2018ನೆ ಸಾಲಿನ ಕನ್ನಡ ಪುಸ್ತಕ ಪ್ರಾಧಿಕಾರದ ವಾರ್ಷಿಕ ಪ್ರಶಸ್ತಿಗಳ ಪ್ರಕಟ
ಕಲಬುರಗಿ ಮಾನವಿಕ ಅಧ್ಯಯನ ಪ್ರಶಸ್ತಿಗೆ ಡಾ.ಎಂ.ಚಿದಾನಂದಮೂರ್ತಿ ಆಯ್ಕೆ

ಡಾ.ಎಂ.ಚಿದಾನಂದಮೂರ್ತಿ
ಬೆಂಗಳೂರು, ಡಿ.18: ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ನೀಡಲಾಗುವ ವಾರ್ಷಿಕ ಪ್ರಶಸ್ತಿಗಳ ಆಯ್ಕೆ ಸಮಿತಿ 2018ನೆ ಸಾಲಿನ ವಿವಿಧ ಪ್ರಶಸ್ತಿ ಆಯ್ಕೆ ಪ್ರಕ್ರಿಯೆ ಮುಗಿಸಿದ್ದು, ಅಭಿನವ ಪ್ರಕಾಶನಕ್ಕೆ ಅತ್ಯುತ್ತಮ ಪ್ರಕಾಶನ ಪ್ರಶಸ್ತಿ ಲಭಿಸಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಎಂ.ಎನ್.ನಂದೀಶ್ ಹಂಚೆ ತಿಳಿಸಿದ್ದಾರೆ.
ಮಂಗಳವಾರ ಹಾಗೂ ಬುಧವಾರ ನಡೆದ ಆಯ್ಕೆ ಸಮಿತಿಯು ಪ್ರಾಧಿಕಾರದಿಂದ ನೀಡಲಾಗುವ ಇತರ ಪ್ರಶಸ್ತಿಗಳಾದ ಡಾ.ಎಂ.ಎಂ.ಕಲಬುರಗಿ ಮಾನವಿಕ ಅಧ್ಯಯನ ಪ್ರಶಸ್ತಿಗೆ ಡಾ.ಎಂ.ಚಿದಾನಂದಮೂರ್ತಿ ಅವರನ್ನು ಆಯ್ಕೆ ಮಾಡಿದೆ ಎಂದು ಅವರು ಹೇಳಿದ್ದಾರೆ.
ಡಾ.ಜಿ.ಪಿ.ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿಗೆ ಕಾರ್ಕಳದ ಪ್ರೊ.ಎಂ.ರಾಮಚಂದ್ರ ಅವರನ್ನು ಆಯ್ಕೆ ಮಾಡಿದೆ. ಹಾಗೆಯೇ, ಡಾ.ಅನುಪಮಾ ನಿರಂಜನ ವೈದ್ಯಕೀಯ ಹಾಗೂ ವಿಜ್ಞಾನ ಸಾಹಿತ್ಯ ಪ್ರಶಸ್ತಿಗೆ ಡಾ.ವಿಜಯಲಕ್ಷ್ಮಿ ಬಾಳೇಕುಂದ್ರಿ ಅವರನ್ನು ಆಯ್ಕೆ ಮಾಡಿದೆ ಎಂದು ನಂದೀಶ್ ಹಂಚೆ ಹೇಳಿದ್ದಾರೆ.
ಇದಲ್ಲದೆ, ಪ್ರಾಧಿಕಾರದ ವತಿಯಿಂದ ನೀಡಲಾಗುವ ಪುಸ್ತಕ ಸೊಗಸು ಹಾಗೂ ಮುದ್ರಣ ಸೊಗಸು ಬಹುಮಾನಗಳಿಗೆ ಆಯ್ಕೆ ಮಾಡಲಾಗಿದೆ. ಮೊದಲನೆ ಬಹುಮಾನವನ್ನು ಬಿ.ಜಯರಾಮ ಸಮಕಾಲೀನ ದೃಶ್ಯಕಲೆಯ ಸಾಕ್ಷಿ ಪ್ರಜ್ಞೆ ಪುಸ್ತಕ ಪಡೆದುಕೊಂಡಿದೆ. ಇದನ್ನು ಬೆಂಗಳೂರು ಆರ್ಟ್ ಫೌಂಡೇಷನ್ ಪ್ರಕಟಿಸಿದೆ ಎಂದು ಅವರು ತಿಳಿಸಿದ್ದಾರೆ.
ಎರಡನೇ ಬಹುಮಾನವನ್ನು ಬಳ್ಳಾರಿಯ ಪಲ್ಲವ ಪ್ರಕಾಶನದ ಪ್ರಕಟಣೆ ‘ಕಾಡುಜೇಡ ಮತ್ತು ಬಾತುಕೋಳಿ ಹೂ’ ಕೃತಿ ಪಡೆದುಕೊಂಡಿದೆ. ಮೂರನೇ ಬಹುಮಾನವನ್ನು ಯಾಜಿ ಪ್ರಕಾಶನದ ‘ಜಾಡಮಾಲಿಯ ಜೀವ ಕೇಳುವುದಿಲ್ಲ’ ಕೃತಿ ಪಡಿದಿದೆ ಎಂದು ನಂದೀಶ್ ಹಂಚೆ ತಿಳಿಸಿದ್ದಾರೆ.
ಮಕ್ಕಳ ಸೊಗಸು ಬಹುಮಾನಕ್ಕೆ ಹೊನ್ನಾವರದ ಪ್ರಣತಿ ಪ್ರಕಾಶನದ ಉಪನಿಷತ್ತು ಕೃತಿ ಆಯ್ಕೆಯಾಗಿದೆ. ಮುಖಪುಟ ಚಿತ್ರಕ್ಕಾಗಿ ಚಂದ್ರನಾಥ ಆಚಾರ್ಯ ಅವರನ್ನು ಆಯ್ಕೆ ಮಾಡಲಾಗಿದೆ. ಮುಖಪುಟ ವಿನ್ಯಾಸಕ್ಕಾಗಿ ಎಂ.ಎಸ್.ಪ್ರಕಾಶ್ಬಾಬು ಅವರನ್ನು ಆಯ್ಕೆ ಮಾಡಿದೆ. ಇದಲ್ಲದೆ, ಅತ್ಯುತ್ತಮ ಮುದ್ರಣಕ್ಕಾಗಿ ನೀಡಲಾಗುವ ಪ್ರಶಸ್ತಿಗಾಗಿ ಬೆಂಗಳೂರಿನ ಲಕ್ಷ್ಮಿ ಮುದ್ರಣಾಲಯವನ್ನು ಆಯ್ಕೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.
ಈ ಎಲ್ಲ ಪ್ರಶಸ್ತಿಗಳನ್ನು ಜನವರಿ 8ರಂದು ಬೆಂಗಳೂರಿನ ನಯನ ರಂಗಮಂದಿರದಲ್ಲಿ ನಡೆಯುವ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿತರಿಸಲಾಗುವುದು ಎಂದು ನಂದೀಶ್ ಹಂಚೆ ತಿಳಿಸಿದ್ದಾರೆ. ಬಾಕ್ಸ್......
ಅತ್ಯುತ್ತಮ ಪ್ರಕಾಶನ ಪ್ರಶಸ್ತಿ-ಒಂದು ಲಕ್ಷ ರೂ.
ಡಾ.ಎಂ.ಎಂ.ಕಲಬುರಗಿ ಮಾನವಿಕ ಅಧ್ಯಯನ ಪ್ರಶಸ್ತಿ-75 ಸಾವಿರ ರೂ.
ಡಾ.ಜಿ.ಪಿ.ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿ-50 ಸಾವಿರ ರೂ.
ಡಾ.ಅನುಪಮಾ ನಿರಂಜನ ವೈದ್ಯಕೀಯ ಹಾಗೂ ವಿಜ್ಞಾನ ಸಾಹಿತ್ಯ ಪ್ರಶಸ್ತಿ-25 ಸಾವಿರ ರೂ.







