ಹ್ಯಾಟ್ರಿಕ್ ಮೂಲಕ ಹೊಸ ದಾಖಲೆ ಬರೆದ ಕುಲದೀಪ್

ವಿಶಾಖಪಟ್ಟಣ, ಡಿ.18: ಭಾರತದ ಸ್ಪಿನ್ ಬೌಲರ್ ಕುಲದೀಪ್ ಯಾದವ್ ಬುಧವಾರ ನಡೆದ ವೆಸ್ಟ್‌ಇಂಡೀಸ್ ವಿರುದ್ಧದ ಎರಡನೇ ಅಂತರ್‌ರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದು ಮಿಂಚಿದರು.
ವೆಸ್ಟ್‌ಇಂಡೀಸ್ ಇನಿಂಗ್ಸ್‌ನ 33ನೇ ಓವರ್‌ನಲ್ಲಿ ಸತತ ಮೂರು ಎಸೆತಗಳಲ್ಲಿ ಹೋಪ್(78), ಜೇಸನ್ ಹೋಲ್ಡರ್(11)ಹಾಗೂ ಜೋಸೆಫ್(0) ವಿಕೆಟ್‌ಗಳನ್ನು ಉರುಳಿಸಿದ ಕುಲದೀಪ್ ಹ್ಯಾಟ್ರಿಕ್ ವಿಕೆಟ್ ಪೂರೈಸಿದರು. ಕುಲದೀಪ್ ಏಕದಿನ ಕ್ರಿಕೆಟ್‌ನಲ್ಲಿ ಎರಡನೇ ಬಾರಿ ಹ್ಯಾಟ್ರಿಕ್ ವಿಕೆಟ್ ಪಡೆದ ಭಾರತದ ಮೊದಲ ಬೌಲರ್ ಎಂಬ ಸಾಧನೆ ಮಾಡಿದರು. ತಲಾ 2 ಬಾರಿ ಏಕದಿನ ಕ್ರಿಕೆಟ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದಿರುವ ವಸೀಂ ಅಕ್ರಂ, ಸಕ್ಲೇನ್ ಮುಷ್ತಾಕ್ , ಚಾಮಿಂಡ ವಾಸ್ ಹಾಗೂ ಟ್ರೆಂಟ್ ಬೌಲ್ಟ್ ದಾಖಲೆ ಸರಿಗಟ್ಟಿದರು. ಮೂರು ಬಾರಿ ಹ್ಯ್ರಾಟ್ರಿಕ್ ಪಡೆದಿರುವ ಶ್ರೀಲಂಕಾದ ಮಾಲಿಂಗ ಮೊದಲ ಸ್ಥಾನದಲ್ಲಿದ್ದಾರೆ.ಕುಲದೀಪ್ ಅಂಡರ್-19 ಕ್ರಿಕೆಟ್ ಪಂದ್ಯದಲ್ಲೂ ಹ್ಯಾಟ್ರಿಕ್ ಪಡೆದಿದ್ದರು.
5 ವಿಕೆಟ್‌ಗಳ ನಷ್ಟಕ್ಕೆ 210 ರನ್ ಗಳಿಸಿ ಸುಸ್ಥಿತಿಯಲ್ಲಿದ್ದ ವಿಂಡೀಸ್ ಕುಲದೀಪ್ ಸ್ಪಿನ್ ಮೋಡಿಗೆ ತತ್ತರಿಸಿ 32.4, 5 ಹಾಗೂ 6ನೇ ಎಸೆತದಲ್ಲಿ ಮೂರು ವಿಕೆಟ್‌ಗಳನ್ನು ಕಳೆದುಕೊಂಡು ದಿಢೀರ್ ಕುಸಿತ ಕಂಡಿತು.





