‘ಭಾರತದ ಅಂತ್ಯ’: ಖುಷ್ವಂತ್ ಸಿಂಗ್ ಕೃತಿಯ ಸಾಲುಗಳ ಮೂಲಕ ಗಂಗೂಲಿ ಪುತ್ರಿಯ ಪ್ರತಿಕ್ರಿಯೆ
ಪೌರತ್ವ ಕಾಯ್ದೆ

facebook.com/SanaGangulyOfficialFans
ಹೊಸದಿಲ್ಲಿ, ಡಿ.18: ಕೇಂದ್ರ ಸರಕಾರ ಜಾರಿಗೆ ತಂದಿರುವ ಹೊಸ ಪೌರತ್ವ ಕಾಯ್ದೆಯ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಸೆಲೆಬ್ರಿಟಿಗಳ ಸಾಲಿಗೆ ಈಗ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿಯ ಪುತ್ರಿ ಸನಾ ಗಂಗೂಲಿ ಸೇರ್ಪಡೆಯಾಗಿದ್ದಾರೆ.
2003ರಲ್ಲಿ ಪ್ರಕಟವಾದ ಖುಷ್ವಂತ್ ಸಿಂಗ್ ಅವರ ‘ದಿ ಎಂಡ್ ಆಫ್ ಇಂಡಿಯಾ’ (ಭಾರತದ ಅಂತ್ಯ) ಎಂಬ ಕೃತಿಯ ಒಂದು ಸಾಲನ್ನು ಉಲ್ಲೇಖಿಸಿ ಇನ್ ಸ್ಟಾಗ್ರಾಮ್ನಲ್ಲಿ ತನ್ನ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಪ್ರತೀ ಫ್ಯಾಶಿಸ್ಟ್ ಆಡಳಿತವು ಅಭಿವೃದ್ಧಿ ಹೊಂದಲು ಸಮುದಾಯ ಮತ್ತು ಗುಂಪುಗಳನ್ನು ಕೆಟ್ಟದಾಗಿ ಬಿಂಬಿಸುವ ಅಗತ್ಯವಿದೆ. ಒಂದು ಅಥವಾ ಎರಡು ಗುಂಪುಗಳೊಂದಿಗೆ ಅದು ಪ್ರಾರಂಭವಾಗುತ್ತದೆ. ಆದರೆ ಅದು ಅಲ್ಲಿಗೇ ಕೊನೆಯಾಗುವುದಿಲ್ಲ. ದ್ವೇಷದ ಆಧಾರದಲ್ಲಿ ರಚನೆಯಾಗಿರುವ ಆಂದೋಲನವು ನಿರಂತರ ಭಯ ಮತ್ತು ಕಲಹಗಳನ್ನು ಸೃಷ್ಟಿಸುವ ಮೂಲಕ ಮಾತ್ರ ಉಳಿದುಕೊಳ್ಳಲು ಸಾಧ್ಯ ಎಂದು ಕೃತಿಯಲ್ಲಿ ಹೇಳಲಾಗಿದೆ. ಈ ಸಾಲನ್ನು ಸನಾ ಉಲ್ಲೇಖಿಸಿದ್ದಾರೆ.
ತಾವು ಮುಸ್ಲಿಮ್ ಅಥವಾ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರದ ಕಾರಣದಿಂದ ಈಗ ನಿರಾಳವಾಗಿದ್ದೇವೆ ಎಂದು ಭಾವಿಸುವವರು ಮೂರ್ಖರ ಸ್ವರ್ಗದಲ್ಲಿ ಬದುಕುತ್ತಿದ್ದಾರೆ. ಸಂಘ ಪರಿವಾರ ಈಗಾಗಲೇ ಎಡಪಂಥೀಯ ಇತಿಹಾಸಕಾರರನ್ನು ಮತ್ತು ‘ಪಾಶ್ಚಾತ್ಯೀಕರಣಗೊಂಡಿರುವ’ ಯುವಜನತೆಯನ್ನು ಗುರಿಯಾಗಿಸಿಕೊಂಡಿದೆ. ನಾಳೆ ಸ್ಕರ್ಟ್ ಧರಿಸುವ ಮಹಿಳೆಯರನ್ನು, ಮಾಂಸ ತಿನ್ನುವವರನ್ನು, ಮದ್ಯಪಾನ ಮಾಡುವವರನ್ನು, ವಿದೇಶಿ ಸಿನೆಮ ನೋಡುವವರನ್ನು, ದೇವಸ್ಥಾನದ ವಾರ್ಷಿಕ ಜಾತ್ರೋತ್ಸವಕ್ಕೆ ಹೋಗದವರನ್ನು, ದಂತ ಮಂಜನದ ಬದಲು ಟೂತ್ಪೇಸ್ಟ್ ಬಳಸುವವರನ್ನು, ಆಯುರ್ವೇದದ ಬದಲು ಅಲೋಪಥಿ ವೈದ್ಯರನ್ನು ಭೇಟಿಯಾಗುವವರನ್ನು, ಜೈಶ್ರೀರಾಂ ಎನ್ನುವ ಬದಲು ಮುತ್ತು ಕೊಡುವ ಅಥವಾ ಅಪ್ಪಿಕೊಳ್ಳುವವರನ್ನು ಇವರು ಗುರಿಯಾಗಿಸಿಕೊಳ್ಳಬಹುದು. ಯಾರು ಕೂಡಾ ಸುರಕ್ಷಿತರಲ್ಲ. ದೇಶವನ್ನು ಜೀವಂತವಾಗಿರಿಸಬೇಕಿದ್ದರೆ ನಾವಿದನ್ನು ಅರ್ಥ ಮಾಡಿಕೊಳ್ಳಬೇಕು ಎಂಬ ಸಾಲುಗಳನ್ನು ಸನಾ ಹಂಚಿಕೊಂಡಿದ್ದಾರೆ.







