ಭರವಸೆ ಈಡೇರಿಸಲು 24 ಗಂಟೆಯೂ ಕೆಲಸ: ಬೊರಿಸ್ ಜಾನ್ಸನ್

ಲಂಡನ್, ಡಿ. 18: ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಬೇರ್ಪಟ್ಟ (ಬ್ರೆಕ್ಸಿಟ್) ನಂತರದ ಪರಿವರ್ತನಾ ಅವಧಿಯು 2020ರ ಆಚೆಗೆ ಹೋಗುವುದಿಲ್ಲ ಎಂದು ಆಶ್ವಾಸನೆ ನೀಡುವ ಮಸೂದೆಯೊಂದನ್ನು ಜಾರಿಗೊಳಿಸುವುದಾಗಿ ಬ್ರಿಟನ್ ಸರಕಾರ ಮಂಗಳವಾರ ಹೇಳಿದೆ.
ಜನವರಿ 31ರ ವೇಳೆಗೆ ಬ್ರಿಟನನ್ನು ಐರೋಪ್ಯ ಒಕ್ಕೂಟದಿಂದ ಹೊರತರುವ ಆಶ್ವಾಸನೆಯ ಮೂಲಕ, ಗುರುವಾರ ನಡೆದ ಸಂಸದೀಯ ಚುನಾವಣೆಯಲ್ಲಿ ಪ್ರಧಾನಿ ಬೊರಿಸ್ ಜಾನ್ಸನ್ ಬೃಹತ್ ವಿಜಯವನ್ನು ಗಳಿಸಿದ್ದಾರೆ.
ಬ್ರೆಕ್ಸಿಟ್ ಬಳಿಕ 2020 ಡಿಸೆಂಬರ್ 31ರವರೆಗೆ ಪರಿವರ್ತನಾ ಅವಧಿ ಚಾಲ್ತಿಯಲ್ಲಿರುತ್ತದೆ. ಈ ಅವಧಿಯಲ್ಲಿ ಬ್ರಿಟನ್ ಮತ್ತು ಐರೋಪ್ಯ ಒಕ್ಕೂಟಗಳು ನೂತನ ಆರ್ಥಿಕ ಮತ್ತು ಭದ್ರತಾ ಭಾಗೀದಾರಿಕೆಗಳನ್ನು ಮಾಡಿಕೊಳ್ಳಬಹುದಾಗಿದೆ.
ಪರಿವರ್ತನಾ ಅವಧಿಯನ್ನು ವಿಸ್ತರಿಸುವ ಅವಕಾಶ ಬ್ರಿಟನ್‌ಗಿದೆ. ಆದರೆ ಅದನ್ನು ಜಾನ್ಸನ್ ತಿರಸ್ಕರಿಸಿದ್ದು, ಮಸೂದೆಯಲ್ಲಿ 2020ರ ದಿನಾಂಕವನ್ನು ನಮೂದಿಸಲು ಉದ್ದೇಶಿಸಿದ್ದಾರೆ.
ಚುನಾವಣಾ ವಿಜಯದ ಬಳಿಕ, ಮಂಗಳವಾರ ತನ್ನ ಮೊದಲ ಸಂಪುಟ ಸಭೆ ನಡೆಸಿದ ಜಾನ್ಸನ್, ತನ್ನ ಚುನಾವಣಾ ಭರವಸೆಗಳನ್ನು ಈಡೇರಿಸುವುದಕ್ಕಾಗಿ ‘ದಿನದ 24 ಗಂಟೆಯೂ’ ಕೆಲಸ ಮಾಡುವುದಾಗಿ ಪಣತೊಟ್ಟಿದ್ದಾರೆ.





