ಎನ್‌ಆರ್‌ಸಿ-ಪೌರತ್ವ ಕಾಯ್ದೆಯನ್ನು ಜೆಡಿಎಸ್ ತೀವ್ರವಾಗಿ ವಿರೋಧಿಸುತ್ತದೆ: ಮಾಜಿ ಸಿಎಂ ಕುಮಾರಸ್ವಾಮಿ
ಬೆಂಗಳೂರು, ಡಿ.18: ಸಂವಿಧಾನದ ಮೂಲ ಆಶಯಗಳಿಗೆ ವಿರುದ್ಧವಾಗಿರುವ ರಾಷ್ಟ್ರೀಯ ಪೌರತ್ವ ನೋಂದಣಿ(ಎನ್‌ಆರ್‌ಸಿ) ಹಾಗೂ ರಾಷ್ಟ್ರೀಯ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ)ಗೆ ಜೆಡಿಎಸ್ ಪಕ್ಷ ತೀವ್ರವಾಗಿ ವಿರೋಧ ವ್ಯಕ್ತಪಡಿಸುತ್ತದೆ. ಈಗಾಗಲೇ ನಮ್ಮ ಪಕ್ಷದ ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ, ರಾಜ್ಯಸಭೆಯಲ್ಲಿ ಇದನ್ನು ಖಂಡಿಸಿ ಮಾತನಾಡಿದ್ದಾರೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಬುಧವಾರ ನಗರದ ಶೇಷಾದ್ರಿಪುರಂನಲ್ಲಿರುವ ಜೆಡಿಎಸ್ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೇಂದ್ರದಲ್ಲಿ ಬಿಜೆಪಿ ಸರಕಾರ ಎರಡನೆ ಬಾರಿಗೆ ಅಧಿಕಾರಕ್ಕೆ ಬಂದ ನಂತರ, ದೇಶದಲ್ಲಿನ ಹಲವಾರು ಸಮಸ್ಯೆಗಳನ್ನು ಕಡೆಗಣಿಸಿ, ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವಂತಹ ಕೆಲಸಗಳನ್ನು ಮಾಡುತ್ತಿದೆ ಎಂದು ದೂರಿದರು.
ದೇಶದ ಸ್ವಾತಂತ್ರಕ್ಕಾಗಿ ಹೋರಾಡಿದ ನಾಯಕರ ಎದುರೇ ಬ್ರಿಟಿಷರು, ನಿಮಗೆ ಈ ದೇಶವನ್ನು ಆಳಲು ಸಾಮರ್ಥ್ಯವಿದೆಯೇ ಎಂದು ಅಪಹಾಸ್ಯ ಮಾಡುತ್ತಿದ್ದರಂತೆ. ಈ ದೇಶಕ್ಕೆ ತನ್ನದೇ ಆದ ಇತಿಹಾಸವಿದೆ. ಹಲವಾರು ಭಾಷೆ, ಹಲವಾರು ಸಂಸ್ಕೃತಿಗಳ ಸಮ್ಮಿಲನವಿದೆ ಎಂದು ಅವರು ಹೇಳಿದರು.
ಬಿಜೆಪಿ ಸರಕಾರವು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ 370ನೇ ವಿಧಿ ರದ್ದು, ಎನ್‌ಆರ್‌ಸಿ, ಸಿಎಎ ತರುತ್ತಿರುವುದರ ವಿರುದ್ಧ ದೇಶದ ಹಲವಾರು ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳು ಹೋರಾಟ ಮಾಡುತ್ತಿದ್ದಾರೆ. ಈ ವಿಧೇಯಕ ಮಂಡನೆ ಮಾಡಿದಾಗಲೇ ಈಶಾನ್ಯ ರಾಜ್ಯಗಳಲ್ಲಿ ಪ್ರತಿಭಟನೆ ಆರಂಭವಾಗಿತ್ತು. ವಿದ್ಯಾರ್ಥಿಗಳು ಸೇರಿದಂತೆ ಹಲವಾರು ಸಂಘಟನೆಗಳು ಈ ಕಾನೂನುಗಳಿಗೆ ವಿರೋಧ ವ್ಯಕ್ತಪಡಿಸಿವೆ ಎಂದು ಕುಮಾರಸ್ವಾಮಿ ಹೇಳಿದರು.
ರಾಜಕೀಯ ಪಕ್ಷಗಳು ದೇಶದಲ್ಲಿರುವ ಸಮಸ್ಯೆಗಳನ್ನು ಬಗೆಹರಿಸುವುದಕ್ಕಿಂತ ಹೆಚ್ಚಾಗಿ, ಸಮಸ್ಯೆಗಳನ್ನು ಮತ್ತಷ್ಟು ಹೆಚ್ಚಿಸುವ ವಾತಾವರಣವನ್ನು ನಾವು ಕಾಣುತ್ತಿದ್ದೇವೆ. ಈ ಪೌರತ್ವ ತಿದ್ದುಪಡಿ ಕಾಯ್ದೆ ಪರವಾಗಿ ಒಂದು ವರ್ಗವಿದ್ದು ತನ್ನನ್ನು ಹಿಂದೂಗಳ ರಕ್ಷಕ ಎಂದು ಬಿಂಬಿಸಿಕೊಳ್ಳುತ್ತಿದೆ. ಮತ್ತೊಂದೆಡೆ, ಮತ್ತೊಂದು ವರ್ಗ ಮುಸ್ಲಿಮ್ ಸಮಾಜದಲ್ಲಿ ಭಯದ ವಾತಾವರಣ ನಿರ್ಮಿಸಿ, ನಾವೇ ನಿಮ್ಮ ರಕ್ಷಕರು ಎಂಬ ಸಂದೇಶ ನೀಡಲು ಹೊರಟಿದೆ ಎಂದು ಅವರು ತಿಳಿಸಿದರು.
ದೇಶದಲ್ಲಿ ಅಶಾಂತಿ ಹಾಗೂ ಅಪನಂಬಿಕೆಯ ವಾತಾವರಣ ನಿರ್ಮಾಣವಾಗಿದೆ. ಅಕ್ರಮ ವಲಸೆ ಎಂಬುದು ಕೇವಲ ಭಾರತಕ್ಕೆ ಸೀಮಿತವಲ್ಲ. ಇಡೀ ವಿಶ್ವದಲ್ಲಿ ಚರ್ಚೆಗೆ ಗ್ರಾಸವಾದ ವಿಷಯವಾಗಿದೆ. ಬಾಂಗ್ಲಾದೇಶದ ವಿದೇಶಾಂಗ ಸಚಿವರು ಇತ್ತೀಚೆಗೆ ಹೇಳಿಕೆ ನೀಡಿ, ನಮ್ಮ ದೇಶದಿಂದ ಭಾರತಕ್ಕೆ ಹೋಗಿರುವವರನ್ನು ವಾಪಸ್ ಕಳುಹಿಸಿ ಅವರಿಗೆ ಇಲ್ಲಿ ಗೌರವಯುತವಾದ ಜೀವನವನ್ನು ನಾವು ಕಟ್ಟಿಕೊಡುತ್ತೇವೆ ಎಂದಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.
ಇತರ ದೇಶಗಳೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಳ್ಳಲು ಪ್ರಧಾನಿ ವಿದೇಶಗಳಿಗೆ ಭೇಟಿ ನೀಡುತ್ತಿರುವುದಾಗಿ ಹೇಳುತ್ತಾರೆ. ಈ ಎನ್‌ಆರ್‌ಸಿ ಹಾಗೂ ಸಿಎಎ ಮೂಲಕ ಅವರು ನಮ್ಮ ನೆರೆಹೊರೆಯ ದೇಶಗಳಿಗೆ ಕೊಡುತ್ತಿರುವ ಸಂದೇಶವಾದರೂ ಏನು? ಇಂತಹ ವಿವಾದಾತ್ಮಕವಾದ ಕಾನೂನುಗಳನ್ನು ಜಾರಿಗೆ ತರುವ ಅಗತ್ಯವಿತ್ತೆ? ಎಂದು ಅವರು ಪ್ರಶ್ನಿಸಿದರು.
ದೇಶ ವಿಭಜನೆ ಸಂದರ್ಭದಲ್ಲಿ 1947ರಲ್ಲಿ ಪಾಕಿಸ್ತಾನದ ಭಾಗದಲ್ಲಿದ್ದ 59 ಲಕ್ಷ ಹಿಂದೂಗಳ ಪೈಕಿ 50 ಲಕ್ಷ ಮಂದಿ ಭಾರತಕ್ಕೆ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಿದ್ದಲ್ಲಿ, ಈ ಪೈಕಿ ಎಷ್ಟು ಮಂದಿ ಹಿಂದೂಗಳಿಗೆ ಪೌರತ್ವ ನೀಡಲಾಗಿದೆ. ಅಸ್ಸಾಂನಲ್ಲಿ ಮೂರು ಸಾವಿರ ಜನರನ್ನು ಎನ್‌ಆರ್‌ಸಿ ನಂತರ ಕ್ಯಾಂಪ್‌ಗಳಲ್ಲಿ ಇಟ್ಟಿದ್ದು, 40 ಕೋಟಿ ರೂ.ಖರ್ಚು ಮಾಡಿದ್ದಾರೆ. ಇನ್ನುಳಿದ 13 ಲಕ್ಷ ಮಂದಿಗೆ ಎಷ್ಟು ಖರ್ಚು ಮಾಡಬೇಕಾಗುತ್ತದೆ ಎಂದು ಕುಮಾರಸ್ವಾಮಿ ಹೇಳಿದರು.
ಸಿಎಎ ಅನುಷ್ಠಾನಕ್ಕೆ ಇನ್ನೂ ಸಿದ್ಧತೆಗಳನ್ನು ಮಾಡಿಕೊಂಡಿಲ್ಲ ಎಂದು ಕೇಂದ್ರ ಸರಕಾರ ಸುಪ್ರೀಂ ಕೋರ್ಟ್ ಎದುರು ಹೇಳುತ್ತೆ. ಆದರೆ, ಇಲ್ಲಿ ನಮ್ಮ ಮುಖ್ಯಮಂತ್ರಿ ಜನವರಿಯಲ್ಲಿ ಸಿಎಎ ಅನುಷ್ಠಾನ ಮಾಡುವುದಾಗಿ ಹೇಳಿದ್ದಾರೆ. ಒಂದು ವಿಚಾರ ನ್ಯಾಯಾಲಯದ ಎದುರು ವಿಚಾರಣೆ ಹಂತದಲ್ಲಿರುವಾಗ ನಮ್ಮ ರಾಜ್ಯದಲ್ಲಿ ಯಾವ ರೀತಿಯಲ್ಲಿ ಈ ಕಾನೂನು ಅನುಷ್ಠಾನ ಸಾಧ್ಯ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಬಿ.ಎಂ.ಫಾರೂಕ್, ಝಫರುಲ್ಲಾಖಾನ್, ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ್ ಹಾಗೂ ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ ಉಪಸ್ಥಿತರಿದ್ದರು.