ಪ್ರತಿಭಟನೆ ನಡೆಸುವುದಾದರೆ ಉತ್ತರ ಭಾರತಕ್ಕೆ ಹೋಗಲಿ: ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್
ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರ

ಬೆಂಗಳೂರು, ಡಿ.18: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಗರದಲ್ಲಿ ಪ್ರತಿಭಟನೆ ನಡೆಸಲು ಯಾರಿಗೂ ಅವಕಾಶ ನೀಡಿಲ್ಲ. ಒಂದು ವೇಳೆ ಅನುಮತಿ ಇಲ್ಲದೆ ಪ್ರತಿಭಟನೆ ನಡೆಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿಭಟನೆಯ ನೆಪದಲ್ಲಿ ಕಾನೂನು-ಸುವ್ಯವಸ್ಥೆಗೆ ಭಂಗವಾದರೆ ಸುಮ್ಮನಿರುವುದಿಲ್ಲ. ಪ್ರತಿಭಟನೆ ನಡೆಸುವುದಾದರೆ ಉತ್ತರ ಭಾರತದಲ್ಲಿಯೇ ಹೋಗಿ ಭಾಗವಹಿಸಲಿ. ನಗರದಲ್ಲಿ ಯಾರು ಪ್ರತಿಭಟನೆ ಮಾಡಲು ಅವಕಾಶ ನೀಡಿಲ್ಲವೆಂದು ತಿಳಿಸಿದರು.
ಪೌರತ್ವ ಕಾಯ್ದೆ ಕುರಿತು ಪ್ರತಿಭಟನೆಗೆ ಅನುಮತಿ ನೀಡುವಂತೆ ಈಗಾಗಲೇ ಸಾಕಷ್ಟು ಅರ್ಜಿಗಳು ಬಂದಿದ್ದು, ಯಾರೊಬ್ಬರಿಗೂ ಪ್ರತಿಭಟನೆಗೆ ಅವಕಾಶ ನೀಡಲಿಲ್ಲ. ಎಲ್ಲ ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಸಾಮಾಜಿಕ ಜಾಲತಾಣಗಳ ಮೇಲೆ ಪೌರತ್ವ ಕಾಯ್ದೆ ವಿರುದ್ಧ ಪ್ರಚೋದನಕಾರಿಯಾಗಿ ಪೋಸ್ಟ್ ಮಾಡುವವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಪ್ರತಿಭಟನೆ ಮಾಡುವ ಪ್ರತಿಯೊಬ್ಬರ ವಿಡಿಯೋ ಚಿತ್ರೀಕರಣ ಮಾಡುವಂತೆ ಇಲಾಖೆಗೆ ಈಗಾಗಲೇ ಸಂದೇಶ ರವಾನಿಸಲಾಗಿದೆ. ಈಗಾಗಲೇ ನಗರದ ಎರಡು ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದು, ಅವರ ವಿರುದ್ಧ ಕ್ರಮ ಹಾಗೂ ಕಾಲೇಜು ಆಡಳಿತ ಮಂಡಳಿಗೆ ನೋಟಿಸ್ ನೀಡಲು ಪೊಲೀಸ್ ಇಲಾಖೆ ತಯಾರಿ ನಡೆಸಿದೆ ಎಂದು ಅವರು ಮಾಹಿತಿ ನೀಡಿದರು.







