Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ವಿಡಂಬನೆ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಎನ್‌ಕೌಂಟರ್ ವಿಕೃತ ನ್ಯಾಯ ವ್ಯವಸ್ಥೆಯ...

ಎನ್‌ಕೌಂಟರ್ ವಿಕೃತ ನ್ಯಾಯ ವ್ಯವಸ್ಥೆಯ ದ್ಯೋತಕ

ನಾ. ದಿವಾಕರನಾ. ದಿವಾಕರ17 Dec 2019 8:16 PM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share
ಎನ್‌ಕೌಂಟರ್ ವಿಕೃತ ನ್ಯಾಯ ವ್ಯವಸ್ಥೆಯ ದ್ಯೋತಕ

ಈ ವಿಕೃತ ಸಾಮಾಜಿಕ ವ್ಯವಸ್ಥೆಗೆ ಬುನಾದಿ ಹಾಕುವುದನ್ನು ನಾಗರಿಕ ಪ್ರಜ್ಞಾವಂತ ಸಮಾಜ ತಡೆಗಟ್ಟಬೇಕಿದೆ. ದೇಶದ ಸ್ಥಾಪಿತ ಕಾನೂನು ವ್ಯವಸ್ಥೆಯನ್ನು ಉಲ್ಲಂಘಿಸುವ ಯಾರೇ ಆದರೂ ಶಿಕ್ಷೆಗೊಳಗಾಗಬೇಕು ಎಂದಾದರೆ ನಕಲಿ ಎನ್‌ಕೌಂಟರ್ ನಡೆಸುವವರೂ ಶಿಕ್ಷೆಗೊಳಗಾಗಬೇಕಾಗುತ್ತದೆ. ಅನಿವಾರ್ಯ ಪರಿಸ್ಥಿತಿಯಲ್ಲಿ ಆತ್ಮರಕ್ಷಣೆಗಾಗಿ, ಭಯೋತ್ಪಾದಕರಿಂದ ರಕ್ಷಿಸಿಕೊಳ್ಳಲು ನಡೆಸುವ ಎನ್‌ಕೌಂಟರ್‌ಗಳನ್ನು ಹೊರತುಪಡಿಸಿ ಮತ್ತಾವುದೇ ರೀತಿಯ ಎನ್‌ಕೌಂಟರ್‌ಗಳನ್ನು ನಾಗರಿಕ ಸಮಾಜ ಒಪ್ಪಲಾಗುವುದಿಲ್ಲ. ಒಪ್ಪಿದರೆ ನಾಗರಿಕ ಪ್ರಜ್ಞಾವಂತ ಪ್ರಜೆಗಳು ಎಂದು ಹೇಳಿಕೊಳ್ಳುವ ನೈತಿಕತೆಯನ್ನು ನಾವು ಕಳೆದುಕೊಂಡುಬಿಡುತ್ತೇವೆ.

ತೆಲಂಗಾಣದಲ್ಲಿ ವೈದ್ಯೆ ದಿಶಾ ಮೇಲಿನ ಅತ್ಯಾಚಾರ ಮತ್ತು ಕಗ್ಗೊಲೆಯ ನಂತರ ವ್ಯಕ್ತವಾದ ಸಾರ್ವಜನಿಕ ಆಕ್ರೋಶಕ್ಕೆ ಶೀಘ್ರವಾಗಿ ಪ್ರತಿಕ್ರಿಯಿಸಲೇಬೇಕು ಎಂದು ಹಟಕ್ಕೆ ಬಿದ್ದಂತೆ ಪೊಲೀಸರು ಆರೋಪಿಗಳನ್ನು ಎನ್‌ಕೌಂಟರ್ ಮಾಡುವ ಮೂಲಕ ಹತ್ಯೆ ಮಾಡಿರುವುದು ದೇಶವ್ಯಾಪಿ ಚರ್ಚೆಗೊಳಗಾಗಿದ್ದು, ವ್ಯಾಪಕ ಟೀಕೆಗೂ ಒಳಗಾಗಿದೆ. ತೆಲಂಗಾಣ ಪೊಲೀಸರ ಈ ಕ್ರಮ ಕೇವಲ ನ್ಯಾಯಾಂಗ ನಿಷ್ಕರ್ಷೆಗೊಳಾಗುವುದೇ ಅಲ್ಲದೆ ಸಾರ್ವಜನಿಕ ವಲಯದಲ್ಲೂ ಪರಾಮರ್ಶೆಗೊಳಗಾಗಿದೆ. ಎನ್‌ಕೌಂಟರ್ ಸುತ್ತ ಹೆಣೆಯಲಾಗಿರುವ ಅಧಿಕೃತ ವಿವರಗಳ ಸತ್ಯಾಸತ್ಯತೆಗಳು ಸೂಕ್ತ ತನಿಖೆ ಮತ್ತು ವಿಚಾರಣೆಯ ನಂತರವಷ್ಟೇ ಬಯಲಾಗುತ್ತವೆ. ಎನ್‌ಕೌಂಟರ್ ಸ್ಪೆಷಲಿಸ್ಟ್ ಎಂದೇ ಹೆಸರಾಗಿರುವ ಸಜ್ಜನ್ ನೇತೃತ್ವದಲ್ಲಿ ನಡೆದಿರುವ ಕಾರ್ಯಾಚರಣೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದರೂ, ಅತ್ಯಾಚಾರಕ್ಕೊಳಗಾದ ಮಹಿಳೆಗೆ ಕ್ಷಿಪ್ರಗತಿಯಲ್ಲಿ ನ್ಯಾಯ ದೊರೆತಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲೇ ಎನ್‌ಕೌಂಟರ್ ಕಾರ್ಯಾಚರಣೆಯನ್ನು ವಿಜೃಂಭಣೆಯಿಂದ ಸ್ವಾಗತಿಸಲಾಗುತ್ತಿದೆ. ನ್ಯಾಯಾಂಗ ಪ್ರಕ್ರಿಯೆಯಲ್ಲಿನ ವಿಳಂಬ ಮತ್ತು ನಿಧಾನಗತಿಯ ವಿಚಾರಣಾ ಪ್ರಕ್ರಿಯೆಯನ್ನು ಗಮನದಲ್ಲಿಟ್ಟುಕೊಂಡು ಎನ್‌ಕೌಂಟರ್ ಕಾರ್ಯಾಚರಣೆಯನ್ನು ಸ್ವಾಗತಿಸಲಾಗುತ್ತಿದೆ. ಇಲ್ಲಿ ಪ್ರಶ್ನೆ ಉದ್ಭವಿಸಿರುವುದು ಅಪರಾಧ ಮತ್ತು ಶಿಕ್ಷೆಗಿಂತಲೂ ಹೆಚ್ಚಾಗಿ ಶಿಕ್ಷೆ ವಿಧಿಸುವ ವಿಧಾನದ ಬಗ್ಗೆ ಎನ್ನುವುದನ್ನು ಗಮನಿಸಬೇಕಿದೆ. ದೇಶಾದ್ಯಂತ ರಾಜಕೀಯ ನಾಯಕರು, ಹಿರಿಯ ಪೊಲೀಸ್ ಅಧಿಕಾರಿಗಳು, ನಿವೃತ್ತ ಪೊಲೀಸ್ ಅಧಿಕಾರಿಗಳು, ಸುಶಿಕ್ಷಿತ ಸಾರ್ವಜನಿಕರು ಮತ್ತು ಮಹಿಳಾ ಸಂಘಟನೆಗಳು ತೆಲಂಗಾಣದ ಎನ್‌ಕೌಂಟರ್ ಸ್ವಾಗತಾರ್ಹ ಎಂದೇ ಹೇಳುತ್ತಿರುವುದನ್ನು ನೋಡಿದರೆ ನಮ್ಮ ಸಮಾಜ ತ್ವರಿತ ನ್ಯಾಯಕ್ಕಾಗಿ ಎಷ್ಟು ಹಾತೊರೆಯುತ್ತಿದೆ ಎಂದು ಗ್ರಹಿಸಬಹುದು. ಆದರೆ ಸಂತ್ರಸ್ತರಿಗೆ ಕ್ಷಿಪ್ರ ಗತಿಯಲ್ಲಿ ನ್ಯಾಯ ಒದಗಿಸುವ ಭರದಲ್ಲಿ ನ್ಯಾಯಾಂಗ ವ್ಯವಸ್ಥೆಯನ್ನೇ ಅಪಹಾಸ್ಯಕ್ಕೀಡುಮಾಡುವ ಎನ್‌ಕೌಂಟರ್ ಸಂಸ್ಕೃತಿಯನ್ನು ವೈಭವೀಕರಿಸುವುದು ನಾಗರಿಕ ಸಮಾಜದ ಲಕ್ಷಣವಲ್ಲ.

ನಿಜ, ನಿರ್ಭಯಾ ಪ್ರಕರಣ ನಡೆದು ಹಲವು ವರ್ಷಗಳೇ ಕಳೆದಿದ್ದರೂ ಇಂದಿಗೂ ಆರೋಪಿಗಳಿಗೆ ಶಿಕ್ಷೆಯಾಗಿಲ್ಲ, ಇನ್ನೂ ನೂರಾರು ಪ್ರಕರಣಗಳು ವಿಚಾರಣೆಯ ಹಂತದಲ್ಲೇ ಕೊಳೆಯುತ್ತಿವೆ. ಅತ್ಯಾಚಾರಿಗಳು ಜಾಮೀನು ಪಡೆದು ರಾಜಾರೋಷವಾಗಿ ತಿರುಗಾಡುತ್ತಿದ್ದಾರೆ, ಉನ್ನಾವೊ ಪ್ರಕರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಆರೋಪಿಗಳು ಸಂತ್ರಸ್ತೆಯನ್ನೇ ಸುಟ್ಟು ಹಾಕಿದ್ದಾರೆ. ಇವೆಲ್ಲವೂ ಗಂಭೀರ ಅಂಶಗಳೇ. ಆದರೆ ಒಂದು ನಾಗರಿಕ ಸಮಾಜದಲ್ಲಿ ಇಂತಹ ಲೋಪಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಕ್ರಮ ಜರುಗಿಸುವುದು ಆಡಳಿತ ವ್ಯವಸ್ಥೆಯ ಧ್ಯೇಯವಾಗಬೇಕೇ ಹೊರತು ಆರೋಪ ಸಾಬೀತಾಗುವ ಮುನ್ನವೇ ಆರೋಪಿಗಳನ್ನು ಹತ್ಯೆ ಮಾಡುವುದು ಸ್ವೀಕೃತವಾಗಬಾರದು. ಇಡೀ ವಿಶ್ವದಲ್ಲಿ ‘ಎನ್‌ಕೌಂಟರ್ ಸ್ಪೆಷಲಿಸ್ಟ್’ ಎನ್ನುವ ಅನಧಿಕೃತ ಹುದ್ದೆ ಇರುವುದು ಭಾರತದಲ್ಲಿ ಮಾತ್ರ, ಮತ್ತಾವುದೇ ನಾಗರಿಕ ಸಮಾಜದಲ್ಲಿ ಈ ವಿದ್ಯಮಾನವನ್ನು ಕಾಣಲಾಗುವುದಿಲ್ಲ. ಯಾವುದೇ ಪ್ರಜಾಸತ್ತಾತ್ಮಕ ಆಡಳಿತ ವ್ಯವಸ್ಥೆಯಲ್ಲೂ ಎನ್‌ಕೌಂಟರ್ ನಡೆಯುವುದಿಲ್ಲ ಎನ್ನುವುದೂ ಸತ್ಯ. ಏಕೆಂದರೆ ಅಪರಾಧ ಮತ್ತು ಶಿಕ್ಷೆಯನ್ನು ವ್ಯಾಖ್ಯಾನಿಸುವ ಸಂದರ್ಭದಲ್ಲಿ ನ್ಯಾಯ ವ್ಯವಸ್ಥೆ ತನ್ನದೇ ಆದ ಮೌಲ್ಯಗಳನ್ನು ರೂಢಿಸಿಕೊಂಡಿದೆ. ತನಿಖೆ, ವಿಚಾರಣೆ ಮತ್ತು ಸಾಕ್ಷ್ಯಾಧಾರಗಳ ತಪಾಸಣೆಯ ನಂತರವೇ ಅಪರಾಧವನ್ನು ಸಾಬೀತು ಮಾಡಿ ಆರೋಪಿಗಳನ್ನು ಅಪರಾಧಿಗಳೆಂದು ಘೋಷಿಸಿ ನೆಲದ ಕಾನೂನಿನನ್ವಯ ಶಿಕ್ಷೆ ವಿಧಿಸುವುದು ಅಂತರ್‌ರಾಷ್ಟ್ರೀಯ ನ್ಯಾಯ ಸಂಹಿತೆಯ ಲಕ್ಷಣವಾಗಿದೆ.

ಎನ್‌ಕೌಂಟರ್ ಮಾಡುವ ಮೂಲಕ ಅಪರಾಧವನ್ನು ಮುಚ್ಚಿಹಾಕಬಹುದೇ ಹೊರತು ಸಾಬೀತುಪಡಿಸಲು ಸಾಧ್ಯವಾಗುವುದಿಲ್ಲ. ನಿರ್ಭಯಾ ಪ್ರಕರಣದಲ್ಲಿ ನ್ಯಾಯಾಂಗ ಪ್ರಕ್ರಿಯೆ ವಿಳಂಬವಾದರೂ ಅಪರಾಧ ಮಾಡಿದವರನ್ನು ಸಾಕ್ಷ್ಯಾಧಾರಗಳ ಮೂಲಕ ಕಂಡುಹಿಡಿಯಲಾಗಿದೆ. ಆದರೆ ದಿಶಾ ಪ್ರಕರಣದಲ್ಲಿ ಎನ್‌ಕೌಂಟರ್ ಹತ್ಯೆಗೀಡಾದವರೇ ಅಪರಾಧಿಗಳು ಎಂದು ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ಒಪ್ಪಿಕೊಳ್ಳುವುದು ಅನಿವಾರ್ಯವಾಗಿದೆ. ಒಂದು ವೇಳೆ ಅಪರಾಧ ಎಸಗಿದ ವ್ಯಕ್ತಿ ಬದುಕುಳಿದಿದ್ದರೆ ಮತ್ತೊಂದು ಅತ್ಯಾಚಾರ ನಡೆದೇ ತೀರುತ್ತದೆ. ನ್ಯಾಯಾಂಗದ ತೀರ್ಪಿನ ಅನುಸಾರ ಗಲ್ಲು ಶಿಕ್ಷೆ ವಿಧಿಸಿದರೂ ಮರಣದಂಡನೆ ಶಿಕ್ಷೆಯನ್ನು ಅಂತರ್‌ರಾಷ್ಟ್ರೀಯ ಮಾನವ ಹಕ್ಕು ಸಂಹಿತೆಗಳ ನೆಲೆಯಲ್ಲಿ ಒಪ್ಪಲಾಗುವುದಿಲ್ಲ. ಆದರೂ ಶಿಕ್ಷೆಗೊಳಗಾಗುವವರು ಅಪರಾಧಿಗಳೆಂದು ಸಾಬೀತಾಗಿರುತ್ತದೆ. ಆದರೆ ದಿಶಾ ಪ್ರಕರಣದಲ್ಲಿ ಅಪರಾಧಿ ಯಾರೆಂದು ತಿಳಿಯುವುದೇ ಇಲ್ಲ. ಎನ್‌ಕೌಂಟರ್‌ಗೆ ಬಲಿಯಾದವರು ಅತ್ಯಾಚಾರ ಎಸಗಿದ್ದರೇ ಅಥವಾ ನೈಜ ಅಪರಾಧಿಯ ಸಹವರ್ತಿಗಳಾಗಿದ್ದರೇ ಎನ್ನುವುದು ತಿಳಿಯವುದೇ ಇಲ್ಲ. ಯಾವುದೇ ಪ್ರಕರಣದಲ್ಲಿ ಅನ್ವಯಿಸುವ ಸಂಗತಿ ಇದು. ಗುಜರಾತ್‌ನಲ್ಲಿ ನಡೆದ ಸೊಹ್ರಾಬುದ್ದೀನ್ ಎನ್‌ಕೌಂಟರ್ ಪ್ರಕರಣ ನಮ್ಮ ಕಣ್ಣ ಮುಂದೆಯೇ ಇದೆ. ಒಂದು ರೀತಿಯಲ್ಲಿ ಎನ್‌ಕೌಂಟರ್ ಪ್ರಕ್ರಿಯೆ ಸಾಕ್ಷ್ಯಾಧಾರಗಳನ್ನು ನಾಶಪಡಿಸುತ್ತದೆ, ಅಪರಾಧವನ್ನು ಮುಚ್ಚಿಹಾಕುತ್ತದೆ, ಅಪರಾಧಿಗಳನ್ನು ರಕ್ಷಿಸುವುದೂ ಉಂಟು. ತೆಲಂಗಾಣದ ಪ್ರಕರಣದಲ್ಲಿ ಹೀಗೆ ಹೇಳಲಾಗುವುದಿಲ್ಲ ಏಕೆಂದರೆ ಎನ್‌ಕೌಂಟರ್ ನಕಲಿ ಎಂದು ವಿಚಾರಣೆಯಲ್ಲಿ ಸ್ಪಷ್ಟವಾದ ನಂತರವಷ್ಟೇ ಸತ್ಯಾಸತ್ಯತೆ ತಿಳಿಯುತ್ತದೆ.

ಭಾರತದಲ್ಲಿ ಕೆಲವೇ ಎನ್‌ಕೌಂಟರ್ ಸ್ಪೆಷಲಿಸ್ಟುಗಳಿದ್ದಾರೆ. ಮುಂಬೈಯ ದಯಾನಾಯಕ್, ವಿಜಯ್ ಸಲಾಸ್ಕರ್, ಪ್ರದೀಪ್ ಶರ್ಮಾ ಮತ್ತು ತೆಲಂಗಾಣ ಎನ್‌ಕೌಂಟರ್ ನಡೆಸಿದ ಸಜ್ಜನ್ ಈ ಪಟ್ಟಿಯಲ್ಲಿದ್ದಾರೆ. 80 ಎನ್‌ಕೌಂಟರ್ ನಡೆಸಿದ ದಯಾನಾಯಕ್ ‘ಅಬ್ ತಕ್ ಚಪ್ಪನ್’ ಎಂಬ ಚಲನಚಿತ್ರಕ್ಕೆ ಸ್ಫೂರ್ತಿಯಾಗಿದ್ದರು. ಇಷ್ಟೇ ಹತ್ಯೆಗಳನ್ನು ಮಾಡಿದ್ದ ಸಲಾಸ್ಕರ್ ಸ್ವತಃ ಎನ್‌ಕೌಂಟರ್‌ಗೆ ಬಲಿಯಾಗಿದ್ದರು. 150 ಹತ್ಯೆ ಮಾಡಿರುವ ಪ್ರದೀಪ್ ಶರ್ಮಾ ಇನ್ನೂ ಸೇವೆಯಲ್ಲಿದ್ದಾರೆ. ಈ ಸ್ಪೆಷಲಿಸ್ಟ್‌ಗಳನ್ನು ಕಂಡು ಪೊಲೀಸರೆಲ್ಲರೂ ಎನ್‌ಕೌಂಟರ್ ಪ್ರಿಯರು ಎಂದು ಹೇಳುವುದೂ ತಪ್ಪಾಗುತ್ತದೆ. ಬಹಳಷ್ಟು ಪೊಲೀಸ್ ಅಧಿಕಾರಿಗಳು ಎಂತಹುದೇ ಸನ್ನಿವೇಶ ಎದುರಾದರೂ ಎನ್‌ಕೌಂಟರ್ ಮಾಡಲು ಹಿಂಜರಿಯುತ್ತಾರೆ. ಏಕೆಂದರೆ ಇದು ಅವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತದೆ. ನೌಕರಿ ಕಳೆದುಕೊಳ್ಳಬೇಕಾಗುತ್ತದೆ. ಕಸ್ಟಡಿ ಸಾವಿನಂತೆಯೇ ಎನ್‌ಕೌಂಟರ್ ಪ್ರಕರಣವನ್ನೂ ನ್ಯಾಯಾಂಗ ವಿಚಾರಣೆಗೊಳಪಡಿಸುತ್ತದೆ. ಭಾರತದ ಸಂದರ್ಭದಲ್ಲಿ ಪೊಲೀಸ್ ಮತ್ತು ಸೇನಾ ಸಿಬ್ಬಂದಿಯಲ್ಲಿ ಕೆಲವರು ಎನ್‌ಕೌಂಟರ್ ಮಾಡಲು ಮುಂದಾಗುತ್ತಾರೆ ಎಂದರೆ ಅದರ ಹಿಂದೆ ರಾಜಕೀಯ ಒತ್ತಡ, ಮೇಲಧಿಕಾರಿಗಳ ಒತ್ತಡ ಮತ್ತು ತ್ವರಿತ ನ್ಯಾಯ ತೀರ್ಮಾನ ಮಾಡುವ ಹಪಾಹಪಿ ಮುಖ್ಯವಾಗಿರುತ್ತದೆ. ಇಂತಹ ಕೆಲವೇ ಅಧಿಕಾರಿಗಳನ್ನು ವ್ಯವಸ್ಥೆಯ ಕೂಸುಗಳು ಎಂದರೂ ತಪ್ಪಾಗಲಾರದು. ಅಮೆರಿಕದ ನಿವೃತ್ತ ಸೈನಿಕ ಎಸ್.ಎಲ್.ಎ. ಮಾರ್ಷಲ್ ತಮ್ಮ ‘ಮೆನ್ ಎಗೈನಿಸ್ಟ್ ಫೈರ್’ ಪುಸ್ತಕದಲ್ಲಿ ಪೊಲೀಸ್ ಮತ್ತು ಸೈನಿಕರ ಮನಸ್ಥಿತಿಯನ್ನು ಕುರಿತು ವಿಶ್ಲೇಷಿಸಿದ್ದಾರೆ. ಯುದ್ಧ ಸಂದರ್ಭದಲ್ಲಿ ಸೈನಿಕರಿಗೂ ಸಹ ಶತ್ರು ಸಂಹಾರವೇ ಪ್ರಧಾನ ಧ್ಯೇಯವಾಗಿರುವುದಿಲ್ಲ ಎಂದು ಮಾರ್ಷಲ್ ಹೇಳುತ್ತಾರೆ. ‘‘ಸೈನಿಕರು ಸಹಜವಾಗಿ ಹಂತಕರಾಗಿರುವುದಿಲ್ಲ ಹಾಗಾಗಿ ತಮ್ಮ ವಿರುದ್ಧವೇ ಗುಂಡಿನ ದಾಳಿ ನಡೆಯುತ್ತಿದ್ದರೂ ಶತ್ರುಗಳ ವಿರುದ್ಧ ಗಾಳಿಯಲ್ಲಿ ಗುಂಡುಹಾರಿಸುವುದೇ ಹೆಚ್ಚು’’ ಎಂದು ಮಾರ್ಷಲ್ ಹೇಳುತ್ತಾರೆ. ವಿಯೆಟ್ನಾಂ ಯುದ್ಧದ ಸಂದರ್ಭದಲ್ಲಿಯೂ ಸಹ ಅಮೆರಿಕದ ಸೈನಿಕರು ಒಬ್ಬ ವಿಯಟ್ನಾಂ ಸೈನಿಕನ ಹತ್ಯೆಗೆ 50 ಸಾವಿರ ಗುಂಡುಗಳನ್ನು ಹಾರಿಸಿರುವುದಾಗಿ ಮಾರ್ಷಲ್ ತಮ್ಮ ಕೃತಿಯಲ್ಲಿ ಹೇಳುತ್ತಾರೆ.’’ (ಈ ಮಾಹಿತಿಗೆ ಆಧಾರ ಆ್ಯಮ್ನೆಸ್ಟಿ ಇಂಟರ್ ನ್ಯಾಷನಲ್ ವಕ್ತಾರ ಆಕರ್ ಪಟೇಲ್ ಅವರ ಲೇಖನ) ಇದೇ ಮನಸ್ಥಿತಿಯನ್ನು ಪೊಲೀಸರಲ್ಲೂ ಕಾಣಬಹುದು.

ಇಲ್ಲಿ ನಾಗರಿಕ ಸಮಾಜವನ್ನು ಕಾಡಬೇಕಿರುವ ಪ್ರಶ್ನೆ ಎನ್‌ಕೌಂಟರ್ ಮಾಡುವ ಪೊಲೀಸರ ಸ್ವಭಾವ ಅಥವಾ ವರ್ತನೆ ಅಥವಾ ಮನಸ್ಥಿತಿ ಅಲ್ಲ. ಭಾರತದ ಸುಶಿಕ್ಷಿತ ನಾಗರಿಕ ಸಮಾಜ ಎನ್‌ಕೌಂಟರ್ ಸಂಸ್ಕೃತಿಯನ್ನು ಸಂಭ್ರಮಿಸುತ್ತಿರುವ ರೀತಿ ಪ್ರಶ್ನಾರ್ಹವಾಗುತ್ತದೆ. ದಿಶಾ ಪ್ರಕರಣದಲ್ಲಿ ಅತ್ಯಾಚಾರಿಗಳ ಕ್ರೌರ್ಯದಿಂದ ಆಕ್ರೋಶಭರಿತರಾಗಿದ್ದ ಜನತೆಗೆ ಆ ರೀತಿಯ ಕ್ಷಿಪ್ರ ನ್ಯಾಯ ವಿತರಣೆ ಸ್ವಾಗತಾರ್ಹ ಎನಿಸಿದ್ದರೆ ಅದು ಒಂದು ನೆಲೆಯಲ್ಲಿ ಸಹಜ ಎನಿಸಬಹುದು. ತತ್‌ಕ್ಷಣದ ಪ್ರತಿಕ್ರಿಯೆಯಾಗಿ ಎನ್‌ಕೌಂಟರ್ ಸರಿ ಎನಿಸಿದ್ದರೂ ಅಚ್ಚರಿಯೇನಿಲ್ಲ. ಆದರೆ ಇದೇ ರೀತಿಯ ಎನ್‌ಕೌಂಟರ್ ಉನ್ನಾವೊದಲ್ಲಿ ಸಂತ್ರಸ್ತೆಯನ್ನು ಜೀವಂತವಾಗಿ ದಹಿಸಿದ ಕ್ರೂರಿಗಳ ಮೇಲೆ, ಚಿನ್ಮಯಾನಂದನ ಮೇಲೆ, ಉಚ್ಚಾಟಿತ ಬಿಜೆಪಿ ಶಾಸಕ ಸೆಂಗಾರ್ ವಿರುದ್ಧ ಏಕೆ ನಡೆಯುವುದಿಲ್ಲ ಎಂಬ ಪ್ರಶ್ನೆ ಉದ್ಭವಿಸಿದಾಗ ನಾವು ನಿರುತ್ತರರಾಗುತ್ತೇವೆ. ಈ ಪ್ರಶ್ನೆಯ ಹಿಂದೆ ಎನ್‌ಕೌಂಟರ್ ಸಂಸ್ಕೃತಿಯನ್ನು ಸಂಭ್ರಮಿಸುವ ಮನಸ್ಸುಗಳು ಇರುವುದಿಲ್ಲ ಆದರೆ ಎನ್‌ಕೌಂಟರ್ ಮಾಡುವುದರಲ್ಲೂ ತಾರತಮ್ಯ ಇರಬಹುದೇ ಎನ್ನುವ ಸಂದೇಹ ಸೂಕ್ಷ್ಮವಾಗಿ ಕಂಡುಬರುತ್ತದೆ. ದಲಿತ ಮಹಿಳೆಯರ ಮೇಲೆ ದಿನನಿತ್ಯ, ಕ್ಷಣಕ್ಕೊಮ್ಮೆ ಅತ್ಯಾಚಾರ, ದೌರ್ಜನ್ಯ ನಡೆಯುತ್ತಿರುವ ಸಂದರ್ಭದಲ್ಲಿ ಅಪರಾಧಿಗಳಿಗೆ ಶಿಕ್ಷೆಯಾಗುವ ಪ್ರಮಾಣ ಶೇ. 22ರಷ್ಟು ಮಾತ್ರವೇ ಇರುವ ಸಂದರ್ಭದಲ್ಲಿ ಇಂತಹ ಭಾವನಾತ್ಮಕ ಪ್ರತಿಕ್ರಿಯೆ ಸಹಜ ಎನಿಸಿಬಿಡುತ್ತದೆ.

  ಆದರೆ ಪ್ರಜಾತಂತ್ರ ವ್ಯವಸ್ಥೆಯ ಒಂದು ಸಾಂವಿಧಾನಿಕ ಅಂಗ ಸ್ಥಾಪಿತ ಕಾನೂನುಗಳನ್ನು ಸ್ವತಃ ಉಲ್ಲಂಘಿಸಿ, ಮಾನವ ಹಕ್ಕು ಸಂಹಿತೆಗಳ ವಿರುದ್ಧವಾಗಿ ವರ್ತಿಸುವುದು ನಾಗರಿಕ ಸಮಾಜಕ್ಕೆ ಒಳ್ಳೆಯದಲ್ಲ ಎನ್ನುವುದನ್ನು ನಾವು ಗಮನಿಸಬೇಕಿದೆ. ವಿಚಾರಣೆಗೊಳಪಡಿಸದೆ ಆರೋಪಿಗಳನ್ನು ಹತ್ಯೆ ಮಾಡುವುದು ನ್ಯಾಯಯುತವೂ ಅಲ್ಲ ನ್ಯಾಯ ಸಮ್ಮತವೂ ಅಲ್ಲ. ಯಾವುದೇ ನ್ಯಾಯಶಾಸ್ತ್ರ ಇದನ್ನು ಒಪ್ಪಲು ಸಾಧ್ಯವಿಲ್ಲ. ದುರಂತ ಎಂದರೆ ಭಾರತದಲ್ಲಿ ಇದು ಸಮ್ಮತಿ ಪಡೆಯುತ್ತಿದೆ. ರಾಜಕಾರಣಿಗಳು, ಹಿರಿಯ ಪೊಲೀಸ್ ಅಧಿಕಾರಿಗಳು, ಸುಶಿಕ್ಷಿತ ಪ್ರಜೆಗಳು, ನಾಗರಿಕ ಸಂಘಟನೆಗಳು, ಮಾಧ್ಯಮಗಳು ಎನ್‌ಕೌಂಟರ್ ಸಂಸ್ಕೃತಿಯನ್ನು ಸ್ವಾಗತಿಸುವುದೇ ಅಲ್ಲದೆ ವೈಭವೀಕರಿಸುತ್ತಿರುವುದನ್ನು ನೋಡುತ್ತಿದ್ದೇವೆ. ಈ ಪ್ರವೃತ್ತಿ ಎನ್‌ಕೌಂಟರ್‌ಗಿಂತಲೂ ಅಪಾಯಕಾರಿಯಾದದ್ದು. ಏಕೆಂದರೆ ಇದು ನಿರಪರಾಧಿಗಳಿಗೆ, ಅಪರಾಧ ಸಾಬೀತಾಗದೆ ಇರುವ ಆರೋಪಿಗಳಿಗೆ ಶಿಕ್ಷೆ ನೀಡುತ್ತದೆ. ಕಾನೂನು ಉಲ್ಲಂಘಿಸಿ ಹತ್ಯೆ ಮಾಡುವ ಅಪರಾಧಿಗಳಿಗೆ (ಎನ್‌ಕೌಂಟರ್ ಮಾಡುವವರಿಗೆ) ಮುಕ್ತ ಅವಕಾಶ ನೀಡುತ್ತದೆ. ಈ ವಿಕೃತ ಸಾಮಾಜಿಕ ವ್ಯವಸ್ಥೆಗೆ ಬುನಾದಿ ಹಾಕುವುದನ್ನು ನಾಗರಿಕ ಪ್ರಜ್ಞಾವಂತ ಸಮಾಜ ತಡೆಗಟ್ಟಬೇಕಿದೆ. ದೇಶದ ಸ್ಥಾಪಿತ ಕಾನೂನು ವ್ಯವಸ್ಥೆಯನ್ನು ಉಲ್ಲಂಘಿಸುವ ಯಾರೇ ಆದರೂ ಶಿಕ್ಷೆಗೊಳಗಾಗಬೇಕು ಎಂದಾದರೆ ನಕಲಿ ಎನ್‌ಕೌಂಟರ್ ನಡೆಸುವವರೂ ಶಿಕ್ಷೆಗೊಳಗಾಗಬೇಕಾಗುತ್ತದೆ. ಅನಿವಾರ್ಯ ಪರಿಸ್ಥಿತಿಯಲ್ಲಿ ಆತ್ಮರಕ್ಷಣೆಗಾಗಿ, ಭಯೋತ್ಪಾದಕರಿಂದ ರಕ್ಷಿಸಿಕೊಳ್ಳಲು ನಡೆಸುವ ಎನ್‌ಕೌಂಟರ್‌ಗಳನ್ನು ಹೊರತುಪಡಿಸಿ ಮತ್ತಾವುದೇ ರೀತಿಯ ಎನ್‌ಕೌಂಟರ್‌ಗಳನ್ನು ನಾಗರಿಕ ಸಮಾಜ ಒಪ್ಪಲಾಗುವುದಿಲ್ಲ. ಒಪ್ಪಿದರೆ ನಾವು ನಾಗರಿಕ ಪ್ರಜ್ಞಾವಂತ ಪ್ರಜೆಗಳು ಎಂದು ಹೇಳಿಕೊಳ್ಳುವ ನೈತಿಕತೆಯನ್ನು ನಾವು ಕಳೆದುಕೊಂಡುಬಿಡುತ್ತೇವೆ.

share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
ನಾ. ದಿವಾಕರ
ನಾ. ದಿವಾಕರ
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X