ಫಡ್ನವೀಸ್ ತಿರುಚಿದ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿದ್ದಾರೆ: ಪೃಥ್ವಿರಾಜ್ ಚೌಹಾಣ್
ಮುಂಬೈ,ಡಿ.18: ಹತಾಶಗೊಂಡಿರುವ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಅಲಿಗಡ ಮುಸ್ಲಿಮ್ ವಿವಿ (ಅಮು) ವಿದ್ಯಾರ್ಥಿಗಳ ಪ್ರತಿಭಟನೆಯ ‘ತಿರುಚಿದ ವಿಡಿಯೊ’ಗಳನ್ನು ಆನ್ ಲೈನ್ ನಲ್ಲಿ ಪೋಸ್ಟ್ ಮಾಡುತ್ತಿದ್ದಾರೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಪೃಥ್ವಿರಾಜ ಚೌಹಾಣ್ ಅವರು ಬುಧವಾರ ಆರೋಪಿಸಿದ್ದಾರೆ.
ಮಾಜಿ ಗೃಹಸಚಿವರೂ ಜವಾಬ್ದಾರಿಯುತ ವಿಪಕ್ಷ ನಾಯಕರೂ ಆಗಿರುವ ಫಡ್ನವೀಸ್ ಅವರು ದ್ವೇಷಪೂರ್ಣ ಮಾಹಿತಿಗಳನ್ನು ಹರಡುವುದರಿಂದ ದೂರವಿರಬೇಕು ಎಂದು ಟ್ವೀಟ್ ನಲ್ಲಿ ತಿಳಿಸಿರುವ ಚೌಹಾಣ್,ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ತಮ್ಮ ಪ್ರತಿಭಟನೆ ಸಂದರ್ಭದಲ್ಲಿ ಅಮು ವಿದ್ಯಾರ್ಥಿಗಳು ಹಿಂದುಗಳ ವಿರುದ್ಧ ಘೋಷಣೆಗಳನ್ನು ಕೂಗಿರಲಿಲ್ಲ ಎಂದು ಹೇಳಿರುವ ಆಲ್ಟ್ ನ್ಯೂಸ್‌ನ ವರದಿಯನ್ನು ಟ್ಯಾಗ್ ಮಾಡಿದ್ದಾರೆ.
ಕಳೆದೆರಡು ದಿನಗಳಲ್ಲಿ ಫಡ್ನವೀಸ್ ಸೇರಿದಂತೆ ಹಲವಾರು ಬಿಜೆಪಿ ನಾಯಕರು ಈ ವೀಡಿಯೊಗಳನ್ನು ಟ್ವೀಟಿಸಿದ್ದರು.
ಫಡ್ನವೀಸ್ ಅವರು ಹತಾಶೆಯಿಂದ ತಿರುಚಲ್ಪಟ್ಟ ವಿಡಿಯೋಗಳನ್ನು ಹರಡುತ್ತಿರುವುದು ವಿಷಾದನೀಯವಾಗಿದೆ. ಅವರಾಗಲೀ ಅವರ ಕಚೇರಿಯಾಗಲೀ ವೀಡಿಯೊಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕು ಎಂದು ಅವರು ಹೇಳಿದ್ದಾರೆ.