ಸಾರ್ವಜನಿಕರು ದೂರು ದಾಖಲಿಸಲು ಬಂದಾಗ ಠಾಣಾ ವ್ಯಾಪ್ತಿ ಕೇಳದಂತೆ ರಾಜ್ಯದ ಎಲ್ಲ ಪೊಲೀಸ್ ಠಾಣೆಗಳಿಗೆ ಅಧಿಸೂಚನೆ ಮೂಲಕ ನಿರ್ದೇಶಿಸಬೇಕು. ಹಾಗೂ ಈ ಬಗ್ಗೆ ತಿಂಗಳಲ್ಲಿ ಕ್ರಮ ಕೈಗೊಳ್ಳುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಹೈಕೋರ್ಟ್ ನಿರ್ದೇಶನ ನೀಡಿತ್ತು. ಆದರೆ ಈ ಆದೇಶವನ್ನು ಇಲ್ಲಿಯವರೆಗೆ ಪಾಲಿಸಿಲ್ಲ ಎಂದು ಅರ್ಜಿದಾರ ವಕೀಲ ಪೀಠಕ್ಕೆ ತಿಳಿಸಿದ್ದರು. ಹೀಗಾಗಿ, ನ್ಯಾಯಪೀಠವು ಕೋರ್ಟ್ ಆದೇಶವನ್ನು ಯಾಕೆ ಪಾಲಿಸಿಲ್ಲ ಎಂಬ ಕುರಿತು ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ಸೂಚಿಸಿ, ರಾಜ್ಯ ಪೊಲೀಸ್ ಮಹಾನಿರ್ದೇಶಕಿ, ಗೃಹ ಇಲಾಖೆಯ ರಜಿನೀಶ್ ಗೋಯಲ್‌ಗೆ ಕಳೆದ ವಿಚಾರಣೆ ವೇಳೆ ನ್ಯಾಯಾಂಗ ನಿಂದನೆ ನೋಟಿಸ್ ಜಾರಿಗೊಳಿಸಿತ್ತು. ಸದ್ಯ ಪ್ರಮಾಣ ಪತ್ರ ಸಲ್ಲಿಸಿದ್ದರಿಂದ ಹೈಕೋರ್ಟ್ ನ್ಯಾಯಾಂಗ ನಿಂದನೆ ತೆರವು ಮಾಡಿ ಆದೇಶಿಸಿದೆ.





