ಅಸ್ಸಾಂ: ಕರ್ಫ್ಯೂ ಹಿಂದೆಗೆತ, ಬ್ರಾಡ್ ಬ್ಯಾಂಡ್ ಸೇವೆ ಮರು ಆರಂಭ

ಹೊಸದಿಲ್ಲಿ, ಡಿ. 17: ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಅಸ್ಸಾಂನಲ್ಲಿ ಹಿಂಸಾತ್ಮಕ ಪ್ರತಿಭಟನೆ ನಡೆದ ಕೆಲವು ದಿನಗಳ ಬಳಿಕ ರಾಜ್ಯಾಡಳಿತ ಮಂಗಳವಾರ ಕರ್ಫ್ಯೂ ಹಿಂದೆಗೆದಿದೆ ಹಾಗೂ ರಾಜ್ಯದಲ್ಲಿ ಬ್ರಾಡ್ ಬ್ಯಾಂಡ್ ಸೇವೆ ಮರು ಸ್ಥಾಪಿಸಿದೆ.
ಈ ನಿರ್ಧಾರದ ಬಗ್ಗೆ ಮಂಗಳವಾರ ಬೆಳಗ್ಗೆ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಟ್ವೀಟ್ ಮಾಡಿದ್ದಾರೆ.
ದಿಬ್ರುಗಢ ಜಿಲ್ಲೆಯಲ್ಲಿ ಬೆಳಗ್ಗೆ 6 ಗಂಟೆಯಿಂದ ಸಂಜೆ 8 ಗಂಟೆ ವರೆಗೆ ಕರ್ಫ್ಯೂ ಸಡಿಲಿಸಲಾಗಿದೆ. ರಾಜ್ಯ ಸರಕಾರ ಸೋಮವಾರ ಸಭೆ ನಡೆಸಿ ಕಾನೂನು ಹಾಗೂ ಸುವ್ಯವಸ್ಥೆ ಪರಿಶೀಲಿಸಿದ ಬಳಿಕ ಅಸ್ಸಾಂನ ಗುವಾಹತಿಯಲ್ಲಿ ಕರ್ಫ್ಯೂ ಹಿಂದೆಗೆಯುವ ನಿರ್ಧಾರ ತೆಗೆದುಕೊಳ್ಳಲಾಯಿತು. ಸಭೆಯಲ್ಲಿ ಮುಖ್ಯಮಂತ್ರಿ ಸರ್ಬಾನಂದ ಸೋನೋವಾಲ್ ಅಧ್ಯಕ್ಷತೆ ವಹಿಸಿದ್ದರು.
''ಗುವಾಹತಿಯಲ್ಲಿ ಬೆಳಗ್ಗೆ 6 ಗಂಟೆಯಿಂದ ಕರ್ಫ್ಯೂ ಸಂಪೂರ್ಣವಾಗಿ ಹಿಂದೆಗೆಯಲು ಸಭೆ ನಿರ್ಧರಿಸಿತು. ರಾಜ್ಯಾದ್ಯಂತ ನಾಳೆ ಬೆಳಗ್ಗಿನಿಂದ ಇಂಟರ್‌ನೆಟ್ ಸೇವೆಯನ್ನು ಮರು ಸ್ಥಾಪಿಸಲು ಕೂಡ ಸಭೆಯಲ್ಲಿ ನಿರ್ಣಯಿಸಲಾಯಿತು'' ಎಂದು ಮುಖ್ಯಮಂತ್ರಿ ಕಚೇರಿ ಮಂಗಳವಾರ ನೀಡಿದ ಹೇಳಿಕೆ ತಿಳಿಸಿದೆ.
ಕಳೆದ ವಾರ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆ ಸಂದರ್ಭ ಸಂಭವಿಸಿದ ಹಿಂಸಾಚಾರದಲ್ಲಿ ನಾಲ್ವರು ಮೃತಪಟ್ಟ ಬಳಿಕ ರಾಜ್ಯದಲ್ಲಿ ಉಂಟಾಗಿದ್ದ ಉದ್ವಿಗ್ನ ಪರಿಸ್ಥಿತಿ ಸುಧಾರಿಸಿದೆ ಎಂದು ಅಸ್ಸಾಂನ ಪೊಲೀಸ್ ಮಹಾನಿರ್ದೇಶಕ ಭಾಸ್ಕರ್‌ಜ್ಯೋತಿ ಮಹಂತ ತಿಳಿಸಿದ್ದಾರೆ.
''ಪೊಲೀಸರು ಕೈಗೊಂಡ ಕ್ರಮದಿಂದ ನಾಲ್ವರು ಮೃತಪಟ್ಟಿದಾರೆ. ಹೆಚ್ಚು ಜನರು ಹಾಗೂ ಸೊತ್ತನ್ನು ರಕ್ಷಿಸುವ ಸಲುವಾಗಿ ಪೊಲೀಸರು ಗುಂಡು ಹಾರಿಸುವ ಪರಿಸ್ಥಿತಿ ನಿರ್ಮಾಣ ಆಯಿತು'' ಎಂದು ಮಹಂತ ಹೇಳಿದ್ದಾರೆ.
''ಈಗ ಪರಿಸ್ಥಿತಿ ಸುಧಾರಿಸಿದೆ. ನಾವು ಇದುವರೆಗೆ 190 ಮಂದಿಯನ್ನು ಬಂಧಿಸಿದ್ದೇವೆ. ಹಿಂಸಾಚಾರದ ಕುರಿತು ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸಲು ವಿಶೇಷ ತನಿಖಾ ತಂಡ ರೂಪಿಸಿದ್ದೇವೆ'' ಎಂದು ಅವರು ತಿಳಿಸಿದರು.







