ಬಜೆಟ್‌ನಲ್ಲಿ ನೀರಾವರಿ, ಕೃಷಿ ಚಟುವಟಿಕೆಗಳಿಗೆ ಆದ್ಯತೆ: ಮುಖ್ಯಮಂತ್ರಿ ಯಡಿಯೂರಪ್ಪ
ಮಲಪ್ರಭಾ ಕಾಲುವೆ ಆಧುನೀಕರಣ ಕಾಮಗಾರಿಗೆ ಭೂಮಿಪೂಜೆ, ಏತನೀರಾವರಿ ಯೋಜನೆ ಲೋಕಾರ್ಪಣೆ

ಧಾರವಾಡ, ಡಿ. 18: ಆಯವ್ಯಯದಲ್ಲಿ ನೀರಾವರಿ ಯೋಜನೆಗಳು, ಕೃಷಿ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಉದ್ದೇಶವನ್ನು ಹೊಂದಲಾಗಿದೆ. ಪ್ರಧಾನ ಮಂತ್ರಿ ಕೃಷಿ ಸಮ್ಮಾನ ಯೋಜನೆಯಡಿ ಪ್ರತಿ ರೈತನಿಗೆ ಆರ್ಥಿಕ ನೆರವು ನೀಡಲು ಸರಕಾರ ಬದ್ಧ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಇಂದಿಲ್ಲಿ ಘೋಷಿಸಿದ್ದಾರೆ.
ಬುಧವಾರ ನವಲಗುಂದ ತಾಲೂಕಿನ ಅಮರಗೋಳ ಕ್ರಾಸ್ ಬಳಿ ಜಲಸಂಪನ್ಮೂಲ ಇಲಾಖೆ ಏರ್ಪಡಿಸಿದ್ದ ಸಮಾರಂಭದಲ್ಲಿ, ಮಲಪ್ರಭಾ ಯೋಜನೆ ಮುಖ್ಯ ಕಾಲುವೆ ಆಧುನೀಕರಣ ಕಾಮಗಾರಿಗಳ ಭೂಮಿ ಪೂಜೆ, ಅಮರಗೋಳ, ಗೊಬ್ಬರಗುಂಪಿ ಏತನೀರಾವರಿ ಯೋಜನೆಗಳ ಲೋಕಾರ್ಪಣೆ ಸೇರಿ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.
1 ಸಾವಿರ ಕೋಟಿ ರೂ.ಗಳ ವೆಚ್ಚದಲ್ಲಿ ಮಲಪ್ರಭಾ ಯೋಜನೆ ಕಾಮಗಾರಿಗಳು ಪ್ರಾರಂಭವಾಗಿವೆ. ಜನರ ತೆರಿಗೆ ಹಣದಲ್ಲಿ ಕೈಗೊಳ್ಳಲಾಗುತ್ತಿರುವ ಈ ಯೋಜನೆಯ ಪ್ರತಿಯೊಂದು ಪೈಸೆಯೂ ಸದ್ಬಳಕೆಯಾಗಬೇಕು. ಸಾರ್ವಜನಿಕ ಹಣ ಬಳಕೆ ವಿಷಯದಲ್ಲಿ ಅಧಿಕಾರಿಗಳು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದು ಅವರು ಸೂಚಿಸಿದರು.
ನವಲಗುಂದ, ನರಗುಂದ, ರೋಣ, ಸವದತ್ತಿ, ರಾಮದುರ್ಗ, ಬಾದಾಮಿ ಕ್ಷೇತ್ರಗಳ ರೈತ ಸಮುದಾಯಕ್ಕೆ ಈ ಯೋಜನೆ ವರದಾನ. ಅಮರಗೋಳ-ಗೊಬ್ಬರಗುಂಪಿ ಏತ ನೀರಾವರಿ ಯೋಜನೆಗಳಿಂದ 9,808 ಎಕ್ರೆ ಭೂಮಿಗೆ ನೀರಾವರಿ ಸೌಲಭ್ಯ ಸಿಗಲಿದೆ. ನವಲಗುಂದ ತಾಲೂಕಿನ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತೇನೆ. ಈ ತಾಲೂಕನ್ನು ಮಾದರಿಯನ್ನಾಗಿಸಲಾಗುವುದು ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಮಾತನಾಡಿ, ಕಳಸಾ ಬಂಡೂರಿ ಮಹಾದಾಯಿ ತಿರುವು ಯೋಜನೆ ಸೇರಿ ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸುವ ಸಂಕಲ್ಪ ಯಡಿಯೂರಪ್ಪನವರಲ್ಲಿದೆ. ನಮ್ಮ ಭಾಗದ ಸಮಸ್ಯೆಗಳ ಕುರಿತು ಕೇಂದ್ರ ಸರಕಾರದ ಗಮನಸೆಳೆದು, ರಾಷ್ಟ್ರೀಯ ನೇತಾರರ ಮನವೊಲಿಸಿ ಪರಿಹಾರ ಕಂಡುಕೊಳ್ಳುವ ಛಾತಿ ಮುಖ್ಯಮಂತ್ರಿಗಳಿಗಿದೆ ಎಂದರು.
ಮುಂಬರುವ ದಿನಗಳಲ್ಲಿ ಧಾರವಾಡ ಜಿಲ್ಲೆಯ ಎಲ್ಲ ಗ್ರಾಮಗಳಿಗೆ ಮಲಪ್ರಭಾ ಜಲಾಶಯದಿಂದ ಕುಡಿಯುವ ನೀರು ಪೂರೈಸಲು 1,450 ಕೋಟಿ ರೂ.ಗಳ ವಿಸ್ತೃತ ಯೋಜನೆ ವರದಿ ಸರಕಾರದ ಮುಂದಿದೆ. ಸಿಎಂ ಈ ಯೋಜನೆ ಪರಿಶೀಲಿಸಿ ಒಪ್ಪಿಗೆ ನೀಡಲಿದ್ದಾರೆ. ಹೈ.ಕ. ಎಂದು ಕರೆಯುತ್ತಿದ್ದ ಕಲಬುರ್ಗಿ ವಿಭಾಗದ ಪ್ರದೇಶವನ್ನು ಕಲ್ಯಾಣ ಕರ್ನಾಟಕ ಎಂದು ಮರುನಾಮಕರಣ ಮಾಡಿ ಆ ಭಾಗದ ಅಭಿವೃದ್ಧಿಗೆ ಪ್ರತಿವರ್ಷ ಸಾವಿರಾರು ಕೋಟಿ ರೂ.ನೀಡುತ್ತಿದ್ದಾರೆ ಎಂದರು.
ಸಚಿವ ಸಿ.ಸಿ.ಪಾಟೀಲ ಮಾತನಾಡಿ, ಜನಪರ ಕಾಳಜಿಯ ಸಿಎಂ ನಾಯಕತ್ವದಲ್ಲಿ ನಾಡು ಅಭಿವೃದ್ಧಿಯಲ್ಲಿ ಮುನ್ನಡೆ ಸಾಧಿಸುತ್ತಿದೆ. ಪ್ರವಾಹದ ವೇಳೆ ಜನರ ಸಂಕಷ್ಟಗಳಿಗೆ ಸರಕಾರ ಸ್ಪಂದಿಸಿದ ರೀತಿ ಮೆಚ್ಚಿ ಉಪಚುನಾವಣೆಯಲ್ಲಿ ಸರಕಾರಕ್ಕೆ ಜನ ಬೆಂಬಲ ನೀಡಿದ್ದಾರೆ. ಕಳಸಾ ಬಂಡೂರಿ ವ್ಯಾಜ್ಯವನ್ನು ಪರಿಹರಿಸಿ, ಮಲಪ್ರಭೆಗೆ ಮಹಾದಾಯಿ ನೀರು ತರಲು ಸರಕಾರ ಬದ್ಧ ಎಂದರು.
ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಮಾತನಾಡಿ, ಯಡಿಯೂರಪ್ಪನವರು ಈ ಹಿಂದೆ ಸಿಎಂ ಆಗಿದ್ದ ಅವಧಿಯಲ್ಲಿ ಈ ಭಾಗದ ರೈತರ ಮಹತ್ವಾಕಾಂಕ್ಷೆಯ ಈ ಯೋಜನೆಗೆ ಅನುಮೋದನೆ ನೀಡಿದ್ದರು. ಅವರಿಂದ ಯೋಜನೆ ಲೋಕಾರ್ಪಣೆ ಆಗುತ್ತಿರುವುದು ಸಂತಸ ತಂದಿದೆ ಎಂದರು.
ಶಾಸಕ ಆನಂದ ಮಾಮನಿ ಮಾತನಾಡಿ, ಮಲಪ್ರಭಾ ಜಲಾಶಯ ನಿರ್ಮಾಣದ ಬಳಿಕ ಕಾಲುವೆಗಳ ಆಧುನೀಕರಣ ಕಾಮಗಾರಿಗಳು ಆಗಿರಲಿಲ್ಲ. ಇದೀಗ ಕಾಲುವೆಗಳ ಕಾಯಕಲ್ಪಕ್ಕೆ 2,420 ಕೋಟಿ ರೂ.ಅಗತ್ಯವಿದೆ. ಸರಕಾರ ಈಗಾಗಲೇ 1 ಸಾವಿರ ಕೋಟಿ ರೂ. ಒದಗಿಸಿದೆ. ಸವದತ್ತಿ ತಾಲೂಕಿನ ಸತ್ತಿಗೇರಿ ಏತನೀರಾವರಿ ಯೋಜನೆಗೆ ಆರ್ಥಿಕ ನೆರವು ನೀಡಿ ಯರಗಟ್ಟಿ ಭಾಗದ ರೈತರ ಬಾಳಿಗೆ ಬೆಳಕಾಗಬೇಕು ಎಂದು ಮನವಿ ಮಾಡಿದರು.
ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಶಾಸಕರಾದ ಅಮೃತ ದೇಸಾಯಿ, ಸಿ.ಎಂ.ನಿಂಬಣ್ಣವರ, ಪರಿಷತ್ ಸದಸ್ಯರಾದ ಎಸ್.ವಿ.ಸಂಕನೂರ, ಪ್ರದೀಪ ಶೆಟ್ಟರ್, ಕಾನೂನು ಸಲಹೆಗಾರ ಮೋಹನ ಲಿಂಬಿಕಾಯಿ ಸೇರಿದಂತೆ ಹಿರಿಯ ಅಧಿಕಾರಿಗಳು ಹಾಜರಿದ್ದರು.
ನೇಗಿಲ ಸನ್ಮಾನ: ‘ಮುಖ್ಯಮಂತ್ರಿ ಯಡಿಯೂರಪ್ಪಅವರಿಗೆ ಅಮರಗೋಳ ಗ್ರಾಮಸ್ಥರು, ಕಳಸಾ ಬಂಡೂರಿ ಹೋರಾಟಗಾರರು ಹಾಗೂ ವೀರಶೈವ ಸಮಾಜದ ಮುಖಂಡರು ನೇಗಿಲು ನೀಡಿ, ಹಸಿರು ಶಾಲು ಹೊದಿಸಿ, ನೆನಪಿನ ಕಾಣಿಕೆ ನೀಡಿ ಗೌರವಿಸಿದರು’







