ಅಖಿಲ ಭಾರತ ಅಂತರ ವಿವಿ ಕಬಡ್ಡಿ ಟೂರ್ನಿ: ಮಂಗಳೂರು ವಿವಿ-ವಾರಣಾಸಿ ಎಂಜಿಕೆವಿಪಿ ಪಂದ್ಯ ರೋಚಕ ಟೈ

ಉಡುಪಿ, ಡಿ.18: ಮೂರು ದಿನಗಳ ಹಿಂದಷ್ಟೇ ತೆಂಕನಿಡಿಯೂರು ಸರಕಾರಿ ಕಾಲೇಜಿನಲ್ಲಿ ನಡೆದ ದಕ್ಷಿಣ ವಲಯ ಅಂತರ ವಿವಿ ಕಬಡ್ಡಿ ಟೂರ್ನಿಯಲ್ಲಿ ಚಾಂಪಿಯನ್ ಕಿರೀಟವನ್ನು ಧರಿಸಿ ಬೀಗುತ್ತಿರುವ ಆತಿಥೇಯ ಮಂಗಳೂರು ವಿವಿ ಕಬಡ್ಡಿ ತಂಡ, ಇಂದು ನಗರದ ಪೂರ್ಣಪ್ರಜ್ಞ ಕಾಲೇಜು ಮೈದಾನದಲ್ಲಿ ಪ್ರಾರಂಭಗೊಂಡ ಅಖಿಲ ಭಾರತ ಅಂತರ ವಿವಿ ಪುರುಷರ ಕಬಡ್ಡಿ ಚಾಂಪಿಯನ್‌ಷಿಪ್‌ನ ತನ್ನ ಆರಂಭಿಕ ಪಂದ್ಯದಲ್ಲಿ ಎದುರಾಳಿ ವಾರಣಾಸಿಯ ಎ.ಜಿ.ಕೆ.ವಿ.ಪಿ. ವಿರುದ್ಧ ರೋಮಾಂಚಕಾರಿ ಟೈ ಸಾಧಿಸುವಲ್ಲಿ ಯಶಸ್ವಿಯಾಯಿತು.
ಭಾರತೀಯ ವಿವಿಗಳ ಸಂಘದ ಆಶ್ರಯದಲ್ಲಿ ಮಂಗಳೂರು ವಿವಿಯ ದೈಹಿಕ ಶಿಕ್ಷಣ ವಿಭಾಗ ಹಾಗೂ ಪೂರ್ಣಪ್ರಜ್ಞ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರಗಳ ಸಹಯೋಗದೊಂದಿಗೆ ಇಂದಿನಿಂದ ನಾಲ್ಕು ದಿನಗಳ ಕಾಲ ನಡೆಯುವ ಈ ಟೂರ್ನಿಗೆ ಅದಮಾರು ಮಠಾಧೀಶರಾದ ಶ್ರೀವಿಶ್ವಪ್ರಿಯ ತೀರ್ಥ ಶ್ರೀಪಾದರು ಚಾಲನೆ ನೀಡಿದ್ದರು.
ದೇಶದ ನಾಲ್ಕು ವಲಯಗಳಲ್ಲಿ ಅಗ್ರಸ್ಥಾನ ಪಡೆದಿರುವ ತಲಾ ನಾಲ್ಕು ತಂಡಗಳು ಸೇರಿದಂತೆ ಒಟ್ಟು 16 ಬಲಿಷ್ಠ ತಂಡಗಳು ನಾಲ್ಕು ದಿನಗಳ ಈ ಟೂರ್ನಿಯಲ್ಲಿ ಸ್ಪರ್ಧಿಸುತ್ತಿವೆ. ದಕ್ಷಿಣ ವಲಯ ಚಾಂಪಿಯನ್ ಮಂಗಳೂರು ವಿವಿ ಬಿ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಮೊದಲ ಪಂದ್ಯದಲ್ಲಿ ಪೂರ್ವ ವಲಯದಲ್ಲಿ ರನ್ನರ್ ಅಫ್ ಆಗಿರುವ ವಾರಣಸಿ ತಂಡವನ್ನು ಎದುರಿಸಿತ್ತು.
ಕೋರ್ಟ್ ನಂ.2ರಲ್ಲಿ ನಡೆದ ಈ ಪಂದ್ಯ ಆರಂಭದಿಂದಲೇ ಅತ್ಯಂತ ರೋಚಕವಾಗಿ ನಡೆಯಿತು. ಮೇಲುಗೈಗಾಗಿ ಎರಡೂ ತಂಡಗಳು ತುರುಸಿನ ಸ್ಪರ್ಧೆ ನಡೆಸಿದವು. ವಿಜಯಲಕ್ಷ್ಮೀ ಎರಡೂ ತಂಡಗಳತ್ತ ಸರಿದಾಡಿ ಮದ್ಯಂತರದ ವೇಳೆಗೆ ವಾರಣಾಸಿ ತಂಡ ಎರಡು ಅಂಕಗಳ ಮುನ್ನಡೆಯಲ್ಲಿತ್ತು. ಆದರೆ ನಂತರದ ಆಟದಲ್ಲಿ ಆತಿಥೇಯ ತಂಡ ಜಿದ್ದಾಜಿದ್ದಿನ ಹೋರಾಟ ನೀಡಿ ಅಂತಿಮವಾಗಿ ಸಮಬಲದ ಸ್ಕೋರ್‌ನೊಂದಿಗೆ ಪಂದ್ಯ ಟೈನಲ್ಲಿ ಮುಕ್ತಾಯ ಗೊಂಡಿತು. ಈ ಮೂಲಕ ಎರಡೂ ತಂಡಗಳು ತಲಾ ಒಂದು ಅಂಕ ಗಳಿಸಿದವು.
ಕೋರ್ಟ್ ನಂ.1ರಲ್ಲಿ ನಡೆದ ಪಂದ್ಯದಲ್ಲಿ ಉತ್ತರ ವಲಯ ಚಾಂಪಿಯನ್ ರೋಹ್ಟಕ್‌ನ ಎಂ.ಡಿ.ವಿವಿ, ಪಶ್ಚಿಮ ವಲಯದ ರನ್ನರ್ ಅಪ್ ಕೊಲ್ಹಾಪುರದ ಶಿವಾಜಿ ವಿವಿಯನ್ನು 46-29 ಅಂಕಗಳ ಅಂತರದಿಂದ ಏಕಪಕ್ಷೀಯವಾಗಿ ಹಿಮ್ಮೆಟ್ಟಿಸಿತು. ದಿನದ ಮೂರನೇ ಪಂದ್ಯದಲ್ಲಿ ಉತ್ತರ ವಲಯದ ರನ್ನರ್ ಅಪ್ ಅಮೃತಸರದ ಜಿ.ಎನ್.ಡಿ. ವಿವಿ ತಂಡ, ಪಶ್ಚಿಮ ವಲಯದ ಚಾಂಪಿಯನ್ ತಂಡವಾದ ಕೋಟಾದ ಕೋಟಾ ವಿವಿಯನ್ನು 29 ಅಂಕಗಳ ಅಂತರದಿಂದ (56-27)ದಿಂದ ಭರ್ಜರಿಯಾಗಿ ಹಿಮ್ಮೆಟ್ಟಿಸಿ ಪೂರ್ಣ ಎರಡು ಅಂಕ ಸಂಪಾದಿಸಿತು.
ನಾಲ್ಕನೇ ಪಂದ್ಯದಲ್ಲಿ ಪೂರ್ವ ವಲಯ ಚಾಂಪಿಯನ್ ಉತ್ತರ ಪ್ರದೇಶ ರಾಜ್ಯ ಜುನಾಪುರದ ವಿ.ಬಿ.ಎಸ್. ವಿವಿ ತಂಡ, ದಕ್ಷಿಣ ವಲಯದ ರನ್ನರ್‌ಅಪ್ ತಂಡವಾದ ಚೆನ್ನೈನ ವೆಲ್ಸ್ ಇನ್‌ಸ್ಟಿಟ್ಯೂಟ್ ಆಫ್ ಸಾಯನ್ಸ್, ಟೆಕ್ನಾಲಜಿ ಎಂಡ್ ಅಡ್ವಾನ್ಸ್‌ಡ್ ಸ್ಟಡೀಸ್ ತಂಡವನ್ನು 54-24 ಅಂಕಗಳ ಅಂತರದಿಂದ ಪರಾಭವಗೊಳಿಸಿತು.
ಟೂರ್ನಿಗೆ ಚಾಲನೆ: ಉಡುಪಿಯಲ್ಲಿ ಪ್ರಪ್ರಥಮ ಬಾರಿಗೆ ನಡೆಯುತ್ತಿರುವ ಅಖಿಲ ಭಾರತ ಮಟ್ಟದ ಅಂತರ ವಿವಿ ಟೂರ್ನಿಯನ್ನು ಅದಮಾರು ಮಠಾಧೀಶರಾದ ಶ್ರೀವಿಶ್ವಪ್ರಿಯ ತೀರ್ಥ ಶ್ರೀಪಾದರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಆರೋಗ್ಯವಂತ ದೇಹಕ್ಕೆ ಕ್ರೀಡೆ ಅಗತ್ಯವಾಗಿದ್ದು,ದೇಶೀಯ ಕ್ರೀಡೆಯಾದ ಕಬಡ್ಡಿ ಎಲ್ಲಕ್ಕಿಂತಲೂ ಅತ್ಯುತ್ತಮವಾಗಿದೆ ಎಂದರು.
ಮಂಗಳೂರು ವಿವಿ ಕುಲಪತಿಗಳಾದ ಪ್ರೊ.ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಕೆ.ರಘುಪತಿ ಭಟ್, ಉದ್ಯಮಿ ಮುನಿಯಾಲು ಉದಯ ಕುಮಾರ್ ಶೆಟ್ಟಿ, ಭಾರತೀಯ ಕಬಡ್ಡಿ ತಂಡದ ಉಪನಾಯಕ, ಪಂಜಾಬಿನ ಮಣಿಂದರ್ ಸಿಂಗ್,ಕಾಲೇಜು ಆಡಳಿತ ಸಮಿತಿಯ ಗೌರವ ಕಾರ್ಯದರ್ಶಿ ಡಾ.ಜಿ.ಎಸ್.ಚಂದ್ರಶೇಖರ್, ಖಜಾಂಚಿ ಪ್ರದೀಪ್‌ಕುಮಾರ್ ಉಪಸ್ಥಿತರಿದ್ದರು.
ಮಂಗಳೂರು ವಿವಿ ದೈಹಿಕ ಶಿಕ್ಷಣ ನಿರ್ದೇಶಕ ಹಾಗೂ ಸಂಘಟನಾ ಕಾರ್ಯದರ್ಶಿ ಡಾ. ಕಿಶೋರ್ ಕುಮಾರ್ ಸಿ.ಕೆ. ಅತಿಥಿಗಳನ್ನು ಸ್ವಾಗತಿಸಿದರೆ, ಕಾಲೇಜಿನ ಪ್ರಾಂಶುಪಾಲರಾದ ಡಾ.ರಾಘವೇಂದ್ರ ಎ. ವಂದಿಸಿದರು. ಅಪೂರ್ವ ಒಸ್ಟಾ ಹಾಗೂ ಅನುಪಮಾ ನಾಯಕ್ ಕಾರ್ಯಕ್ರಮ ನಿರೂಪಿಸಿದರು.








