ಡಿಕೆಶಿ ತಾಯಿಯ ವಿಚಾರಣೆ ಕನಕಪುರ ನಿವಾಸದಲ್ಲಿ ನಡೆಸಿ: ಈಡಿಗೆ ಹೈಕೋರ್ಟ್ ಆದೇಶ

ಗೌರಮ್ಮ
ಬೆಂಗಳೂರು, ಡಿ.18: ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಅವರ ತಾಯಿ ಗೌರಮ್ಮ ಅವರು ಅಕ್ರಮ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್ಎ) ಅಡಿ ಜಾರಿ ನಿರ್ದೇಶನಾಲಯ(ಈ.ಡಿ) ಸಮನ್ಸ್ ಜಾರಿಗೊಳಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್ ಗೌರಮ್ಮ ಅವರ ನಿವಾಸದಲ್ಲಿಯೇ ವಿಚಾರಣೆ ನಡೆಸಲು ಈಡಿ ಗೆ ಆದೇಶಿಸಿದೆ.
ಈ ಕುರಿತು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ.ನರೇಂದರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ. ಕನಕಪುರದ ನಿವಾಸದಲ್ಲಿಯೇ ಈಡಿ ಅವರು ಕನ್ನಡದಲ್ಲಿಯೇ ವಿಚಾರಣೆ ನಡೆಸಬೇಕು. ಈ ವೇಳೆ ರಾಮನಗರ ಎಸ್ಪಿ ಅವರು ಎಲ್ಲ ರೀತಿಯ ಭದ್ರತೆ ಒದಗಿಸಬೇಕೆಂದು ನ್ಯಾಯಪೀಠವು ಸೂಚನೆ ನೀಡಿದೆ.
ವಿಚಾರಣೆಯ ಆಡಿಯೋ ರೆಕಾರ್ಡಿಂಗ್ ಮಾಡಬೇಕು. ಈಡಿ ವಿಚಾರಣೆ ವೇಳೆ ಅಡ್ಡಿಪಡಿಸುವಂತಹ ಯಾವುದೇ ಕೆಲಸವಾಗಬಾರದು. ಹಾಗೂ ಯಾವುದೇ ಪ್ರತಿಭಟನೆ ಕೈಗೊಳ್ಳಬಾರದೆಂದು ನ್ಯಾಯಪೀಠವು ಸೂಚನೆ ನೀಡಿದೆ. ಗೌರಮ್ಮ ಅವರಿಗೆ 85 ವರ್ಷ ವಯಸ್ಸಾಗಿದ್ದು, ಇಲ್ಲಿಯೇ ವಿಚಾರಣೆ ನಡೆಸಬೇಕೆಂದು ಅರ್ಜಿದಾರರ ಪರ ವಕೀಲರು ಪೀಠಕ್ಕೆ ಮನವಿ ಮಾಡಿದರು. ವಕೀಲರ ವಾದ ಆಲಿಸಿದ ನ್ಯಾಯಪೀಠವು ಗೌರಮ್ಮ ಅವರ ನಿವಾಸದಲ್ಲಿಯೇ ವಿಚಾರಣೆ ನಡೆಸಲು ಈಡಿಗೆ ಆದೇಶ ನೀಡಿದೆ.





