ಡಿ.28ರಂದು ಭಾರತ ರಕ್ಷಿಸಿ-ಸಂವಿಧಾನ ಉಳಿಸಿ ಯಾತ್ರೆ: ಈಶ್ವರ್ ಖಂಡ್ರೆ
ಬೆಂಗಳೂರು, ಡಿ.18: ಕಾಂಗ್ರೆಸ್ ಸಂಸ್ಥಾಪನಾ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲು ಡಿ.28ರಂದು ಕೇಂದ್ರ ಸರಕಾರದ ಜನ ವಿರೋಧಿ ನೀತಿಗಳ ಬಗ್ಗೆ ಜನಜಾಗೃತಿ ಮೂಡಿಸಲು ಬೆಂಗಳೂರಿನಲ್ಲಿ ಪಕ್ಷದ ವತಿಯಿಂದ ಭಾರತ ರಕ್ಷಿಸಿ, ಸಂವಿಧಾನ ಉಳಿಸಿ ಯಾತ್ರೆ ಹಮ್ಮಿಕೊಳ್ಳಲಾಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ತಿಳಿಸಿದರು.
ಬುಧವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ವಿಶ್ವವಿದ್ಯಾಲಯಗಳ ಆವರಣದೊಳಗೆ ಪೊಲೀಸರು ನುಗ್ಗಿ, ವಿದ್ಯಾರ್ಥಿಗಳಿಗೆ ಕಿರುಕುಳ ನೀಡುತ್ತಿದ್ದಾರೆ. ಜೊತೆಗೆ ಪ್ರತಿಪಕ್ಷಗಳ ಧ್ವನಿ ಅಡಗಿಸಲಾಗುತ್ತಿದೆ ಎಂದು ಕಿಡಿಗಾರಿದರು.
ಉನ್ನಾವ್ ಅತ್ಯಾಚಾರ ಪ್ರಕರಣದಲ್ಲಿ ಆಗಿದ್ದು ಏನು? ನೊಂದ ಸಂತ್ರಸ್ತೆಗೆ ಯಾವ ನ್ಯಾಯ ಸಿಕ್ಕಿತು. ಆಕೆ ದುರ್ಮರಣಕ್ಕೊಳಗಾಗಬೇಕಾಯಿತು. ಅವರ ತಂದೆ ಲಾಕಪ್‌ನಲ್ಲಿ ಕೊನೆಯುಸಿರೆಳೆಯುವಂತಾಯಿತು. ಇದರ ಹಿಂದೆ ಇದ್ದವರು ಬಿಜೆಪಿ ನಾಯಕರು. ಅವರ ವಿರುದ್ಧ ಯಾಕೆ ಕ್ರಮ ಕೈಗೊಳ್ಳಲಿಲ್ಲ. ಈ ಎಲ್ಲ ವಿಚಾರಗಳನ್ನು ಮುಂದಿಟ್ಟು ಕೊಂಡು ನಾವು ಹೋರಾಟ ಮಾಡುತ್ತೇವೆ ಎಂದು ಅವರು ತಿಳಿಸಿದರು.
ಮಹಾದಾಯಿ ಯೋಜನೆಗೆ ಕೇಂದ್ರ ಸರಕಾರ ತಡೆ ನೀಡಿರುವ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಕೇಂದ್ರ ಸರಕಾರ ಸ್ವಾರ್ಥ ರಾಜಕಾರಣ ಮಾಡುತ್ತಿದೆ. ಚುನಾವಣೆ ಇದ್ದಾಗ ಒಂದು, ಇಲ್ಲದಾಗ ಮತ್ತೊಂದು ಹೇಳಿಕೆ ನೀಡುವುದು. ಸಮಯಕ್ಕೆ ಸರಿಯಾಗಿ ಕಥೆ ಹೆಣೆಯುತ್ತಾರೆ. ಬೇಕಾದಾಗ ಎಲ್ಲ ವಿಚಾರವನ್ನು ತೆಗೆದುಕೊಳ್ಳುತ್ತದೆ. ಇಂತಹವನ್ನು ಸೃಷ್ಟಿಸುವುದರಲ್ಲಿ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ನಿಸ್ಸೀಮರು ಎಂದು ಈಶ್ವರ್ ಖಂಡ್ರೆ ಟೀಕಿಸಿದರು.
ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಕಳಪೆ ಸಾಧನೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಚುನಾವಣೆಯಲ್ಲಿ ಅಕ್ರಮಗಳು ನಡೆದವು. ಪಕ್ಷಾತೀತವಾಗಿ ಚುನಾವಣೆ ನಡೆಸಬೇಕಿತ್ತು. ಚುನಾವಣೆ ಘೋಷಣೆಯಾಗುತ್ತಿದ್ದಂತೆ ನೀತಿ ಸಂಹಿತೆ ಜಾರಿಗೆ ಬರುತ್ತಿತ್ತು. ಆದರೆ, ಈ ಬಾರಿ ಚುನಾವಣೆಯ ದಿನಾಂಕ ಘೋಷಣೆಯಾದರೂ ನೀತಿ ಸಂಹಿತೆ ಜಾರಿಯಾಗಿರಲಿಲ್ಲ ಎಂದು ಅವರು ಆರೋಪಿಸಿದರು.
ಆಡಳಿತ ಪಕ್ಷಕ್ಕೆ ಸಹಕಾರ ಮಾಡಲು ಇಂತಹ ಕೆಲಸ ಮಾಡಲಾಯಿತು. ಇದರ ಬಗ್ಗೆ ಚರ್ಚೆಯಾಗಬೇಕು. ಇವಿಎಂ ಬಗ್ಗೆ ದೇಶಾದ್ಯಂತ ಚರ್ಚೆ ನಡೆಯುತ್ತಿದೆ. ಇವಿಎಂ ಬದಲಾಯಿಸಿ, ಬ್ಯಾಲೆಟ್ ಪೇಪರ್ ತನ್ನಿ ಎಂಬುದು ನಮ್ಮ ಪಕ್ಷದ ಆಗ್ರಹವಾಗಿದೆ ಎಂದು ಈಶ್ವರ್ ಖಂಡ್ರೆ ಹೇಳಿದರು.
ಇಂದಿರಾ ಕ್ಯಾಂಟೀನ್‌ಗೆ ಮರು ನಾಮಕರಣ ಮಾಡಲು ಮುಂದಾಗಿರುವ ರಾಜ್ಯ ಸರಕಾರದ ನಡೆ ಖಂಡನೀಯ. ಬಿಜೆಪಿಯವರು ಬಡವರ ವಿರೋಧಿಗಳು, ಬಡವರ ಪರವಾಗಿ ಯೋಜನೆ ತಂದವರು ನಾವು. ಅದನ್ನು ಮುಚ್ಚೋಕೆ ಈಗ ಇಂತಹ ಪ್ರಯತ್ನ ನಡೆಸುತ್ತಿದ್ದಾರೆ. ಸಂಕುಚಿತ ಮನೋಭಾವನೆ ಮೊದಲು ಬಿಡಿ, ಮಹರ್ಷಿ ವಾಲ್ಮೀಕಿ ಹೆಸರನ್ನು ಹೊಸ ಯೋಜನೆಗೆ ಇಡಿ. ಇರುವ ಹೆಸರನ್ನು ಬದಲಾಯಿಸುವುದು ಬೇಡ ಎಂದು ಈಶ್ವರ್ ಖಂಡ್ರೆ ಆಗ್ರಹಿಸಿದರು.
ಕೇಂದ್ರ ಸರಕಾರ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತರುತ್ತಿದೆ. ಧರ್ಮದ ಆಧಾರದಲ್ಲಿ ಜನರನ್ನು ಒಡೆಯುತ್ತಿದೆ. ಅಧಿಕಾರಕ್ಕೆ ಅಂಟಿಕೊಳ್ಳಲು ಈ ಕೆಲಸ ಮಾಡುತ್ತಿದೆ. ದೇಶದ ಏಕತೆ ಸಮಗ್ರತೆ ಕಾಪಾಡಲು ಈ ಕೂಡಲೇ ಪೌರತ್ವ ಕಾಯ್ದೆ ಬಗ್ಗೆ ರದ್ದುಪಡಿಸಬೇಕು. ಆಧಾರ ರಹಿತವಾದ ಹೇಳಿಕೆಗಳನ್ನು ಪ್ರಧಾನಿ ನೀಡುತ್ತಿದ್ದಾರೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ದೂರಿದರು.
ರಾಮಮಂದಿರಕ್ಕೆ ವಾಲ್ಮೀಕಿ ಹೆಸರನ್ನು ಇಡಿ
ಅಯೋಧ್ಯೆಯಲ್ಲಿ ನಿರ್ಮಿಸುವ ರಾಮ ಮಂದಿರಕ್ಕೆ ಮಹರ್ಷಿ ವಾಲ್ಮೀಕಿ ಹೆಸರನ್ನು ನಾಮಕರಣ ಮಾಡಿ. ವಾಲ್ಮೀಕಿ ಸಮುದಾಯಕ್ಕೆ ಶೇ.7.5ರಷ್ಟು ಮೀಸಲಾತಿ ಕೊಟ್ಟಿದ್ದೀರಾ? ಯಾವುದಾದರೂ ವಿಶ್ವವಿದ್ಯಾಲಯಕ್ಕೆ ವಾಲ್ಮೀಕಿ ಹೆಸರು ನಾಮಕರಣ ಮಾಡಿದ್ದೀರಾ? ಇದು ನಿಮ್ಮಿಂದ ಸಾಧ್ಯವೇ ಬಿಜೆಪಿ ನಾಯಕರೇ? ಪಾಪ ವಾಲ್ಮೀಕಿ ಮುಖಂಡರಾದ ರಮೇಶ್ ಜಾರಕಿಹೊಳಿ ಹಾಗೂ ಶ್ರೀರಾಮುಲು ನಡುವೆ ಜಗಳ ಹಚ್ಚಿದ್ದೀರಾ. ಮೊದಲು ಅದನ್ನು ಬಿಡಿ, ನ್ಯಾಯ ಒದಗಿಸಿ.
-ವಿ.ಎಸ್.ಉಗ್ರಪ್ಪ, ಮಾಜಿ ಸಂಸದ